ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ದಿನ ರಾಜ್ಯದಲ್ಲಿ ಗೋದ್ರಾ ರೀತಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ವಿವಾದಿತ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಪೊಲೀಸರು ತನ್ನ ವಿಚಾರಣೆಗೆ ಮುಂದಾದಾಗ ಹರಿಪ್ರಸಾದ್ ಸಿಟ್ಟಾದರು. ಸರಕಾರದ ನಡೆಯ ವಿರುದ್ಧ ಕಿಡಿಕಾರಿದರು. “ನನಗೆ ವಿವಿಐಪಿ ಟ್ರೀಟ್‌ಮೆಂಟ್ ಬೇಕಿಲ್ಲ, ಬಂಧಿಸಿ’ ಎಂದು ಹರಿಹಾಯ್ದರು ಎನ್ನಲಾಗಿದೆ.
ಹರಿಪ್ರಸಾದ್ ವಿವಾದಿತ ಹೇಳಿಕೆಯ ಬೆನ್ನಲ್ಲೇ ರಾಜ್ಯಪಾಲರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಹೇಳಿಕೆಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸುವಂತೆ ಕೇಳಿದ್ದರು. ಹರಿಪ್ರಸಾದ್ ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ಇರುವುದನ್ನು ಅರಿತು ಶುಕ್ರವಾರ ಅಲ್ಲಿಗೆ ಸಿಸಿಬಿ ತಂಡ ಭೇಟಿ ನೀಡಿತ್ತು. ತಾವು ಹಿಂದೆ ಕೊಟ್ಟ ಹೇಳಿಕೆ ಕುರಿತು ಹೆಚ್ಚಿನ ಮಾಹಿತಿ ಕೊಡಲು ಹರಿಪ್ರಸಾದ್ ನಿರಾಕರಿಸಿದರು. ಆದರೆ ಸ್ವಲ್ಪ ಕಾಲ ಸಿಸಿಬಿ ಪೊಲೀಸರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಅನಂತರ ಸಿಸಿಬಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿ ಏನು ಮಾಡಬೇಕೆಂದು ತೋಚದೆ ವಾಪಸಾಗಿದ್ದಾರೆ.
ಕಾಂಗ್ರೆಸ್ ಸರಕಾರ ಎಂದುಕೊಂಡಿದ್ದೆ
ತಮ್ಮ ವಿಚಾರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹರಿಪ್ರಸಾದ್, “ರಾಜ್ಯದಲ್ಲಿರು ವುದು ಕಾಂಗ್ರೆಸ್ ಸರಕಾರ ಎಂದುಕೊಂಡಿದ್ದೆ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿದೆ. ನನ್ನ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು? ಸರಕಾರದ ಜವಾಬ್ದಾರಿ ಏನು ಎಂದು ತಿಳಿಸಿದ್ದೇನೆ. ನನ್ನ ಸಲಹೆಯನ್ನು ಬೇರೆ ರೀತಿ ಅರ್ಥೈಸಿಕೊಂಡರೆ ನಾನು ಜವಾಬ್ದಾರನಲ್ಲ. ಹೀಗಾಗಿದೆ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಮುಂದೇನಾಗುತ್ತದೆಯೋ ನೋಡೋಣ’ ಎಂದು ತಿಳಿಸಿದ್ದಾರೆ.
“ಅಯೋಧ್ಯೆ ಯಾತ್ರಾರ್ಥಿಗಳಿಗೆ ರಕ್ಷಣೆ ನೀಡಬೇಕೆಂದು ಹೇಳಿಕೆ ನೀಡಿದ್ದೆ. ಅದರ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಬಂದಿದ್ದರು. ಅಕಸ್ಮಾತ್ ನನ್ನ ಹೇಳಿಕೆ ಅಪರಾಧ ಆಗಿದ್ದರೆ ಪೊಲೀಸ್ ಠಾಣೆಗೆ ಕರೆದು ಬಂಧಿಸಿ ಹೇಳಿಕೆ ಪಡೆಯಿರಿ. ಕೇವಲ ಹೇಳಿಕೆ ಮಾತ್ರವಲ್ಲ, ಮಂಪರು ಪರೀಕ್ಷೆಗೆ ತಯಾರಿದ್ದೇನೆ. ನನ್ನ ಜತೆಗೆ ಬಿಜೆಪಿ ರಾಜ್ಯಾದ್ಯಕ್ಷರೂ ಬಂಧನಕ್ಕೆ ಒಳಗಾಗಬೇಕೆಂದು ಹೇಳಿ ಕಳುಹಿಸಿದ್ದೇನೆ. ಹೇಳಿಕೆ ಕೊಟ್ಟು 20-25 ದಿನ ಆಗಿದೆ. ಯಾರಾದರೂ ಪ್ರಚೋದನಕಾರಿ ಹೇಳಿಕೆ ಕೊಟ್ಟಾಗ ತತ್‌ಕ್ಷಣ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ತೀರ್ಪಿದೆ. ಕಲ್ಲಡ್ಕ ಪ್ರಭಾಕರ ಭಟ್, ಉತ್ತರ ಕನ್ನಡ ಸಂಸದರ ಮೇಲೆ ಯಾವುದೇ ಕ್ರಮ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.