ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಭಟ್ಕಳದಲ್ಲಿ ಕೋಮುಗಲಭೆ ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಹೆಚ್. ನಾಯ್ಕ ಟೀಕಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಕಾಳ ವೈದ್ಯ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾದ ನಂತರ ಹಲವಾರು ಅಭಿವೃದ್ಧಿ ಚಟುವಟಿಕೆ ಮಾಡಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ ಎಂದರು.
ಹರಿ ಪ್ರಕಾಶ್ ಕೋಣೆಮನೆ ಪತ್ರಕರ್ತರಾಗಿ ಜವಬ್ದಾರಿಯುತ ಸ್ಥಾನದಲ್ಲಿದ್ದವರು. ಆದರೆ ಭಟ್ಕಳ ತೆಂಗಿನಗುಂಡಿಯಲ್ಲಿ ನಡೆದ ಪ್ರಕರಣದಲ್ಲಿ ಮಂಕಾಳ ವೈದ್ಯರ ಹಸ್ತಕ್ಷೇಪವಿದೆ ಎಂದು ಸುಳ್ಳು ಆರೋಪ ಮಾಡಿದ್ದು, ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಯಲ್ಲಾಪುರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆಗ ಪರೇಶ್ ಮೇಸ್ತಾ ಸಾವಿನ ಬಗ್ಗೆ ಪುಸ್ತಕ ಬರೆದು ಜನರಿಗೆ ಸುಳ್ಳನ್ನ ಬಿತ್ತರಿಸಲು ಹೊರಟಿದ್ದರು. ಆದರೆ ಇವರದ್ದು ಪಕ್ಷದ ಆಡಳಿತದಲ್ಲಿ ಇರುವ ಸಿಬಿಐ ಪರೇಶ್ ಮೇಸ್ತಾ ಪ್ರಕರಣ ಸಂಭಂದ ಹರಿ ಪ್ರಕಾಶ್ ಕೋಣೆಮನೆ ತನ್ನ ಪುಸ್ತಕದಲ್ಲಿ ಮಾಡಿದ್ದ ಆರೋಪಗಳು ಸತ್ಯವಲ್ಲ, ಪರೇಶ್ ಮೇಸ್ತಾನ ಸಾವು ನೀರಲ್ಲಿ ಬಿದ್ದು ಸಾವನ್ನಪ್ಪಿದ್ದು ಎಂದು ಹೇಳಿತ್ತು. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಹರಿಪ್ರಕಾಶ ಕೋಣೆಮನೆಯನ್ನ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದ ಸಿ.ಟಿ.ರವಿಯನ್ನು ಬಂಧಿಸಿ, ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಬೇಕು ಎಂದು ಆರ್.ಎಚ್.ನಾಯ್ಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬಿಜೆಪಿಯ ನಾಯಕರು ಸದ್ಯ ಕೋಮುಗಲಭೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಅಪಾದಿಸಿದರು.
ವಿಠೋಬ ಅಂಗಡಿಕೇರಿ, ಜಗದೀಶ್ ನಾಯ್ಕ, ನಾರಾಯಣ ಬಂಡಾರಿ, ಶ್ರೀಕಾಂತ್ ವಿ. ನಾಯ್ಕ ಪತ್ರಿಕಾಗೋಷ್ಠಿ ಯಲ್ಲಿದ್ದರು.