ಉಡುಪಿ: ಹರಿಕೃಷ್ಣ ಪುನರೂರು ಅವರು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿರುವುದರಿಂದ ಅವರಿಗೆ ಧರ್ಮದರ್ಶಿ ಎನ್ನುವ ಬಿರುದು ನೀಡಲಾಗಿದೆ. ಎಲ್ಲರಿಗೂ ಉತ್ತೇಜನ ನೀಡುವಂತಹ ಪ್ರೇರಕ ಶಕ್ತಿ. ಅವರದು ಅದ್ಭುತ ವ್ಯಕ್ತಿತ್ವ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರು ಹೇಳಿದರು.
ಅವರು ರವಿವಾರ ರಾಜಾಂಗಣದಲ್ಲಿ “ಕರಾವಳಿ ಮಾಧ್ಯಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು’ ತೃತೀಯ ಸಂಪುಟದ ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಎಲ್ಲ ವರ್ಗದ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಸಾಹಿತ್ಯ, ಧಾರ್ಮಿಕ, ಸಾಮಾಜಿಕ, ಶಿಕ್ಷಣ ಹೀಗೆ ಎಲ್ಲ ರಂಗಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಸರಕಾರವು ನಾಡಗೀತೆಯಲ್ಲಿ ಮಧ್ವಚಾರ್ಯರ ಹೆಸರು ತೆಗೆಯುವ ನಿರ್ಧಾರಕ್ಕೆ ಬಂದಾಗ ಅದನ್ನು ವಿರೋಧಿಸಿದವರಲ್ಲಿ ಪುನರೂರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ಶ್ರೀಗಳು ನೆನಪಿಸಿಕೊಂಡರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಯೊಬ್ಬರಲ್ಲಿಯೂ ಒಳ್ಳೆಯ ವ್ಯಕ್ತಿತ್ವ ಇರುತ್ತದೆ. ಸಾಧನೆ ಮಾಡುವ ಮೂಲಕ ಅದನ್ನು ಸಮಾಜದ ಮುಂದೆ ನಿರೂಪಿಸಬೇಕಿದೆ. ನಮ್ಮ ಸಂಪಾದನೆಯಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ನೀಡಿದರೆ ಒಳ್ಳೆಯದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಹರಿಕೃಷ್ಣ ಪುನರೂರು ಅವರು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ವಿಧಾನ ಪರಿಷತ್‌ನ ನಾಮನಿರ್ದೇಶಿತ ಸದಸ್ಯರಾಗುವ ಎಲ್ಲ ಅರ್ಹತೆ ಹಾಗೂ ಅಗತ್ಯತೆ ಇದೆ ಎಂದರು.
ಮಾಜಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ವಿಶ್ವ ಹಿಂದೂ ಪರಿಷತ್ ಸಂಪರ್ಕ್ ಪ್ರಮುಖ ಪ್ರೇಮಾನಂದ ಶೆಟ್ಟಿ, ಪತ್ರಕರ್ತ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಅಗೋಚರ ಪತ್ರಿಕೆ ಸಂಪಾದಕ, ಕರಾವಳಿ ಮಾಧ್ಯಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಕೃತಿಯ ಲೇಖಕ ನಾಗೇಶ ಚಡಗ ಸ್ವಾಗತಿಸಿದರು. ಉಡುಪಿ ಛೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಮರವಂತೆ ನಾಗರಾಜ ಹೆಬ್ಟಾರ್ ಈ ಕೃತಿಯ ಕುರಿತು ಮಾತನಾಡಿದರು. ಪತ್ರಕರ್ತ ಪುಂಡಲೀಕ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು.