Advertisement

ಭಾರತ್‌ ಬಂದ್‌ಗಿಲ್ಲ ಜನ ಬೆಂ”ಬಲ’

11:28 AM Jan 09, 2020 | |

ಹರಿಹರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ, ಜನವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ಗೆ ಬುಧವಾರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ನಗರದ ಕೆನರಾ ಬ್ಯಾಂಕ್‌ ಹೊರತುಪಡಿಸಿದರೆ ಉಳಿದೆಲ್ಲಾ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹಳೆ ಪಿ.ಬಿ. ರಸ್ತೆಯಲ್ಲಿನ ಜಯಶ್ರೀ ಟಾಕೀಸ್‌ ಪಕ್ಕದ ಹಾಗೂ ಮಹಾರಾಷ್ಟ್ರ ಬ್ಯಾಂಕ್‌ ಸಮೀಪದ ಕೆನರಾ ಬ್ಯಾಂಕ್‌ನ ಶಾಖೆಗಳು ಬುಧವಾರ ಬೆಳಿಗ್ಗೆಯಿಂದಲೂ ಬಂದ್‌ ಆಗಿದ್ದವು.

ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿ ಮುಷ್ಕರಕ್ಕೆ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದ ಪರಿಣಾಮ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಉಳಿದಂತೆ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ-ಖಾಸಗಿ ಕಚೇರಿಗಳು, ಚಿತ್ರಮಂದಿರಗಳು, ಪೆಟ್ರೋಲ್‌ ಬಂಕ್‌ ನಿತ್ಯದಂತೆ ಕಾರ್ಯ ನಿರ್ವಹಿಸಿದವು.

ರಾಜ್ಯ ಸಾರಿಗೆ ಸಂಸ್ಥೆಯ ಹಾಗೂ ಖಾಸಗೀ ವಾಹನಗಳ ಸಂಚಾರಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಎಲ್ಲಾ ಲೋಕಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು ನಿಗದಿತ ಸಮಯಕ್ಕೆ ಸಂಚರಿಸಿದವು. ಆದರೆ ಬಂದ್‌ ನಿಮಿತ್ತ ಬಸ್‌ ಸಂಚಾರ, ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯವಾಗಬಹುದೆಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ನಗರಕ್ಕೆ ಬರಲು ಹಿಂದೇಟು ಹಾಕಿದ್ದರಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ನಗರದ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ಕ್ಷೀಣವಾಗಿತ್ತು. ಬ್ಯಾಂಕ್‌, ಸರ್ಕಾರಿ ಕಚೇರಿಗಳಲ್ಲೂ ಎಂದಿನಂತೆ ಜನಸಂದಣಿ ಇರಲಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಮುಷ್ಕರ ನಡೆದರೂ ಪ್ರತಿಪಕ್ಷ ಕಾಂಗ್ರೆಸ್‌ ಸೇರಿದಂತೆ ಯಾವುದೇ ರಾಜಕೀಯ ಪಕ್ಷ, ವ್ಯಾಪಾರಿ ಸಂಘಟನೆ, ರೈತ ಸಂಘಟನೆಗಳಗಾಲಿ, ಅಂಗನವಾಡಿ ನೌಕರರಾಗಲಿ ಮುಷ್ಕರ ಬೆಂಬಲಿಸಿ ಪ್ರತಿಭಟನೆ ನಡೆಸಲಿಲ್ಲ.

Advertisement

ಕಾರ್ಮಿಕ ಸಂಘಟನೆಗಳೇ ಕಾಣಲಿಲ್ಲ: ಎಐಟಿಯುಸಿ ಸೇರಿದಂತೆ ಎಡಪಕ್ಷ ಬೆಂಬಲಿತ ಬಹುತೇಕ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಆದರೆ ಕೇಂದ್ರ ಮಂಡಳಿಯ ಸೂಚನೆಯಿದ್ದರೂ ಬುಧವಾರ ಮಾತ್ರ ಯಾವುದೇ ಕಾರ್ಮಿಕ ಸಂಘಟನೆ ಬೀದಿಗಿಳಿದು ಹೋರಾಟ ನಡೆಸಲಿಲ್ಲ.

ಸಮೀಪದ ಕುಮಾರಪಟ್ಟಣಂನಲ್ಲಿರುವ ಹರಿಹರ ಪಾಲಿಫೈಬರ್ ಕಾರ್ಖಾನೆ ಕಾರ್ಮಿಕರು ಮಾತ್ರ ಕಾರ್ಖಾನೆ ಮುಂಭಾಗದಿಂದ ಮೆರವಣಿಗೆ ಮೂಲಕ ಪೊಲೀಸ್‌ ಠಾಣೆ ಪಕ್ಕದ ಕಚೇರಿ ತಲುಪಿ, ಅಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ಖಂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next