Advertisement

ಗ್ರಾಮದೇವತೆ ಉತ್ಸವಕ್ಕೆ ಹರಿಹರ ಸಜ್ಜು

11:01 AM Mar 21, 2022 | Team Udayavani |

ಹರಿಹರ: ಊರಮ್ಮನ ಹಬ್ಬ, ದೇವರ ಹಬ್ಬ ಎಂದೇ ಹೇಳಲಾಗುವ ಗ್ರಾಮದೇವತೆ ಉತ್ಸವಕ್ಕೆ ಹರಿಹರ ನಗರ ಸಿಂಗಾರಗೊಂಡಿದೆ. ನಗರದ ಪ್ರಮುಖ ಬೀದಿಗಳೆಲ್ಲಾ ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಮೂಲೆ ಮೂಲೆಯಲ್ಲಿರುವ ದೊಡ್ಡ-ಸಣ್ಣ ದೇವಸ್ಥಾನಗಳಿಗೂ ಅಲಂಕಾರ ಮಾಡಲಾಗಿದೆ. ರಾಣಿ ಚೆನ್ನಮ್ಮ ವೃತ್ತ ಎಲ್‌ಇಡಿ ಪ್ಲಡ್‌ಲೈಟ್‌ ಗಳಿಂದ ಕಂಗೊಳಿಸುತ್ತಿವೆ. ಪ್ರಮುಖ ಧಾರ್ಮಿಕ ವಿಧಿ ವಿಧಾನ ನಡೆಸಲು ಹರಿಹರೇಶ್ವರ ದೇವಸ್ಥಾನ ರಸ್ತೆಯ ಮಧ್ಯ ಭಾಗದ ಚೌಕಿ ಮನೆ ವೃತ್ತದಲ್ಲಿ, ಅಲಂಕೃತ ಚೌಕಿ ಮಂಟಪ ನಿರ್ಮಾಣ ಮಾಡಲಾಗಿದೆ.

Advertisement

ಇಲ್ಲಿ ಊರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಉತ್ಸವದ ಪರಂಪರೆ ನೆರವೇರಿಸಲಾಗುವುದು. ನಗರದ ಹೆಸರಿನಲ್ಲೆ ಹರಿ ಮತ್ತು ಹರ ಇಬ್ಬರು ದೇವರಿದ್ದಾರೆ. ಕಸಬಾ ಮತ್ತು ಮಾಜೇನಹಳ್ಳಿ ಎಂಬ ಎರಡು ಗ್ರಾಮಗಳ ಮಿಲನವೇ ಹರಿಹರ ನಗರ. ಹಾಗಾಗಿ ಇಲ್ಲಿ ಎರಡು ಗ್ರಾಮದೇವತೆಗಳು. ಪೂಜೆ, ಬಲಿ, ಹರಕೆ, ಅರ್ಪಣೆ ಸೇರಿದಂತೆ ಎಲ್ಲಾ ಆಚರಣೆಗಳೂ ಎರೆಡೆರಡು ನಡೆಯುತ್ತವೆ. ಬುಧವಾರ ನಸುಕಿನಲ್ಲಿ ನಡೆಯಲಿರುವ ಬಲಿದಾನ, ಬೇವಿನುಡಿಗೆ ಹರಕೆ ಸೇರಿದಂತೆ ಸಮಸ್ತ ಸಂಪ್ರದಾಯಗಳಿಗೆ ಸಾಕ್ಷಿಯಾಗಲು ಕಸಬಾ ಮತ್ತು ಮಾಜೇನಹಳ್ಳಿ ದೇವಾಲಯದ ದೇವತೆಯರು ಸಿಂಗಾರಗೊಂಡು ನಿಂತಿದ್ದಾರೆ. ನಗರದ ಕಸಬಾ ದೇವಸ್ಥಾನದಲ್ಲಿದ್ದ ಅಮ್ಮನವರನ್ನು ಭಾನುವಾರ ಮೆರವಣಿಗೆ ಮೂಲಕ ತುಂಗಭದ್ರಾ ನದಿ ತೀರಕ್ಕೆ ಕರೆತಂದು ಗಂಗಾಪೂಜೆ ನೆರವೆರಿಸಲಾಯಿತು.

ನಂತರ ಶಿವಮೊಗ್ಗ ರಸ್ತೆಯಲ್ಲಿರುವ ಮಾಜೇನಹಳ್ಳಿ ದೇವಸ್ಥಾನಕ್ಕೆ ತಂದು ಚಿನ್ನದ ಕಿರೀಟ ಧಾರಣೆ ಮಾಡಿಸಲಾಯಿತು. ಮೆರವಣಿಗೆಯುದ್ದಕ್ಕೂ ಉಧೋ ಉಧೋ ಎನ್ನುತ್ತಾ ಗ್ರಾಮದೇವತೆಯನ್ನು ಬರಮಾಡಿಕೊಳ್ಳಲಾಯಿತು. ಕಳೆದೆರಡು ದಿನಗಳಿಂದಲೆ ಮದ್ಯದಂಗಡಿಗಳು ಸೇರಿದಂತೆ ನಗರದ ಕಿರಾಣಿ, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಜಾತ್ರೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ಕರೆಸಲಾಗುತ್ತಿದೆ. ಹಬ್ಬದ ಭರದಲ್ಲಿ ಉದ್ವೇಗ ಬೇಡ, ಎಲ್ಲರೂ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಹಿಂದೂ, ಮಸ್ಲಿಂ, ಕ್ರೈಸ್ತರೆಲ್ಲಾ ಒಟ್ಟಾಗಿ ಮಾದರಿ ಉತ್ಸವ ಆಚರಿಸೋಣ ಎಂದು ಶಾಸಕ ಎಸ್‌. ರಾಮಪ್ಪ ಮನವಿ ನೀಡಿದ್ದಾರೆ. ನಿರಂತರ ನೀರು ಪೂರೈಸಲು, ರಾತ್ರಿ ವೇಳೆ ವಿದ್ಯುತ್‌ ವ್ಯತ್ಯಯ ಮಾಡದಿರಲು, ಅಕ್ಕಪಕ್ಕದ ನಗರಗಳಿಂದ ವಿಶೇಷ ಬಸ್‌ ಓಡಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next