Advertisement

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

04:23 PM Apr 07, 2020 | Naveen |

ಹರಿಹರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಬಡವರು, ನಿರ್ಗತಿಕರಿಗೆ ಉಚಿತ ಹಾಲು ವಿತರಿಸುವ ಸರ್ಕಾರದ ಯೋಜನೆ ಕುರಿತ ಗೊಂದಲದಿಂದ ಇಲ್ಲಿನ ನಗರಸಭೆಯ ಅಧಿಕಾರಿಗಳು ಮತ್ತು ಸದಸ್ಯರ ಮಧ್ಯೆ ತಿಕ್ಕಾಟ ಆರಂಭವಾಗಿದೆ.

Advertisement

ಸರ್ಕಾರದ ನಿರ್ಧಾರದಂತೆ ನಗರದಲ್ಲೂ ಶನಿವಾರದಿಂದ ಹಾಲು ವಿತರಣೆ ಆರಂಭವಾಗಿದ್ದು, ಆದರೆ ಉಚಿತ ಹಾಲು ವಿತರಣೆಗೆ ಅರ್ಹ ಕುಟುಂಬಗಳು ಯಾವಾವು ಎಂಬ ಬಗ್ಗೆ ಅಧಿಕಾರಿಗಳಲ್ಲೂ ಸ್ಪಷ್ಟತೆ ಇಲ್ಲದ್ದರಿಂದ ಗೊಂದಲ ಉಂಟಾಗಿದೆ. ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯರು ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ಬಡ ಜನರಿಗೆ ಉಚಿತ ಹಾಲು ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಂತೆ ಹಾಲು ಪೂರೈಸಿ ಎಂದು ಪೌರಾಯುಕ್ತರಿಗೆ ಒತ್ತಾಯಿಸಿದರು.

ಸದಸ್ಯ ಶಂಕರ್‌ ಖಟಾವಕರ್‌ ಮಾತನಾಡಿ, ನಗರದ ಕೊಳಚೆ ಪ್ರದೇಶದ ನಿವಾಸಿಗಳ ಸಂಖ್ಯೆಗೆ ತಕ್ಕಷ್ಟು ಹಾಲು ವಿತರಿಸುತ್ತಿಲ್ಲ. ಮೊದಲೆರಡು ದಿನ ತಲಾ 1 ಲೀ. ಹಾಲು ನೀಡಿ, ಸೋಮವಾರ ಕೇವಲ ಅರ್ಧ ಲೀ. ಹಾಲು ಮಾತ್ರ ಲಭ್ಯವಿದೆ ಎನ್ನಲಾಗುತ್ತಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಎಸ್‌.ಲಕ್ಷ್ಮೀ, ಈಗಾಗಲೆ ದಾಖಲಾಗಿರುವ ಕೊಳಚೆ ಕುಟುಂಬಗಳ ಸಂಖ್ಯೆಗೆ ತಕ್ಕಷ್ಟು ಹಾಲು ಪೂರೈಕೆಯಾಗಿದೆ. ಹೆಚ್ಚುವರಿ ಕುಟುಂಬಗಳ ಮಾಹಿತಿಯನ್ನೂ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗುವವರೆಗೆ ಎಲ್ಲರಿಗೂ ದೊರೆಯಲಿ ಎಂದು ಅರ್ಧ ಲೀ. ಹಾಲು ನೀಡಲಾಗುತ್ತಿದೆ ಎಂದರು. ಆದರೆ ಇದಕ್ಕೆ ಒಪ್ಪದ ಸದಸ್ಯರು ಸರ್ಕಾರ ಘೋಷಿಸಿದಂತೆ ಎಲ್ಲಾ ಅರ್ಹ ಕುಟುಂಬಗಳಿಗೆ 1 ಲೀಟರ್‌ ಹಾಲು ನೀಡುವುದಾದರೆ ನೀಡಿ, ಇಲ್ಲದಿದ್ದರೆ ಯಾರಿಗೂ ಹಾಲು ವಿತರಿಸುವುದು ಬೇಡ ಎಂದು ಪಟ್ಟು ಹಿಡಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ತಿಳಿಸುವುದಾಗಿ ಹೇಳಿ ಪೌರಾಯುಕ್ತರು ಸಭೆ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next