ಹರಿಹರ: ನಗರದ ಹೊಸ ಭರಂಪುರದ ವಿಎಸ್ ಎಸ್‌ಎನ್ ನ್ಯಾಯಬೆಲೆ ಅಂಗಡಿಯಲ್ಲಿ ಲಾಕ್‌ಡೌನ್ ನಿಮಿತ್ತ ಸರ್ಕಾರ ನೀಡಿದ್ದ ಹೆಚ್ಚುವರಿ ಪಡಿತರ ಧಾನ್ಯ ಗುಳಂ ಮಾಡಿರುವುದು ಸೇರಿದಂತೆ ಹಲವು ಅಕ್ರಮ ಎಸಗಲಾಗುತ್ತಿದೆ ಎಂದು ಡಿಎಸ್‌ಎಸ್‌ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಡಿತರದಾರರಿಂದ ಹಣ ವಸೂಲಿ, ಖುರ್ಚು-ವೆಚ್ಚಕ್ಕೆಂದು 1 ಕೆ.ಜಿ. ಕಡಿಮೆ ತೂಕ ಮಾಡುವುದು, ಪಡಿತರ ಚೀಟಿದಾರರಿಗೆ ನಿಯಮಿತವಾಗಿ ಪಡಿತರ ವಿತರಣೆ ಮಾಡದಿರುವುದು ಮುಂತಾದ ಅಕ್ರಮ ನಡೆಸಲಾಗುತ್ತಿದ್ದು, ಇದನ್ನು ಪ್ರಶ್ನಿಸುವ ಗ್ರಾಹಕರಿಗೆ ಅಂಗಡಿ ನಿರ್ವಹಿಸುವ ವಿಎಸ್‌ಎಸ್‌ಎನ್ ಸಿಬ್ಬಂದಿ ಪರಶುರಾಮ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಕೇಂದ್ರದ ಪಾಲು ಗುಳುಂ: ಅಂತ್ಯೋದಯ ಪಡಿತರದಾರರಿಗೆ ರಾಜ್ಯ ಸರಕಾರದ ನಿಯಮಿತ 35 ಕೆ.ಜಿ. ಜೊತೆಗೆ ಲಾಕ್‌ಡೌನ್ ನಿಮಿತ್ತ ಕುಟುಂಬದ ಒಬ್ಬ ಸದಸ್ಯನಿಗೆ ಕೇಂದ್ರ ಸರಕಾರದಿಂದ ತಲಾ 5 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡಲಾಗಿದೆ. ಆದರೆ ಈ ಅಂಗಡಿಯಲ್ಲಿ 35 ಕೆ.ಜಿ.ಮಾತ್ರ ವಿತರಿಸುತ್ತಿದ್ದು, ಹೆಚ್ಚುವರಿ ತಲಾ 5 ಕೆ.ಜಿ. ಬಹುತೇಕರಿಗೆ ವಿತರಿಸಿಲ್ಲ.
ಒಟಿಪಿ ಮೋಸ: ಪಡಿತರದಾರರ ಹೆಬ್ಬೆಟ್ಟು ಪಡೆದು ಅಥವಾ ಅವರ ಮೊಬೆ„ಲ್‌ಗೆ ಒಟಿಪಿ ಕಳಿಸುವ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಆದರೆ ಯಾರಾದರೂ ಗ್ರಾಹಕರು ಪಡಿತರ ಒಯ್ಯುವುದು ವಿಳಂಬವಾದರೆ ಅಥವಾ ಒಯ್ಯದಿದ್ದರೆ ಕೂಡಲೆ ಈ ಅಂಗಡಿಯಲ್ಲಿ ಬೇರೊಂದು ಮೊಬೆ„ಲ್‌ಗೆ ಒಟಿಪಿ ಕಳಿಸಿಕೊಂಡು ತಾವೇ ಪಡಿತರ ಪಡೆದುಕೊಳ್ಳುತ್ತಾರೆ. ಇದೇ ರೀತಿ ಆನ್‌ಲೈನ್ ನಲ್ಲಿ ಬೇರೆ ನ್ಯಾಯಬೆಲೆ ಅಂಗಡಿಯ ಪಡಿತರದಾರರ ಮಾಹಿತಿ ಪಡೆದು ಅವರ ಪಾಲಿನ ಪಡಿತರವನ್ನು ಈ ವ್ಯಕ್ತಿ ಗುಳುಂ ಮಾಡುತ್ತಿದ್ದಾರೆ. ಇಂತಹ ಅಕ್ರಮವನ್ನು ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಯವರೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೆಬ್ಬೆಟ್ಟಿಗೆ, ತೂಕಕ್ಕೆ 20 ರೂ.: ಪಡಿತರ ಪಡೆಯಲು ಲ್ಯಾಪ್‌ಟಾಪ್‌ನಲ್ಲಿ ಬಯೋಮೆಟ್ರಿಕ್ ಮಾಡಿಕೊಡಲು 10 ರೂ., ಪಡಿತರ ತೂಕ ಮಾಡಿಕೊಡಲು 10 ರೂ. ಸೇರಿ ಪ್ರತಿ ಗ್ರಾಹಕರಿಂದ ತಲಾ 20 ರೂ. ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಇದಲ್ಲದೆ ಪಡಿತರ ಚೀಟಿದಾರರೊಂದಿಗೆ ಅಸಭ್ಯ ವರ್ತನೆ, ದುಂಡಾವರ್ತನೆ ತೋರುವ ಈ ಅಂಗಡಿ ನಿರ್ವಾಹಕನ ವಿರುದ್ಧ ಸಾರ್ವಜನಿಕರು ದೂರು ಕೊಟ್ಟರೂ ಶಿಸ್ತು ಕ್ರಮ ಕೈಗೊಳ್ಳದ ಆಹಾರ ಇಲಾಖಾಧಿಕಾರಿಗಳ ನಡೆ ಅನುಮಾನ ಮೂಡಿಸಿದೆ. ಕೂಡಲೆ ಹಿರಿಯ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳನ್ನು ದೂರವಿಟ್ಟು ಈ ಕುರಿತು ತನಿಖೆ ನಡೆಸಬೇಕು. ತಪ್ಪಿದಲ್ಲಿ ಪ್ರತಿಭಟಿಸಲಾಗುವುದು ಎಂದು ಅವರು ಅಗ್ರಹಿಸಿದರು. ಗೋಷ್ಠಿಯಲ್ಲಿ ಡಿ.ಎಂ.ಮಂಜುನಾಥ್ ಭಾನುವಳ್ಳಿ, ಬನ್ನಿಕೋಡು ವಾಗೀಶ್, ಹೊಸಪಾಳ್ಯದ ಯುವರಾಜ್, ಮಂಜುನಾಥ್, ಹಾಲೇಶ್, ಮಾರುತಿ ಮತ್ತಿತರರಿದ್ದರು.