Advertisement

ಹೂಳು, ಗಿಡಗಂಟಿಗಳಿಂದ ತುಂಬಿದ ಹರಿಯಪ್ಪ ಕೆರೆ

12:30 AM Jan 26, 2019 | Team Udayavani |

ಅಜೆಕಾರು: ಹಿರ್ಗಾನ ಪಂಚಾಯತ್‌ ವ್ಯಾಪ್ತಿಯ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ ಪ್ರಾಚೀನ ಹರಿಯಪ್ಪ ಕೆರೆ ಸೂಕ್ತ ನಿರ್ವಹಣೆ ಯಿಲ್ಲದೆ ಹೂಳು, ಗಿಡಗಂಟಿಗಳಿಂದ ತುಂಬಿ ನೀರುನಿಲ್ಲದಂತಾಗಿದೆ.

Advertisement

ಹಿರ್ಗಾನ ಮೂರೂರಿನ ದುಗ್ಗಣ್ಣರಾಯ ವಠಾರದಲ್ಲಿ ಸುಮಾರು 1 ಎಕ್ರೆ ಜಾಗದಲ್ಲಿರುವ ಈ ಕೆರೆಯು  ಶತಮಾನಗಳಿಂದ ಸುತ್ತಲಿನ ಕೃಷಿ ಭೂಮಿಗೆ ನೀರು ಒದಗಿಸುತ್ತಿತ್ತು. ಕೆರೆಯು 25ರಿಂದ 30 ಅಡಿಗಳಷ್ಟು ಆಳ ಹೊಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದು ಇದೀಗ ಕೇವಲ 5 ಅಡಿಗಳಷ್ಟು ಮಾತ್ರ ಆಳ ಕಾಣುತ್ತಿದ್ದು ಉಳಿದ 20 ಅಡಿಗಳಷ್ಟು ಹೂಳಿನಿಂದ ತುಂಬಿ ಹೋಗಿದ್ದು ಅಲ್ಪಸ್ವಲ್ಪ ಶೇಖರಣೆಗೊಂಡಿರುವ ನೀರಿನಲ್ಲಿ ಗಿಡಗಂಟಿಗಳು ಬೆಳೆದಿವೆ.

1975ರವರೆಗೆ ಈ ಕೆರೆಯ ನೀರನ್ನೇ ಬಳಸಿ ನೆಲ್ಲಿಕಟ್ಟೆ, ಕಂಬÛಪಲ್ಕೆ, ರಾಜೀವನಗರ, ಬೆದ್ರ್ಮಾರ್‌ ಮುಂತಾದ ಪರಿಸರದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಕೆರೆಯಲ್ಲಿ ಹೂಳು ತುಂಬಿ ನೀರು ನಿಲ್ಲಲು ಅವಕಾಶವಿಲ್ಲದೆ ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿದು ಈಗ ಬೇಸಗೆಯಲ್ಲಿ ನೀರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೆರೆಯಲ್ಲಿ ನೀರು ನಿಲ್ಲಲು ಸಾಕಷ್ಟು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಬಿದ್ದ ನೀರು ನಿಷ್ಪ್ರಯೋಜಕವಾಗುತ್ತಿದೆ. ಕೃಷಿಗೆ ಬೇಕಾದ ನೀರಿನ ವ್ಯವಸ್ಥೆ ಇಲ್ಲದೆ ವರ್ಷಕ್ಕೆ 2 ಬೆಳೆ ಬೆಳೆಯುತ್ತಿದ್ದ ಭತ್ತದ ಗದ್ದೆಗಳು ಈಗ ಪಾಳುಬಿದ್ದಿವೆ.

ಕುಡಿಯುವ ನೀರಿಗೆ ಶಾಶ್ವತ ಪರಿಹಾರ
ಈ ಕೆರೆಯ ಹೂಳೆತ್ತಿ ಅಭಿವೃದ್ಧಿ ಪಡಿಸಿದಲ್ಲಿ ಹಿರ್ಗಾನ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂಬುದು ಸ್ಥಳೀಯರ ಅನಿಸಿಕೆ.

ಪಂಚಾಯತ್‌ ವ್ಯಾಪ್ತಿಯಲ್ಲಿ ಹೊಸ ದಾಗಿ ತೆರೆದ ಬಾವಿ, ಕೊಳವೆ ಬಾವಿ ನಿರ್ಮಾಣ ಮಾಡುವ ಬದಲಿಗೆ ಜಲಮೂಲವಿರುವ ಪ್ರಾಚೀನ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪಂಚಾಯತ್‌ ವ್ಯಾಪ್ತಿಗೆ ಬೇಕಾದಷ್ಟು ನೀರು ದೊರೆತು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

ಅನುದಾನ ಅಗತ್ಯ
ಕೆರೆಯಲ್ಲಿ ತುಂಬಿರುವ ಹೂಳೆತ್ತಿ ಕೆರೆ ಅಭಿವೃದ್ಧಿಪಡಿಸಲು ಬಹಳಷ್ಟು ಅನುದಾನ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಯೋಜನೆಯಡಿ ವಿಶೇಷ ಅನುದಾನ ನೀಡಿದಲ್ಲಿ ಪಂಚಾಯತ್‌ ಕೆರೆ ಅಭಿವೃದ್ಧಿಪಡಿಸಲು ಸಿದ್ದವಿದೆ. ಈ ಬಗ್ಗೆ ಶಾಸಕರ ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು ಮತ್ತೆ ಮನವಿ ಸಲ್ಲಿಸಲಾಗುವುದು.
– ಸಂತೋಷ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಹಿರ್ಗಾನ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next