Advertisement

ಹಾಕಿ: ಪುರುಷರ ಕೋಚ್‌ ಸ್ಥಾನ ಕಳೆದುಕೊಂಡ ಮರಿನ್‌

06:00 AM May 02, 2018 | |

ಹೊಸದಿಲ್ಲಿ: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ನೀಡಿದ್ದ ಕಳಪೆ ಪ್ರದರ್ಶನದ ಪರಿಣಾಮ ಅನಿರೀಕ್ಷಿತ ಬದಲಾವಣೆ ಸಂಭವಿಸಿದೆ. ಇದುವರೆಗೆ ತರಬೇತುದಾರ ಸ್ಥಾನದಲ್ಲಿದ್ದ ಡೆನ್ಮಾರ್ಕ್‌ನ ಶೋರ್ಡ್‌ ಮರಿನ್‌ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿ ಮಹಿಳಾ ತಂಡದ ತರಬೇತುದಾರರನ್ನಾಗಿ ನೇಮಿಸಲಾಗಿದೆ. ವಿಚಿತ್ರವೆಂದರೆ ಮಹಿಳಾ ತಂಡದ ಕೋಚ್‌ ಆಗಿದ್ದ ಹರೇಂದ್ರ ಸಿಂಗ್‌ ಅವರನ್ನು ಪುರುಷರ ತಂಡಕ್ಕೆ ತರಬೇತುದಾರರನ್ನಾಗಿ ನೇಮಿಸಿ ಭಡ್ತಿ ನೀಡಲಾಗಿದೆ. ಅಂದರೆ ಇಬ್ಬರೂ ತರಬೇತುದಾರರ ಸ್ಥಾನಗಳನ್ನು ಅದಲು ಬದಲು ಮಾಡಲಾಗಿದೆ.

Advertisement

ಈ ದಿಢೀರ್‌ ಬದಲಾವಣೆಗೆ ಕಾರಣವೇನು ಎಂಬುದನ್ನು ಹಾಕಿ ಇಂಡಿಯಾ ನೇರವಾಗಿ ಹೇಳಿಲ್ಲ. ಆದರೆ ಕಾಮನ್ವೆಲ್ತ್‌ ಗೇಮ್ಸ್‌ನ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣವೆನ್ನುವುದು ಸ್ಪಷ್ಟ. ಸದ್ಯ ಮರಿನ್‌  ಹಿಂಭಡ್ತಿಯ ಬಗ್ಗೆ ತನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿಕೊಂಡಿದ್ದರೂ ಅವರು ಹೊಸ ಜವಾಬ್ದಾರಿಯಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳಿವೆ. ಜತೆಗೆ ಹಾಕಿ ತಂಡದೊಳಗೆ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಮನ್‌ಪ್ರೀತ್‌ ನಾಯಕತ್ವ ಹೋಯಿತು
ಇತ್ತೀಚೆಗಷ್ಟೇ ಭಾರತ ಹಾಕಿ ತಂಡದ ನಾಯಕ ಸ್ಥಾನದಿಂದ ಯುವಕ ಮನ್‌ಪ್ರೀತ್‌ ಸಿಂಗ್‌ರನ್ನು ಕೆಳಗಿಳಿಸಿ, ಹಿರಿಯ ಆಟಗಾರ ಪಿ.ಆರ್‌.ಶ್ರೀಜೇಶ್‌ರನ್ನು ನೇಮಿಸಲಾಗಿತ್ತು. ಮನ್‌ಪ್ರೀತ್‌ ನಾಯಕನಾಗಿ ವೈಫ‌ಲ್ಯ ಅನುಭವಿಸಿದ್ದಾರೆ, ಆದ್ದರಿಂದಲೇ ಈ ಬದಲಾವಣೆ ಎಂದು ಕೆಲ ಮೂಲಗಳು ಇದನ್ನು ವರ್ಣಿಸಿದ್ದವು. ಇದರ ಬೆನ್ನಲ್ಲೇ ತರಬೇತುದಾರರ ಅದಲು ಬದಲೂ ನಡೆ ದಿರುವುದು ಭಾರತ ಹಾಕಿಯಲ್ಲಿ ಎಲ್ಲವೂ ಸರಿ ಯಿದೆಯೇ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ.

ಮರಿನ್‌ ಪತನಕ್ಕೆ ಕಾರಣ?
ಮೂಲಭೂತವಾಗಿ ಮರಿನ್‌ ಅವರು ಯಾವುದೇ ಪುರುಷರ ತಂಡಕ್ಕೆ ತರಬೇತುದಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಲಿಲ್ಲ. ಆದರೂ ಭಾರತ ಮಹಿಳಾ ತಂಡದ ಕೋಚ್‌ ಆಗಿ ಅವರು ಯಶಸ್ವಿಯಾಗಿದ್ದನ್ನು ಪರಿಗಣಿಸಿ ಅವರಿಗೆ ಹುದ್ದೆ ನೀಡಲಾಗಿತ್ತು. ಆದರೆ ಕಾಮನ್ವೆಲ್ತ್‌ನಲ್ಲಿ ಭಾರತ ಪೂರ್ಣ ವಿಫ‌ಲವಾಗಿ ಕಳೆದ 12 ವರ್ಷಗಳ ಅನಂತರ ಮೊದಲ ಬಾರಿಗೆ ಪದಕವಿಲ್ಲದೇ ಹಿಂದಿರುಗಿತ್ತು. ಅದೂ 4ನೇ ಸ್ಥಾನಿಯಾಗಿ. ತಂಡದ ಆಯ್ಕೆಯಲ್ಲಿ  ಕೇವಲ  ಯುವಕರಿಗೆ ಮಣೆ ಹಾಕಿ ಹಿರಿಯರನ್ನು ಕಡೆ ಗಣಿಸಿದ್ದು, ಕಾಮನ್ವೆಲ್ತ್‌ನಂತಹ ಕೂಟವಿದ್ದಾಗಲೂ ಅಜ್ಲಾನ್‌ ಶಾಗೆ ಪೂರ್ಣ ತಂಡ ಕಳುಹಿಸದೇ ಇದ್ದಿದ್ದು ಮರಿನ್‌ ತಪ್ಪುಗಳೆಂದು ಟೀಕಿಸಲಾಗಿದೆ. ತಂಡವನ್ನು ಸರಿಯಾಗಿ ನಿಭಾ ಯಿಸಲು ಅವರಿಗೆ ಬರುವುದಿಲ್ಲವೆಂದು ಹೇಳಲಾಗಿದೆ.

ಮರಿನ್‌ ಅವಧಿಯಲ್ಲಿ ಉತ್ತಮ ಸಾಧನೆ!
ವಿಶೇಷವೆಂದರೆ ಶೋರ್ಡ್‌ ಮರಿನ್‌ ಅವಧಿಯಲ್ಲಿ ಭಾರತ ತಂಡ ಉತ್ತಮ ಸಾಧನೆ ಯನ್ನೇ ಮಾಡಿತ್ತು. 10 ವರ್ಷಗಳ ಅನಂತರ ಭಾರತ ತಂಡ ಏಷ್ಯಾ ಕಪ್‌ ಗೆದ್ದಿತ್ತು. ಅಲ್ಲದೇ ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ ಫೈನಲ್‌ ಕೂಟದಲ್ಲಿ ಕಂಚಿನ ಪದಕ ಗೆದ್ದಿತ್ತು.

Advertisement

ಹರೇಂದ್ರ ಸಿಂಗ್‌ ಹಿನ್ನೆಲೆಯೇನು?
ನೂತನ ತರಬೇತುದಾರ ಹರೇಂದ್ರ ಸಿಂಗ್‌ ಈ ಮೊದಲೇ ಮರಿನ್‌ ಸ್ಥಾನಕ್ಕೆ ಆಯ್ಕೆಯಾಗಬೇಕಿತ್ತು. ಆಗ ಕೈತಪ್ಪಿದ ಹುದ್ದೆ ಈಗ ದೊರೆತಿದೆ. 2009ರಿಂದ 2011ರ ವರೆಗೆ ಅವರು ಭಾರತ ಪುರುಷರ ತಂಡದ ಕೋಚ್‌ ಆಗಿದ್ದರು. ಅನಂತರ ಅವರು ಭಾರತ ಕಿರಿಯರ ತರಬೇತುದಾರರಾಗಿ ಭರ್ಜರಿ ಯಶಸ್ಸು ಕಂಡರು. 2016ರಲ್ಲಿ ಕಿರಿಯರ ವಿಶ್ವಕಪ್‌ ಜಯಿಸಿತು. ಈ ಬಾರಿ ಮಹಿಳಾ ತಂಡಕ್ಕೆ ಕೋಚ್‌ ಆದಾಗಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಮಹಿಳಾ ತಂಡ 4ನೇ ಸ್ಥಾನ ಪಡೆದು ಕಳೆದೆರಡು ಕಾಮನ್‌ವೆಲ್ತ್‌ಗಿಂತ ಉತ್ತಮವೆನಿಸಿಕೊಂಡಿದೆ.

5 ವರ್ಷಗಳಲ್ಲಿ  4 ಕೋಚ್‌ಗಳು
ಭಾರತ ಹಾಕಿ ತಂಡದಲ್ಲಿ ಕಳೆದ 5 ವರ್ಷಗಳಲ್ಲಿ ನಾಲ್ವರು ಕೋಚ್‌ಗಳನ್ನು ಬದಲಿಸಲಾಗಿದೆ! ಪ್ರತಿ ಬಾರಿ ತಂಡ ಕಳಪೆ ಪ್ರದರ್ಶನ ನೀಡಿದಾಗ ತರಬೇತುದಾರರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಕೆಲವೊಮ್ಮೆ ಅನ್ಯ ಕಾರಣಗಳಿಂದಲೂ ತರಬೇತುದಾರರು ಸ್ಥಾನ ಕಳೆದುಕೊಂಡಿದ್ದಾರೆ. 2013ರಲ್ಲಿ ಟೆರ್ರಿ ವಾಲ್ಶ್ ತರಬೇತುದಾರರಾಗಿದ್ದಾಗ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೂ ಹಾಕಿ ಇಂಡಿಯಾದ ಅಂದಿನ ಮುಖ್ಯಸ್ಥ ನರೇಂದ್ರ ಬಾತ್ರಾರೊಂದಿಗೆ ವೈಮನಸ್ಯದ ಪರಿಣಾಮ ಅವರು ಸ್ಥಾನ ಕಳೆದುಕೊಂಡರು. ಮುಂದೆ ಡೆರಿಕ್‌ ವ್ಯಾನ್‌ ನೀಕರ್ಕ್‌ ಕೂಡ ಇದೇ ಕಾರಣಕ್ಕೆ ಹೊರಬಿದ್ದರು. ಅವರ ಅನಂತರ ಆ ಸ್ಥಾನಕ್ಕೇರಿದ ರೋಲ್ಯಾಂಟ್‌ ಓಲ್ಟ್ಮನ್ಸ್‌ಗೆ ತಂಡದ ಕಳಪೆ ಪ್ರದರ್ಶನ ಮುಳುವಾಯಿತು. ಅನಂತರ ಆಯ್ಕೆಯಾದ ಡೆನ್ಮಾರ್ಕ್‌ನ ಶೋರ್ಡ್‌ ಮರಿನ್‌ಗೆ ಸದ್ಯ ಪೂರ್ಣ ಗೇಟ್‌ಪಾಸ್‌ ಸಿಗಲಿಲ್ಲ ಎನ್ನುವುದಷ್ಟೇ ಇಲ್ಲಿನ ಸಮಾಧಾನ.

Advertisement

Udayavani is now on Telegram. Click here to join our channel and stay updated with the latest news.

Next