Advertisement

ಜನರ ಸಂಕಷ್ಟ: ಆಗಬೇಕಿದೆ ತುರ್ತು ಕ್ರಮ

12:28 AM Jun 29, 2020 | Sriram |

ವಿಶೇಷ ವರದಿ-ಮಹಾನಗರ: ಪಾಂಡೇಶ್ವರದ ಸುಭಾಶ್‌ ನಗರ 1ನೇ ರಸ್ತೆಯ 2ನೇ, 4ನೇ ಅಡ್ಡರಸ್ತೆಯ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಬರುವ ಕೃತಕ ನೆರೆಯ ಭೀತಿಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮಹಾನಗರ ಪಾಲಿಕೆಯು ಇಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಆವಶ್ಯಕತೆಯಿದೆ.ಪಾಂಡೇಶ್ವರದ ಸುಭಾಶ್‌ ನಗರ,ಮಳೆಗಾಲ

Advertisement

ಮಳೆ ಬಂದಾಗ ಮಂಗಳಾದೇವಿ, ಬೋಳಾರ ರಸ್ತೆಗಳ ಭಾಗದಿಂದ ಎಮ್ಮೆಕೆರೆ ಚರಂಡಿ ಮೂಲಕ ಹರಿಯುವ ಭಾರೀ ಪ್ರಮಾಣದ ನೀರು ಸುಭಾಶ್‌ ನಗರದಲ್ಲಿ ಅಗಲ ಕಿರಿದಾದ ಒಂದೇ ಚರಂಡಿ ಮೂಲಕ ಸಾಗುವುದರಿಂದ ಜಾಗಸಾಲದೆ ರಸ್ತೆಯ ಮೇಲೆ, ಮನೆಗಳಿಗೆ ನುಗ್ಗುತ್ತಿದೆ. ಒಂದೆರಡು ಗಂಟೆ ಕಾಲ ಧಾರಾಕಾರ ಮಳೆ ಬಂದರೆ ಸುಭಾಶ್‌ ನಗರ ಸಂಪೂರ್ಣ ಜಲಾವೃತ ಗೊಂಡು ಜನರು ಮನ ಯಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಎಮ್ಮೆಕೆರೆಯ ಚರಂಡಿ 10 ಅಡಿ ಅಗಲವಿದ್ದರೆ ಅದು ಮುಂದಕ್ಕೆ ಸಾಗಿ ಸುಭಾಶ್‌ ನಗರ ತಲಪುವಾಗ 3 -4 ಅಡಿ ಅಗಲ ಮಾತ್ರ ಇದೆ. ಈ ಅಗಲ ಕಿರಿದಾದ ಚರಂಡಿಯಲ್ಲಿ ನೀರು ಹರಿಯಲು ಸಾಧ್ಯವಾಗದೆ, 2ನೇ ಹಾಗೂ 4ನೇ ಕ್ರಾಸ್‌ಗಳಲ್ಲಿ ನೀರು ಚರಂಡಿಯಿಂದ ಉಕ್ಕಿ ಹರಿಯುತ್ತದೆ. ಅಲ್ಲದೆ 1ನೇ ಮುಖ್ಯ ರಸ್ತೆಯ 4ನೇ ಅಡ್ಡ ರಸ್ತೆಯಲ್ಲಿಯೂ ನೀರು ಚರಂಡಿಯಿಂದ ಉಕ್ಕಿ ರಸ್ತೆಗೆ ಹರಿದು, ಅಕ್ಕ ಪಕ್ಕದ ಮನೆಗಳ ಒಳಗೆ ನುಗ್ಗಿ ವಿಪರೀತ ತೊಂದರೆಯಗುತ್ತಿದೆ.

ಈ ಪ್ರದೇಶದಲ್ಲಿ ನೂರಕ್ಕೂ ಅಧಿಕ ಕುಟುಂಬಗಳಿವೆ. ಸುಮಾರು 3 ವಾರಗಳ ಹಿಂದೆ ಇಲ್ಲಿ ಕೃತಕ ನೆರೆ ಸೃಷ್ಟಿಯಾದಾಗ ಸ್ಥಳೀಯ ಕಾರ್ಪೊ ರೇಟರ್‌, ಮೇಯರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಭರವಸೆ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.

ಈ ಹಿಂದೆ ಸುಭಾಶ್‌ನಗರ 3ನೇ ಕ್ರಾಸ್‌ ಹಿಂಬದಿಯ ಜಾಗದಲ್ಲಿ ಇರುವ ಚರಂಡಿಯ ನೀರು ಹೊಗೆ ಬಜಾರ್‌ಗೆ (ಸರಕಾರಿ ಶಾಲೆಯ ಒಳಗಿನ ಚರಂಡಿಯಲ್ಲಿ ಹರಿದು) ಹೋಗಿ ನದಿ ಸೇರುತ್ತಿತ್ತು.

Advertisement

ಈಗ ಆ ನೀರು ಸುಭಾಶ್‌ನಗರ ಚರಂಡಿಯಲ್ಲಿ ಹರಿದು ಬರುತ್ತಿರುವುದು ಸಮಸ್ಯೆಗೆ ಕಾರಣ. ಹಾಗಾಗಿ ಈ ನೀರನ್ನು ಹೊಗೆ ಬಜಾರ್‌ ಚರಂಡಿಗೆ ಬಿಡಲು ಕ್ರಮ ಕೈಗೊಂಡರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಹಾಗೆಯೇ 1ನೇ ಮುಖ್ಯ ರಸ್ತೆಯಿಂದ 2ನೇ ಮುಖ್ಯ ರಸ್ತೆಗೆ ಹಾದು ಹೋಗುವ ಚರಂಡಿಯ ಚಪ್ಪಡಿಗಳನ್ನು ಸರಿಪಡಿಸಿ, ಚರಂಡಿಯಲ್ಲಿ ತುಂಬಿರುವ ಕೆಸರು ಮಣ್ಣನ್ನು ಮೇಲೆತ್ತಿ ನೀರು ಸರಾಗವಾಗಿ ಹರಿಯಲು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆಗ್ರಹಿಸಿದ್ದಾರೆ.

ಕ್ರಮ ಕೈಗೊಳ್ಳಲಾಗುವುದು
ಎಮ್ಮೆಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಈಜು ಕೊಳದ ಪಕ್ಕದಲ್ಲಿ ಕೂಡಲೇ ತಡೆಗೋಡೆ ರಚಿಸಿ ಮೇಲ್ಭಾಗದಿಂದ ಹರಿದು ಬರುವ ನೀರನ್ನು ಹೊಗೆ ಬಜಾರ್‌ನ ಕೆಎಫ್‌ಡಿಸಿ ಸಮೀಪ ಹಾದು ಹೋಗುವ ಚರಂಡಿಗೆ ಮತ್ತು ಸುಭಾಶ್‌ ನಗರದ ಚರಂಡಿಯಲ್ಲಿ ಹರಿದು ತೋಡಿಗೆ ಸೇರುವ ಹಾಗೆ ಎರಡು ಕವಲುಗಳಲ್ಲಿ ಹರಿಯುವಂತೆ ಮಾಡಬೇಕು. ಈಜು ಕೊಳದ ಕೆಲಸ ಆರಂಭಿಸುವ ಮೊದಲು ಈ ಕಾಮಗಾರಿ ನಡೆಸುವಂತೆ ಪಾಲಿಕೆ, ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗ ಪುನಃ ಈ ದಿಶೆಯಲ್ಲಿ ಒತ್ತಡ ಹೇರಲಾಗುವುದು ಎಂದು ಸ್ಥಳೀಯ ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌ ತಿಳಿಸಿದ್ದಾರೆ.

ಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ
ಪಾಂಡೇಶ್ವರದ ಸುಭಾಶ್‌ ನಗರದಲ್ಲಿ ಕೃತಕ ನೆರೆಯಿಂದ ಸಮಸ್ಯೆಯಾ ಗುತ್ತಿರುವ ಬಗ್ಗೆ ಪರಿಶೀಲಿಸಿ, ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು ಮನಪಾ

Advertisement

Udayavani is now on Telegram. Click here to join our channel and stay updated with the latest news.

Next