ಮುಂಬಯಿ: ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬಯಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸುತ್ತಿದ್ದರೆನ್ನಲಾದ ಕಂಪ್ಯೂಟರ್‌ನ ಸಿಪಿಯು, ವಾಹನವೊಂದರ ನಂಬರ್‌ಪ್ಲೇಟ್, ಡಿವಿಆರ್ ಹಾರ್ಡ್ ಡಿಸ್ಕ್ ಹಾಗೂ ಇನ್ನಿತರ ಸಾಮಗ್ರಿ ಗಳನ್ನು ಮೀಠೀ ನದಿಯಿಂದ ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರವಿವಾರ ಮಧ್ಯಾಹ್ನ 3:15ರ ಸುಮಾರಿಗೆ ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬಳಿಯಲ್ಲಿರುವ ಮೀಠೀ ನದಿಯ ಬಳಿಗೆ ಸಚಿನ್ ವಾಜೆಯನ್ನು ಎನ್‌ಐಎ ಅಧಿಕಾರಿಗಳು ಕರೆದು ಕೊಂಡು ಬಂದಿದ್ದರು. ನದಿಯಿಂದ ಒಟ್ಟು 11 ಸಾಮಗ್ರಿಗಳನ್ನು ಹೊರತಗೆಯಲಾಗಿದ್ದು, ಅವುಗಳಲ್ಲೊಂದಾದ ಸಿಪಿಯು, ಮಹಾರಾಷ್ಟ್ರ ಸರಕಾರಿ ಕಚೇರಿಗಳಲ್ಲಿನ ಕಂಪ್ಯೂಟರ್‌ಗಳಲ್ಲಿ ಬಳಸುವ ಸಿಪಿಯು ಮಾದರಿಯಲ್ಲೇ ಇದೆ ಎಂದು ಮೂಲಗಳು ತಿಳಿಸಿವೆ.
ದೇಶ್‌ಮುಖ್ ಪ್ರಕರಣದ ತನಿಖೆ : ಇದೇ ಪ್ರಕರಣದಲ್ಲಿ, ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿರ್ಧರಿಸಿದ್ದಾರೆ ಎಂದು ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.
ಆ್ಯಕ್ಸಿಡೆಂಟಲ್ ಗೃಹ ಸಚಿವ!
ಎನ್‌ಸಿಪಿ ನಾಯಕ ಅನಿಲ್ ದೇಶ್ ಮುಖ್ ಆಕಸ್ಮಿಕವಾಗಿ ಗೃಹಸಚಿವರಾದವರು ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಸರಕಾರ ರಚನೆ ವೇಳೆ, ಗೃಹ ಇಲಾಖೆ ಜವಾಬ್ದಾರಿ ಹೊರಲು ಎನ್‌ಸಿಪಿಯ ಜಯಂತ್ ಪಾಟೀಲ್, ದಿಲೀಪ್ ವಾಲ್ಸೆ-ಪಾಟೀಲ್ ಅವರು ನಿರಾಕರಿಸಿದರು. ಹಾಗಾಗಿ, ಆ ಸ್ಥಾನ ದೇಶ್‌ಮುಖ್ ಪಾಲಾಯಿತು ಎಂದಿದ್ದಾರೆ.
ಸಿಟ್ಟಿಗೆದ್ದ ಪವಾರ್: ಅನಿಲ್ ದೇಶ್‌ಮುಖ್ ವಿರುದ್ಧ ಟೀಕೆ ಮಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್ ವಿರುದ್ಧ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಹಾರಾಷ್ಟ್ರ ಸಮ್ಮಿಶ್ರ ಸರಕಾರವನ್ನು ಹಾಳುಗೆಡವುವಂಥ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದಿದ್ದಾರೆ.