ಕ್ರೈಸ್ಟ್‌ಚರ್ಚ್: ಇಬ್ಬರು “ಹೆನ್ರಿ’ಗಳಿಂದ ಕ್ರೈಸ್ಟ್‌ಚರ್ಚ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭರ್ಜರಿ ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ “ಸ್ಯಾಂಡ್‌ವಿಚ್’ ಆಗಿದೆ!
ಮೊದಲ ದಿನ ಮ್ಯಾಟ್ ಹೆನ್ರಿ ಬೌಲಿಂಗ್ ದಾಳಿಗೆ (23ಕ್ಕೆ 7) ತತ್ತರಿಸಿದ ದಕ್ಷಿಣ ಆಫ್ರಿಕಾ 95 ರನ್ನಿಗೆ ಆಲೌಟ್ ಆಗಿತ್ತು. ದ್ವಿತೀಯ ದಿನದಾಟದಲ್ಲಿ ಹೆನ್ರಿ ನಿಕೋಲ್ಸ್ ಸೆಂಚುರಿ ಬಾರಿಸಿ ಮೆರೆದರು. ನ್ಯೂಜಿಲ್ಯಾಂಡ್ 482 ರನ್ ಪೇರಿಸಿ, 387 ರನ್ನುಗಳ ಬೃಹತ್ ಮುನ್ನಡೆ ಗಳಿಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ಕುಸಿತ ಅನುಭವಿಸಿರುವ ದಕ್ಷಿಣ ಆಫ್ರಿಕಾ 3 ವಿಕೆಟಿಗೆ 34 ರನ್ ಮಾಡಿ ಪರದಾಡುತ್ತಿದೆ. ಆರಂಭಿಕರಾದ ಸರೆಲ್ ಇರ್ವಿ ಮತ್ತು ಡೀನ್ ಎಲ್ಗರ್ ಖಾತೆಯನ್ನೇ ತೆರೆಯಲಿಲ್ಲ.
ಎಡಗೈ ಬ್ಯಾಟ್ಸ್‌ಮನ್ ನಿಕೋಲ್ಸ್ 105 ರನ್ ಬಾರಿಸಿದರು. ಇದು ಅವರ 8ನೇ ಟೆಸ್ಟ್ ಶತಕ. 163 ಎಸೆತಗಳ ಈ ಆಟದಲ್ಲಿ 11 ಬೌಂಡರಿ ಒಳಗೊಂಡಿತ್ತು. ವಿಕೆಟ್ ಕೀಪರ್ ಟಾಮ್ ಬ್ಲಿಂಡೆಲ್ ಕೇವಲ 4 ರನ್ನಿನಿಂದ ಶತಕ ವಂಚಿತರಾದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಮ್ಯಾಟ್ ಹೆನ್ರಿ ಕೊನೆಯವರಾಗಿ ಆಡಲಿಳಿದು ಅಜೇಯ 58 ರನ್ ಬಾರಿಸಿದ್ದೊಂದು ವಿಶೇಷ. ಬ್ಲಿಂಡೆಲ್-ಹೆನ್ರಿ ಅಂತಿಮ ವಿಕೆಟಿಗೆ 94 ರನ್ ಪೇರಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-95 ಮತ್ತು 3 ವಿಕೆಟಿಗೆ 34 (ಟೆಂಬ ಬವುಮ ಬ್ಯಾಟಿಂಗ್ 22, ಸೌಥಿ 20ಕ್ಕೆ 2, ಹೆನ್ರಿ 13ಕ್ಕೆ 1). ನ್ಯೂಜಿಲ್ಯಾಂಡ್-482 (ನಿಕೋಲ್ಸ್ 105, ಬ್ಲಿಂಡೆಲ್ 96, ಮ್ಯಾಟ್ ಹೆನ್ರಿ ಔಟಾಗದೆ 58, ಒಲಿವರ್ 100ಕ್ಕೆ 3, ಐಡನ್ ಮಾರ್ಕ್‌ರಮ್ 27ಕ್ಕೆ 2, ಜಾನ್ಸೆನ್ 96ಕ್ಕೆ 2, ಕಾಗಿಸೊ ರಬಾಡ 113ಕ್ಕೆ 2).