Advertisement

ಬಂದರು ದಾಟುವುದು! 

03:45 AM May 07, 2017 | |

Strong Son of God, immortal Love, 
Whom we, that have not seen thy face, 
By faith, and faith alone, embrace, 
Believing where we cannot prove;
-Tennyson, “In Memoriam”
ನಾನು ಕೆಲವೊಮ್ಮೆ ನನಗಿಷ್ಟ ಬಂದ ಇಂಗ್ಲಿಷ್‌ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನ ನಡೆಸುತ್ತ ಬಂದದ್ದಿದೆ. ಒಮ್ಮೆ ನನಗೆ ಟೆನ್ನಿಸನ್‌ನ Crossing the bar ಎಂಬ ಕವಿತೆಯನ್ನು ಅನುವಾದಿಸೋಣ ಎನಿಸಿತು. ಆಲ್‌ಫ್ರೆಡ್‌ ಲಾರ್ಡ್‌ ಟೆನ್ನಿಸನ್‌ (1809-1892) ಹತ್ತೂಂಬತ್ತನೆಯ ಶತಮಾನದ ಮಿಕ್ಕ ಭಾಗವನ್ನೂ ಆವರಿಸಿಕೊಂಡ ಮಹತ್ವದ ವಿಕ್ಟೋರಿಯನ್‌ ಕವಿ. 1850ರಲ್ಲಿ ಅವನು ಪ್ರಕಟಿಸಿದ In Memoriam A.H.H ಎಂಬ ಸುದೀರ್ಘ‌ ಕವನ ಲೋಕಪ್ರಸಿದ್ಧವಾದುದು. ಇದನ್ನವನು ಅಕಾಲ ಮೃತ್ಯುವಿಗೊಳಗಾದ ತನ್ನ ಕೇಂಬ್ರಿಜ್‌ ಮಿತ್ರ ಆರ್ಥರ್‌ ಹೆನ್ರಿ ಹಾಲಮ್‌ ಕುರಿತಾಗಿ ಬರೆದುದು. ರಾಣಿ ವಿಕ್ಟೋರಿಯಾಳಿಗೆ ಈ ಕವನ ಬಹಳ ಪ್ರಿಯವಾಗಿದ್ದಿತಂತೆ. ತನ್ನ ಗಂಡನ ಸಾವಿನ ನಂತರ ತನ್ನ ಮನಸ್ಸಿಗೆ ಸಾಂತ್ವನ ನೀಡಿದ ಕವನ ಇದು ಎಂದು ಆಕೆ ಹೇಳಿಕೊಂಡಿ¨ªಾಳೆ. ಮೂಲತಃ ಇದೊಂದು ದುಃಖಗೀತೆಯಾದರೂ, ಇದರಲ್ಲಿ ಅನೇಕ ವಿಷಯಗಳು ಅಡಕವಾಗಿವೆ: ಒಂದು ರೀತಿಯಲ್ಲಿ ಕಾಲದ ಕೈಗನ್ನಡಿಯಂತೆಯೂ ಇದೆ. ಅದು ಪ್ರಕಟವಾದ ವರ್ಷವೇ ಟೆನ್ನಿಸನ್‌ ಇಂಗ್ಲೆಂಡಿನ ಪ್ರಸಿದ್ಧ ರಾಷ್ಟ್ರಕವಿ ಸ್ಥಾನಕ್ಕೆ ಆಯ್ಕೆಯಾದ. (ಹಿರಿಯ ಕವಿ ವರ್ಡ್ಸ್‌ವರ್ತ್‌ನ ಸಾವಿನಿಂದ ಅದು ತೆರವಾಗಿತ್ತು.) 

Advertisement

ತನ್ನ ದೀರ್ಘ‌ ಜೀವನಾವಧಿಯಲ್ಲಿ ಟೆನ್ನಿಸನ್‌ ಅನೇಕ ಕವಿತೆಗಳನ್ನು ರಚಿಸಿದ್ದಾನೆ; ಕೆಲವು ನಾಟಕಗಳನ್ನೂ ಬರೆದಿದ್ದಾನೆ. Crossing the bar  ಅವನು ಬರೆದುದು ಜೀವಿತಾವಧಿಯ ಕೊನೆಯಲ್ಲಿ, ನಿಖರವಾಗಿ 1889ರಲ್ಲಿ. ಇದೊಂದು 16 ಸಾಲುಗಳ ಚಿಕ್ಕ ಕವಿತೆ:
Sunset and evening star,
And one clear call for me!
And may there be no moaning of the bar,
When I put out to sea,
But such a tide as moving seems asleep,
Too full for sound and foam,
When that which drew from out the boundless deep
Turns again home.

Twilight and evening bell,
And after that the dark!
And may there be no sadness of farewell,
When I embark;

For tho’ from out our bourne of Time and Place
The flood may bear me far,
I hope to see my Pilot face to face
When I have crost the bar.
(“Crossing the Bar”)
ಇದು ಕವಿಗೆ ಇಷ್ಟವಾದ ಕವಿತೆಯೆಂದು ಅನಿಸುತ್ತದೆ; ಮುಂದಿನ ತನ್ನ ಕವಿತೆಗಳ ಆವೃತ್ತಿಯಲ್ಲಿ ಇದನ್ನು ಕೊನೆಯದಾಗಿ ಇರಿಸಬೇಕೆಂದು ಅವನು ತನ್ನ ಮಗ ಹಾಲಮಿಗೆ (ತನ್ನ ಗೆಳೆಯನ ನೆನಪಿಗೆ ಅವನು ಮೊದಲ ಮಗನಿಗೆ ಅದೇ ಹೆಸರನ್ನು ಇರಿಸಿದ್ದ) ಹೇಳಿದ್ದನಂತೆ. ಇದನ್ನೂ ಒಂದು ಚರಮ ಗೀತೆಯ ರೀತಿಯಲ್ಲೆ ಅವನು ಬರೆದುದು ಸ್ಪಷ್ಟವೇ ಇದೆ. ಇದು ಮಾತ್ರ ಸ್ವಂತಕ್ಕೆ ಸಂಬಂಧಿಸಿದ ಚರಮ ಗೀತೆ. ಆದರೆ ಕವಿಯೊಬ್ಬ ಬರೆದುದು ಎಂದೂ ಅವನ ಸ್ವಂತದ್ದು ಎನಿಸುವುದಿಲ್ಲ, ಅದು ಯಾರದ್ದು ಬೇಕಾದರೂ ಆಗುತ್ತದೆ; ಅರ್ಥಾತ್‌ ಈ ಕವಿತೆಯಲ್ಲಿ ಬರುವ ಭಾವ ಯಾರಲ್ಲಿ ಬೇಕಾದರೂ ಮೂಡಬಹುದು. ಅದೇ ಕಾರಣಕ್ಕೆ ಇದು ಹಲವು ಓದುಗರನ್ನು ಆಕರ್ಷಿಸಿದ ಕವಿತೆಯಾಗಿದೆ, ಹಾಗೂ ಟೆನ್ನಿಸನ್‌ ಕಾವ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸಿದೆ. 

ಇದೇ ಕಾರಣಕ್ಕೆ ನಾನು ಇದನ್ನು ಅನುವಾದಕ್ಕೆ ಆರಿಸಿಕೊಂಡದ್ದು; ಇದು ವಿದೇಶಿ, ನಮ್ಮ ಸಾಂಸ್ಕೃತಿಕ ವಲಯಕ್ಕೆ ಸೇರಿದ್ದಲ್ಲ ಎಂದು ಮುಂತಾದ ಭಾವನೆಗಳು ನನ್ನಲ್ಲಿ ಮೂಡಲೇ ಇಲ್ಲ. ಆದರೆ ಕೆಲವು ಭಾಷಾಂತರ ಸಮಸ್ಯೆಗಳು ಎದುರಾದವು: ಉದಾಹರಣೆಗೆ, ಕ್ರಾಸಿಂಗ್‌ ದ ಬಾರ್‌ ಎಂದರೇನು? ಕವಿತೆಯಲ್ಲಿ ಬರುವ ಪೈಲಟ್‌ ಎಂಬ ಪದವನ್ನು ಹೇಗೆ ಅನುವಾದಿಸಲಿ? ಎಂದು ಮುಂತಾಗಿ. ಅಲ್ಲದೆ ಕವಿತೆಯಲ್ಲಿ ಬರುವ ಸಂಕೀರ್ಣ ವಾಕ್ಯ ಸರಣಿಯೂ ಒಂದು ಸವಾಲಾಗಿತ್ತು. ಕ್ರಾಸಿಂಗ್‌ ದ ಬಾರ್‌  “ಅಳಿವೆ ದಾಟುವುದು’ ಎಂದಿರಲಿ, ಪೈಲೆಟ್‌, ಕಪ್ತಾನ ಎಂದಿರಲಿ ಎಂದುಕೊಂಡೆ. ಹೀಗೆಲ್ಲಾ ಯೋಚಿಸುತ್ತಿರಬೇಕಾದರೆ ನನ್ನ ಕಣ್ಣಿಗೆ ಬಿ. ಎಂ. ಶ್ರೀ. ಯವರು ಎಷ್ಟೋ ವರ್ಷಗಳ ಹಿಂದೆಯೇ ಮಾಡಿದ ಇದೇ ಕವಿತೆಯ ಸೊಗಸಾದ ಕನ್ನಡಾನುವಾದ ಬಿತ್ತು. ಇದು ಅವರ “ಇಂಗ್ಲಿಷ್‌ ಗೀತೆಗಳು’ ಸಂಕಲನದ ಕೊನೆ ಕವಿತೆಗೆ ಮೊದಲು ಬರುತ್ತದೆ:

Advertisement

ಹೊತ್ತಿಳಿವು, ಸಂಜೆಬೆಳ್ಳಿ
ನನ್ನ ಕರೆದೊಂದು ಕೂಗು!
ಇಲ್ಲದಿರಲೇನೇನು ಬಂದರಿನ ನರಳಾಟ,
ನಾ ಕಡಲ ಸೇರುವಾಗ;
ಹೊರಳಿ ನಿ¨ªೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ
ತುಂಬುದೆರೆಯುಬ್ಬುಹೊನಲು, 
ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು
ಮರಳಿ ಮನೆಗೈದುವಾಗ!

ಕಣ್ಮುಬ್ಬು , ಸಂಜೆಗಂಟೆ, 
ಆ ಬಳಿಕ ಕಗ್ಗತ್ತಲೆ!
ಇಲ್ಲದಿರಲೇನೇನು ಕಳುಹುವರ ಕೊರಗಾಟ,
ನಾ ಹಡಗನೇರುವಾಗ;
ಈ ನಮ್ಮ ಹೊತ್ತು ಕಡೆ ಗಡಿಯಿಂದ ಬಲು ದೂರ
ಹೊನಲೆನ್ನ ಕೊಂಡೊಯ್ದರೂ,
ನನ್ನ ತಾರಕನ ಮುಖ ಕಾಣುವುದ ನಂಬಿಹೆನು
ಬಂದರನು ದಾಟಿದಾಗ.        (ಬಂದರು ದಾಟುವುದು)
ಎಷ್ಟೊಂದು ಸೊಗಸಾದ ಅನುವಾದ! ಬಿ.ಎಂ.ಶ್ರೀ. ಕನ್ನಡ ನವೋದಯ ಕಾಲದ ಕವಿ. ಆ ಕಾಲದ ಕವಿಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸುವಾಗ ಅನುವಾದವನ್ನೊಂದು ಪುನರ್‌ಸೃಷ್ಟಿಯಾಗಿ ನೋಡುತ್ತಿದ್ದರೆಂದು ತೋರುತ್ತದೆ. “ಇಂಗ್ಲಿಷ್‌ ಗೀತೆಗಳು’ ಕೃತಿಯ ಮುನ್ನುಡಿಯಲ್ಲಿ  ಶ್ರೀಯವರು ತಮ್ಮ ವಿಧಾನವನ್ನು ಹೀಗೆ ಹೇಳಿ¨ªಾರೆ: “”ಭಾಷಾಂತರಕಾರರು ಕೊಲೆಗಾರರು- ಎಂದು ಪಾಶ್ಚಾತ್ಯರಲ್ಲಿ ಒಂದು ಗಾದೆಯುಂಟು. ಆ ಅಪವಾದವನ್ನು ತಪ್ಪಿಸಿಕೊಂಡಿರುವೆನೆಂದು ನಾನು ತಿಳಿದುಕೊಂಡಿಲ್ಲ. ಆದರೆ, ನನ್ನ ಬುದ್ಧಿಬಲವಿರುವ ಮಟ್ಟಿಗೂ ಮೂಲವನ್ನು ಪ್ರತಿಬಿಂಬಿಸುವ ಕರ್ತವ್ಯವನ್ನೇ ಮುಂದಿಟ್ಟುಕೊಂಡು ಕೆಲಸ ಮಾಡಿದ್ದೇನೆ. ಹಲವು ಕಡೆ ಹೆಸರು, ಭಾವ ಮುಂತಾದುವು ಕನ್ನಡ ಜನಕ್ಕೆ ಹೊಂದಿಕೆಯಾಗುವಂತೆ ಮಾರ್ಪಾಡಾಗಿದ್ದರೂ, ಸಾಮಾನ್ಯವಾಗಿ ಪದಪ್ರಯೋಗ, ಶೈಲಿ, ಛಂದಸ್ಸು , ಭಾವ, ರಸ- ಇವೆಲ್ಲವೂ ಮೂಲ ಕವಿಯ ವ್ಯಕ್ತಿತ್ವವನ್ನೇ ಅನುಸರಿಸಿವೆ. ಕನ್ನಡದ ಜಾಯಮಾನವನ್ನು ಮೀರದೆ ಎಷ್ಟುಮಟ್ಟಿಗೆ ಛಂದಸ್ಸು ಇಂಗ್ಲಿಷ್‌ ಛಂದಸ್ಸುಗಳನ್ನು ಹೋಲಬಹುದೋ ಅಷ್ಟು ಮಟ್ಟಿಗೂ ಆ ಪದ್ಯಗಳನ್ನು ಕನ್ನಡಕ್ಕೆ ಇಳಿಸುವುದಕ್ಕೆ ಪ್ರಯತ್ನಪಟ್ಟಿರುತ್ತೇನೆ”- ಹೀಗೆ ಶ್ರೀಯವರು ಇಂಗ್ಲಿಷ್‌ ಮೂಲವನ್ನು ಕಡಗಣಿಸಿಯೂ ಇಲ್ಲ, ಕನ್ನಡದ ಜಾಯಮಾನವನ್ನು ಬಿಟ್ಟೂ ಇಲ್ಲ. ಇದಕ್ಕೆ ಅವರು ಕನ್ನಡಿಸಿದ ಪ್ರತಿಯೊಂದು ಕವಿತೆಯೂ ಸಾಕ್ಷಿ. ಅದೆಲ್ಲದರ ಕುರಿತು ನಾನಿಲ್ಲಿ ಮಾತಾಡುವುದಕ್ಕೆ ಅವಕಾಶವಿಲ್ಲ. ಕೇವಲ ಮೇಲಿನ ಕವಿತೆಯತ್ತ ಮಾತ್ರ ದೃಷ್ಟಿ ಹರಿಸಿದರೆ ಸಾಕು. ಕ್ರಾಸಿಂಗ್‌ ದ ಬಾರ್‌ನ್ನು ಅವರು “ಬಂದರು ದಾಟುವುದು’ ಎಂದು ಮಾಡಿಕೊಂಡಿ¨ªಾರೆ. ನನ್ನ ಮನಸ್ಸಿನಲ್ಲಿದು “ಅಳಿವೆ ದಾಟುವುದು’ ಎಂದು ಬಂದಿತ್ತು. ಟೆನ್ನಿಸನ್‌ನ ಇಡೀ ಕವಿತೆ ಒಂದು ರೂಪಕ- ಜನಮನದಲ್ಲೂ ಸಾಹಿತ್ಯದಲ್ಲೂ ಸಾಕಷ್ಟು ಬಳಕೆಯಾಗಿರುವ ರೂಪಕವೇ: ಇದು ಜೀವದ ಪ್ರಯಾಣವನ್ನು ಸೂಚಿಸುತ್ತದೆ, ಜೀವಯಾನವನ್ನು, ಬದುಕಿನಿಂದ ಸಾವಿಗೆ, ಸಾವನ್ನು ದಾಟಿ ಅನಂತತೆಯ ಕಡೆಗೆ. ಇದೊಂದು ಬಂದರು ಇದ್ದ ಹಾಗೆ. ಜೀವನ ನೌಕೆ ಇಹದಿಂದ ಪರದ ಕಡೆಗೆ ಸಾಗುತ್ತದೆ. ಹಾಗೆ ಸಾಗುವಾಗ ಸಮುದ್ರ (ಅನಂತತೆಯನ್ನು ಸೂಚಿಸುವ ರೂಪಕ) ತುಂಬಿಕೊಂಡಿರಲಿ, ತುಂಬಿಕೊಂಡಿದ್ದೂ ಪ್ರಶಾಂತವಾಗಿರಲಿ ಎಂದು ಕವಿ ಪ್ರಾರ್ಥಿಸುತ್ತಾನೆ. ಟಿನ್ನಿಸನ್‌ ಇಲ್ಲಿ ಅಳಿವೆಯನ್ನು ತರುವುದು ಅದೊಂದು ಅನಗತ್ಯದ ತಡೆಯಾಗಬಹುದು ಎಂಬ ಕಾರಣಕ್ಕೆ. ಸಾಕಷ್ಟು ಭರತವಿರಬೇಕು, ಆದರೆ ಭೋರ್ಗರೆತ (ಸದ್ದುಗದ್ದಲ) ಇರಬಾರದು, ಆಗ ನದೀಮುಖದಿಂದ ಸಮುದ್ರಕ್ಕೆ ದಾಟುವುದು ಸುಲಭವಾಗುತ್ತದೆ. ಕವಿ ಬಯಸುವುದು ಅನಾಯಾಸದ ಮರಣವನ್ನು. ಅದು ಮರಣವೂ ಅಲ್ಲ, ಒಂದೆಡೆಯಿಂದ ಇನ್ನೊಂದೆಡೆಗೆ, ಅಪೂರ್ಣತೆಯಿಂದ ಪೂರ್ಣತೆಯೆಡೆಗೆ, ಯಾನವನ್ನು. (ಇನ್‌ ಮೆಮೋರಿಯಮ್‌ನಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿ ಸೂಚಿತವಾಗಿದೆ.) “ಹೊರಳಿ ನಿ¨ªೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ’ ಎಂಬ ಸಾಲು ಬಹಳ ಸೊಗಸಾಗಿ ಬಂದಿದೆ. ಶ್ರೀಯವರು “ಬಂದರು’ ಎಂಬ ಪದವನ್ನು ಬಳಸಿದುದು ನೌಕೆಗಳ ಯಾತಾಯಾತದ ಸ್ಥಳವನ್ನು ಸೂಚಿಸುವುದಕ್ಕಾಗಿ ಇರಬಹುದು. 

    ಕವಿತೆಯ ಮೂರನೆಯ ಚರಣದಲ್ಲಿ ಬರುವ twiliglit ಎಂಬ ಪದವನ್ನು ಶ್ರೀಯವರು “ಕಣ್ಮುಬ್ಬು’ ಎಂದು ಅನುವಾದಿಸುತ್ತಾರೆ; (ನನ್ನ ಆಕರ- “ಶ್ರೀ ಸಾಹಿತ್ಯ’, ಮೈಸೂರು ವಿಶ್ವವಿದ್ಯಾನಿಲಯ, 1983.) ಇದು ಬಹುಶಃ “ಕಣ್ಮಬ್ಬು’ ಎಂದು ಇರಬೇಕೆನಿಸುತ್ತದೆ. ಏನಿದ್ದರೂ, ಮಬ್ಬುಗತ್ತಲು, ಸಂಜೆಗತ್ತಲು, ಮುಸ್ಸಂಜೆ ಮುಂತಾದ ಬಳಕೆಯಲ್ಲಿರುವ ಪದಗಳನ್ನು ತೊರೆದು ಶ್ರೀಯವರು “ಕಣ್ಮುಬ್ಬು’ (ಅಥವಾ ಕಣ್ಮಬ್ಬು) ಎಂಬ ಪದವನ್ನಿಲ್ಲಿ ಯಾಕೆ ಸೃಷ್ಟಿಸಿದರೋ ತಿಳಿಯದು. ಇಂಗ್ಲಿಷ್‌ನಲ್ಲಾದರೆ “ಟ್ಟೈಲೈಟ್‌’ ಎನ್ನುವುದು ಸಾಮಾನ್ಯವಾದ ಪದ. 

ಇನ್ನು “ಪೈಲಟ್‌’ ಎನ್ನುವ ಪದವನ್ನು ಶ್ರೀಯವರು “ತಾರಕ’ ಎಂದು ಭಾಷಾಂತರಿಸುತ್ತಾರೆ; “ತಾರಕ’ ಎಂಬ ಪದಕ್ಕೆ ಅನೇಕ ಅರ್ಥಗಳಿವೆ, ಅವುಗಳಲ್ಲಿ “ನಡೆಸುವವ, ರಕ್ಷಿಸುವವ, ಪಾರುಮಾಡುವವ’ ಎನ್ನುವುದು ಒಂದು. ಕವಿತೆಯ ಸಂದರ್ಭದಲ್ಲಿ ಮೂಡುವ ಅರ್ಥ ಇದುವೇ ಆಗಿದ್ದು ಈ ಪದ ಇಲ್ಲಿ ಇಂಗ್ಲಿಷ್‌ನ “ಪೈಲಟ್‌’ಗೆ ಸರಿಸಮಾನವಾಗಿದೆ. “ತಾರಕ’ ಎನ್ನುವ ಪದ ಆ ಅರ್ಥದಲ್ಲೀಗ ಚಾಲ್ತಿಯಲ್ಲಿಲ್ಲ ನಿಜ. ಆದರೇನಾಯಿತು? ಕವಿತೆಗೆ ಸಲ್ಲುವ ಪದ ಅದು. ನವೋದಯದ ಕಾಲದವರಿಗಲ್ಲದೆ ಅಂಥ ಪದ ಬಹುಶಃ ಹೊಳೆಯುತ್ತಿರಲಿಲ್ಲವೇನೋ. ಯಾವುದೇ ಭಾಷೆಯ ಸಾಹಿತ್ಯಕೃತಿಯಲ್ಲಿ ವಿಶ್ವಾತ್ಮಕವಾಗಿರುವ (ಎಂದರೆ ಸಂಸ್ಕೃತಿ ನಿರಪೇಕ್ಷವಾಗಿ) ಮತ್ತು ವಿಶಿಷ್ಟವಾಗಿರುವ (ಆ ಸಂಸ್ಕೃತಿಗೆ ವಿಶಿಷ್ಟವಾಗಿ) ವಿಷಯಗಳಿರುವುದು ಸಾಧ್ಯ; ಮೊದಲನೆಯದನ್ನು ಅನುವಾದಿಸುವುದು ಕಷ್ಟವಲ್ಲ, ಆದರೆ ಎರಡನೆಯದನ್ನು ಅನುವಾದಿಸುವುದು ಕಷ್ಟ. ಜೀವನವೆನ್ನುವುದೊಂದು ಯಾನ, ಅದು ಸಾವಿನಲ್ಲಿ ಕೊನೆಗೊಳ್ಳುವುದಿಲ್ಲ, ಇನ್ನೊಂದು ರೀತಿಯಲ್ಲಿ ಮುಂದುವರಿಯುತ್ತದೆ ಎನ್ನುವ ಕಲ್ಪನೆ ಸಾಧಾರಣವಾಗಿ ಎಲ್ಲ ಸಂಸ್ಕೃತಿಗಳಲ್ಲೂ ಇರುವಂಥದು. ಕವಿತೆಯ ಈ ಆಶಯ ಕನ್ನಡಕ್ಕೆ ವಿಲಕ್ಷಣವೆನಿಸುವುದಿಲ್ಲ. ಆದರೆ ಈ “ಪೈಲೆಟ್‌’ ಎನ್ನುವ ಪದ ಸ್ವಲ್ಪ ಬೇರೆ ರೀತಿಯದು. ದೇವರನ್ನು ಕನ್ನಡದಲ್ಲಿ ಕೂಡ “ಅಂಬಿಗ’ನೆಂದು ಚಿತ್ರಿಸುವ ಪರಂಪರೆಯೇನೋ ಇದೆಯಾದರೂ, ಟೆನ್ನಿಸನ್‌ನ ಕವಿತೆಗೊಂದು ಕ್ರಿಶ್ಚಿಯನ್‌ ವಿಶಿಷ್ಟತೆಯಿದೆ. ಮಿಲ್ಟನ್‌ ಕವಿಯ ಲಿಸಿಡಸ್‌ ಎಂಬ ದುಃಖಗೀತೆ ಯಲ್ಲೂ ಈ ಪದ ಬರುತ್ತದೆ. ಸೈಂಟ್‌ ಪೀಟರನನ್ನು The Pilot of the Galilean Lake ಎಂದು ಅಲ್ಲಿ ಬಣ್ಣಿಸಲಾಗಿದೆ. ಟೆನ್ನಿಸನ್‌ನ ಕವಿತೆಯಲ್ಲಿ “ಪೈಲಟ್‌’ ಎಂದರೆ ದೇವರು. ಇದೊಂದು ಬಿಬ್ಲಿಕಲ್‌ ಕಲ್ಪನೆ. ಶ್ರೀಯವರ ಅನುವಾದದಲ್ಲಿ ಈ ಕ್ರಿಶ್ಚಿಯನ್‌-ವಿಶಿಷ್ಟ ಭಾವನೆ ಬರುವುದಿಲ್ಲ. ಬಹುಶಃ ಅದಕ್ಕೆ ಸಮಾನಾಂತರವಾದ “ಅಂಬಿಗ’ ಎನ್ನುವ ಕಲ್ಪನೆ ಕನ್ನಡದಲ್ಲಿ ಈಗಾಗಲೇ ಇರುವ ಕಾರಣ. 

ಈ ಕವಿತೆಯನ್ನು ಟೆನ್ನಿಸನ್‌ನ ಹಿರಿಯ ಸಮಕಾಲೀನ ಕವಿ ಮತ್ತು ಧರ್ಮಜ್ಞ ಜಾನ್‌ ಹೆನ್ರಿ ನ್ಯೂಮನ್‌ 1833ರಲ್ಲಿ ರಚಿಸಿದ Lead, Kindly Light ಎಂಬ ಪ್ರಾರ್ಥನಾಗೀತದೊಂದಿಗೆ ಹೋಲಿಸಬಹುದು. ಅದನ್ನೂ ಶ್ರೀಯವರು ಪ್ರಾರ್ಥನೆ ಎಂಬ ಹೆಸರಿನ ಕವಿತೆಯಾಗಿ ಅನುವಾದಿಸಿದ್ದಾರೆ (“ಕರುಣಾಳು ಬಾ ಬೆಳಕೆ’); ಬಹುಶಃ ಇದುವೇ, ನ್ಯಾಯವಾಗಿಯೂ, ಬಂದರು ದಾಟುವುದು ಕವಿತೆಗಿಂತ ಹೆಚ್ಚು ಪ್ರಸಿದ್ಧವಾಗಿರುವುದು. ಇವೆರಡು ಮೂಲಗಳನ್ನೂ, ಶ್ರೀಯವರ ಅನುವಾದಗಳನ್ನೂ ಹೋಲಿಸಿ ನೋಡುವುದು ಸರಿಯಾದೀತು. (“ಇಂಗ್ಲಿಷ್‌ ಗೀತೆಗಳು’ ಕೃತಿಯಲ್ಲಿ ನ್ಯೂಮನ್‌ನ ಈ ಕವಿತೆಯ ಅನುವಾದ ಕೂಡ “ಬಂದರು ದಾಟುವುದು’ ಕವಿತೆಯ ನಿಕಟಪೂರ್ವದಲ್ಲೇ ಇದೆ.) 

ಕೆ. ವಿ. ತಿರುಮಲೇಶ್‌
 

Advertisement

Udayavani is now on Telegram. Click here to join our channel and stay updated with the latest news.

Next