Advertisement

ಚೆನ್ನೈಗೆ ಮತ್ತೂಂದು ಆಘಾತ ಐಪಿಎಲ್‌ನಿಂದ ಹಿಂದೆ ಸರಿದ ಹರ್ಭಜನ್‌

09:29 PM Sep 04, 2020 | mahesh |

ಹೊಸದಿಲ್ಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮತ್ತೂಂದು ಆಘಾತ ಎದುರಾಗಿದೆ. ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ “ವೈಯಕ್ತಿಕ ಕಾರಣ’ಗಳಿಂದ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದಾರೆ.

Advertisement

ಕಳೆದೆರಡು ವರ್ಷ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ 40 ವರ್ಷದ ಹರ್ಭಜನ್‌ ಸಿಂಗ್‌, ಪ್ರಸ್ತುತ ಕುಟುಂಬದೊಂದಿಗೆ ಜಾಲಂಧರ್‌ನಲ್ಲಿ ಇದ್ದಾರೆ. ಪತ್ನಿ ಗೀತಾ ಮತ್ತು 4 ವರ್ಷದ ಮಗಳು ಹಿನಾಯ ಜತೆಯಲ್ಲಿದ್ದಾರೆ. ತಮಗೆ ಏಕಾಂತ ಬೇಕಿದೆ ಎಂದು ಹೇಳಿದ್ದಾರೆ. ತಾಯಿಯ ಅನಾರೋಗ್ಯದಿಂದ ಅವರು ಚೆನ್ನೈ ತಂಡದೊಂದಿಗೆ ಯುಎಇಗೆ ಪಯಣಿಸಿರಲಿಲ್ಲ. ಚೆನ್ನೈಯಲ್ಲಿ ನಡೆದ ಶಿಬಿರದಲ್ಲೂ ಪಾಲ್ಗೊಂಡಿರಲಿಲ್ಲ. ಈಗ ಕೂಟದಿಂದಲೇ ಹಿಂದೆ ಸರಿದಿದ್ದಾರೆ.

“ಐಪಿಎಲ್‌ನಿಂದ ಹೊರಗುಳಿಯುವ ನನ್ನ ನಿರ್ಧಾರವನ್ನು ಈಗಾಗಲೇ ಸಿಎಸ್‌ಕೆ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಈ ಕಠಿನ ಸಮಯದಲ್ಲಿ ನಾನು ವೈಯಕ್ತಿಕ ಕಾರಣಗಳಿಂದ ಕೂಟದಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಕುಟುಂಬಕ್ಕೆ ಏಕಾಂತ ಬೇಕಿದೆ. ನನ್ನ ಈ ನಿರ್ಧಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸಿದ್ದೇನೆ’ ಎಂದು ಹರ್ಭಜನ್‌ ಹೇಳಿದ್ದಾರೆ. ಅವರನ್ನು ಈ ಬಾರಿ 2 ಕೋಟಿ ರೂ. ಮೊತ್ತಕ್ಕೆ ಚೆನ್ನೈ ಖರೀದಿಸಿತ್ತು.

ಹೃದಯ ಯುಎಇಯಲ್ಲಿ…
“ನನ್ನ ಈ ನಿರ್ಧಾರವನ್ನು ಸಿಎಸ್‌ಕೆ ಆಡಳಿತ ಮಂಡಳಿ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದೆ. ಇದಕ್ಕೆ ಕೇವಲ ಕೃತಜ್ಞತೆ ಸಲ್ಲಿಸಿದರೆ ಸಾಲದು. ನಾನಿಲ್ಲಿದ್ದರೂ ನನ್ನ ಹೃದಯ ಯುಎಇಯಲ್ಲಿದೆ’ ಎಂದಿದ್ದಾರೆ ಟರ್ಬನೇಟರ್‌ ಖ್ಯಾತಿಯ ಭಜ್ಜಿ.
ಚೆನ್ನೈ ತಂಡದಲ್ಲಿ 13 ಕೋವಿಡ್ ಪ್ರಕರಣ ಕಂಡುಬಂದದ್ದರಿಂದ ಹರ್ಭಜನ್‌ ಭೀತಿಗೊಳಗಾಗಿದ್ದಾರೆ. ಇಂಥ ಸಂದರ್ಭದಲ್ಲಿ ದುಡ್ಡಿಗಿಂತ ಕುಟುಂಬವೇ ಅವರಿಗೆ ಮುಖ್ಯವಾಗಿದೆ ಎಂಬುದಾಗಿ ಹರ್ಭಜನ್‌ ಅವರ ಗೆಳೆಯರೊಬ್ಬರು ಹೇಳಿದ್ದಾರೆ.

150 ವಿಕೆಟ್‌ ಉರುಳಿಸಿರುವ ಹರ್ಭಜನ್‌ ಸಿಂಗ್‌ ಐಪಿಎಲ್‌ ಇತಿಹಾಸದ 3ನೇ ಅತ್ಯಂತ ಯಶಸ್ವಿ ಬೌಲರ್‌ ಆಗಿದ್ದಾರೆ. ಸದ್ಯ ಚೆನ್ನೈ ತಂಡದಲ್ಲಿರುವ ಪ್ರಮುಖ ಸ್ಪಿನ್ನರ್‌ಗಳೆಂದರೆ ಇಮ್ರಾನ್‌ ತಾಹಿರ್‌, ಮಿಚೆಲ್‌ ಸ್ಯಾಂಟ್ನರ್‌ ಮತ್ತು ಪೀಯೂಷ್‌ ಚಾವ್ಲಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next