Advertisement

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಯಾತನೆ

02:04 PM Sep 04, 2018 | |

ಬೀದರ: ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಬೆಳಗ್ಗೆ 5 ಗಂಟೆಗೆ ಏಳುವ ವಿದ್ಯಾರ್ಥಿಗಳು ಶೌಚಾಲಯ ಹಾಗೂ ಸ್ನಾನಕ್ಕೆ ಸರತಿ ಸಾಲು ಹಚ್ಚುವ ಸ್ಥಿತಿಯಿದ್ದು, ಪ್ರತಿನಿತ್ಯ ಮಕ್ಕಳ ಹಕ್ಕುಗಳಿಗೆ ಧಕ್ಕೆ ತರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ 235 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಸಹಿತ ಶಾಲೆ ಇದ್ದಾಗಿದ್ದು, ಪ್ರತಿನಿತ್ಯ ಶಾಲೆಯ ಮಕ್ಕಳು ಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ವಸತಿ ನಿಲಯದಲ್ಲಿ ಯಾವುದೇ ಸೌಕರ್ಯಗಳು ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಪ್ರತಿನಿತ್ಯ ಐದು ಗಂಟೆಗೆ ಏಳುವ ವಿದ್ಯಾರ್ಥಿನಿಯರು ಮೊದಲಿಗೆ ಶೌಚಾಲಯಕ್ಕೆ ತೆರಳಲು ಅರ್ಧಗಂಟೆ ಸಾಲಿನಲ್ಲಿ ನಿಲ್ಲಬೇಕು. ನಂತರ ಸ್ನಾನ ಮಾಡಲು ಕೂಡ ಅರ್ಧ ಗಂಟೆ ಸಾಲು, ಸ್ನಾನಕ್ಕೆ ವಿದ್ಯಾರ್ಥಿಗಳೇ ನೆಲ ಮಹಡಿಯಿಂದ ಎರಡನೇ
ಮಹಡಿಗೆ ನೀರು ತೆಗೆದುಕೊಂಡು ಹೊಗಬೇಕು.

ಅಲ್ಲದೇ ಬಟ್ಟೆ ತೊಳೆಯಲೂ ಸರತಿ ಸಾಲಿನಲ್ಲಿ ನಿಲ್ಲಬೇಕು. ನೆಲದಮೇಲೆ ಮಲಗುವ, ಶಾಲೆಯಲ್ಲಿ ಕೂಡ ನೆಲದ ಮೇಲೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು ಸದ್ಯ ಓದುವುದೇ ಬೇಡ ಎಂಬ ಸ್ಥಿತಿಗೆ ಬಂದಿದ್ದಾರೆ. 

ಒಟ್ಟಾರೆ ಮಕ್ಕಳ ಅನುಸಾರ ಯಾವುದೇ ಮೂಲ ಸೌಕರ್ಯಗಳು ವಸತಿ ಶಾಲೆಯಲ್ಲಿ ಇಲ್ಲ ಎಂಬುದು ವಿದ್ಯಾರ್ಥಿನಿಯರ ಆರೋಪವಾಗಿದ್ದು, ಪಾಲಕರು ಕೂಡ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯುವ ಆಲೋಚನೆಯಲ್ಲಿದ್ದಾರೆ.

ಯಾಕೆ ಸಮಸ್ಯೆ: ಹಳ್ಳಿಖೇಡ(ಕೆ) ಗ್ರಾಮದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಗಣದಲ್ಲಿಯೇ ಕೆಲ ವರ್ಷಗಳಿಂದ ಈ ಶಾಲೆಕೂಡ ನಡೆಯುತ್ತಿತ್ತು. ಅಲ್ಲಿ ಎಲ್ಲ ಮೂಲ ಸೌಕರ್ಯಗಳು ಮತ್ತು ಸುಸಜ್ಜಿತ ವಾತಾವರಣ ಇತ್ತು ಎಂಬುದು ವಿದ್ಯಾರ್ಥಿಗಳ ಮಾತು. ಆದರೆ, ಶಾಲೆಯ ಪ್ರಾಚಾರ್ಯ ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.

Advertisement

ಪ್ರಾಚಾರ್ಯರ ಬೇಡಿಕೆ ಅನುಸಾರ ಮೇಲಾಧಿಕಾರಿಗಳು ಪತ್ರ ಬರೆದು ಮೂಲಭೂತ ಸೌಲಭ್ಯ ಪರಿಶೀಲಿಸಿ, ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲು ಸೂಚಿಸಿದ್ದಾರೆ. ಆದರೆ, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಸರ್ಕಾರದ ಹಣ ಲೂಟಿಗೆ ಅಧಿಕಾರಿಗಳು ಸಂಚು ಹಾಕಿದ್ದಾರೆ ಎಂಬುದು ನೂರಾರು ಪಾಲಕರ ಆರೋಪ.

ಪ್ರತಿಭಟನೆ: ಪ್ರತಿನಿತ್ಯ ಮಕ್ಕಳ ಗೋಳು ಕೇಳಿದ ಪಾಲಕರು ಆಕ್ರೋಶಗೊಂಡು ಸೋಮವಾರ ಶಾಲೆ ಹಾಗೂ ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮೀಸಿದ ಪ್ರೊಬೇಷನರಿ ಸಹಾಯಕ ಆಯುಕ್ತ ಡಾ| ನಾಗರಾಜ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಪ್ರೇಮಸಾಗರ ದಾಂಡೇಕರ್‌ ಅವರಿಗೆ ಪಾಲಕರು ಘೇರಾವ್‌ ಹಾಕಿ ಸಮಸ್ಯೆ ಬಗ್ಗೆಹರಿಸುವಂತೆ ಒತ್ತಾಯಿಸಿದರು. 

ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದರೂ ಯಾಕೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಮಕ್ಕಳು ಇಂತಹ ಶಾಲೆಯಲ್ಲಿ ಓದಿದ್ದರೆ ಮಕ್ಕಳ
ಕಷ್ಟ ಏನು ಎಂಬುದು ಅರಿವಾಗುತ್ತದೆ ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಪಾಲಕರ ಗೋಳು: ಹಳ್ಳಿಖೇಡ(ಕೆ) ಮೊರಾರ್ಜಿ ಶಾಲೆಯಲ್ಲಿ ಎಲ್ಲ ವ್ಯವಸ್ಥೆ ಇತ್ತು. ಕೆಲವೊಂದು ಸಮಸ್ಯೆಗಳು ಇದ್ದವು. ಆದರೆ ಅವುಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳಬೇಕಿತ್ತು. ಸರ್ಕಾರದ ಅನುದಾನ ಪಡೆದು ಇತರೆ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಸೌಲಭ್ಯ ನೀಡಬೇಕಿತ್ತು. ಆದರೆ, ಅಧಿ ಕಾರಿಗಳು ಉದ್ದೇಶಪೂರ್ವಕ ಖಾಸಗಿ ಕಟ್ಟಡದ ಮಾಲೀಕರಿಗೆ ಲಾಭ ಮಾಡುವ ನಿಟ್ಟಿನಲ್ಲಿ ಶಾಲೆ ಸ್ಥಳಾಂತರ ಮಾಡಿದ್ದಾರೆ.

ಕಾರಣ ಮಕ್ಕಳು ಯಾತನೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಕುಡಿವ ನೀರು ಸರಿ ಇಲ್ಲದ ಕಾರಣ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯ ತಪಾಸಣೆಗೆ ವೈದ್ಯರು ಅಥವಾ ದಾದಿ ಕೂಡ ಇಲ್ಲ. ಹೆಣ್ಣುಮಕ್ಕಳು ಇರುವ ವಸತಿ ನಿಲಯದಲ್ಲಿ ಯಾರೂ ವಾರ್ಡ್‌ನ್‌ ಇಲ್ಲ. ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲ. ವಸತಿ ನಿಲಯಕ್ಕೆ ಸುತ್ತುಗೋಡೆ ಇಲ್ಲ. ವಿದ್ಯಾರ್ಥಿಗಳ ಅನುಸಾರು ಶೌಚಾಲಯಗಳ ವ್ಯವಸ್ಥೆ ಇಲ್ಲ. ಕೋಣೆಗಳು ಇಲ್ಲ.

ಯಾವ ಕಾನೂನು ಆಧಾರದಲ್ಲಿ ಇಂತಹ ಕಟ್ಟಡದಲ್ಲಿ ಮಕ್ಕಳ ವಸತಿಗೆ ಪರವಾನಗಿ ನೀಡಲಾಗಿದೆ? ಒಂದು ಹಾಲ್‌ನಲ್ಲಿ ನೂರು ಮಕ್ಕಳು ಹೇಗೆ ವಾಸ ಇರಲು ಸಾಧ್ಯ? ಕಟ್ಟಡ ಪರಿಶೀಲನೆ ನಡೆಸಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಕ್ಕಳ ಹಕ್ಕುಗಳಿಗೆ ಧಕ್ಕೆ ಉಂಟುಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳುವ ಮೂಲಕ ಹಳೆ ಕಟ್ಟಡದಲ್ಲೇ ಶಾಲೆ ಮುಂದುವರಿಸಬೇಕು ಎಂದು ಮಕ್ಕಳ ಪಾಲಕರಾದ ಗೌತಮ ಸೆಡೋಳ, ಅನೀತಾ ಮುತ್ತಂಗಿ, ಸಂಗೀತಾ ನಿರ್ಣಾ, ಲಕ್ಷ್ಮಣರಾವ್‌ ಒತ್ತಾಯಿಸಿದ್ದಾರೆ.

ಖಾಸಗಿ ಕಟ್ಟಡದಲ್ಲಿ ಮಕ್ಕಳ ಅನುಸಾರ ಮೂಲ ಸೌಲಭ್ಯಗಳು ಇಲ್ಲ. ಈ ಕುರಿತು ಪರಿಶೀಲಿಸಿದ್ದು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸುತ್ತೇನೆ. ಹಳೆ ಕಟ್ಟಡಕ್ಕೆ ವಸತಿ ಶಾಲೆ ವರ್ಗಾಯಿಸುವಂತೆ ಬೇಡಿಕೆಯಾಗಿದ್ದು, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. 
 ಪ್ರೇಮಸಾಗರ ದಾಂಡೇಕರ್‌, ಸಮಾಜ ಕಲಾಣ ಅಧಿಕಾರಿ

ಹಳ್ಳಿಖೇಡ(ಕೆ) ಗ್ರಾಮದಿಂದ ಘಾಟಬೋರಳ್ಳ ಗ್ರಾಮಕ್ಕೆ ವರ್ಗಾವಣೆಗೊಂಡ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಅನೇಕ ಸಮಸ್ಯೆಗಳು ಇರುವ ಬಗ್ಗೆ ನಮ್ಮ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕುಡಿವ ನೀರು ಸಮಸ್ಯೆಯಿಂದ 10 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ ಆಗಿರುವ ಕುರಿತು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಶೌಚಾಲಯ, ಬಟ್ಟೆ ತೊಳೆಯುವುದು, ಓದಲು ಪ್ರತ್ಯೇಕ ಕೋಣೆ ಸಮಸ್ಯೆ ಇದೆ. ಒಂದೇ ಹಾಲ್‌ನಲ್ಲಿ ನೂರು ಮಕ್ಕಳು
ವಾಸಿಸುತ್ತಿರುವ ಬಗ್ಗೆ ಕೂಡ ತಿಳಿದುಬಂದಿದೆ. ಈ ಕುರಿತು ಜಿಲ್ಲಾ ಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
 ಶರಣಬಸಪ್ಪ ಕೊಟ್ಟಪಗೊಳ , ಸಹಾಯಕ ಆಯುಕ್ತರು ಬಸವಕಲ್ಯಾಣ 

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next