ಬೆಂಗಳೂರು: ಚಲಿಸುತ್ತಿದ್ದ ಕಾರು ಹಿಂಬಾಲಿಸಿದ ನಾಲ್ಕೈದು ಮಂದಿ ಯುವಕರು ಕಾರಿನಲ್ಲಿದ್ದ ಮಹಿಳೆಗೆ ಕಿರುಕುಳ ನೀಡಿದ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪದವಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರ ನಿವಾಸಿಗಳಾದ ಜಗನ್ನಾಥ್ (28) ಮತ್ತು ತೇಜಸ್(21) ಬಂಧಿತರು. ಪ್ರಕರಣದಲ್ಲಿ ಮತ್ತೂಬ್ಬ ಆರೋಪಿ ಕಣ್ಣನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಭಾನುವಾರ ರಾತ್ರಿ ಹೊಸೂರು ಕಡೆಯಿಂದ ನಗರದ ಕಡೆ ಬರುವಾಗ ಕಾರಿನಲ್ಲಿದ್ದ ಮಹಿಳೆಗೆ ಕಿರುಕುಳ ನೀಡಿದ್ದರು. ಕೃತ್ಯದ ವಿಡಿಯೋವನ್ನು ಸನುಕ್ ಘೋಷ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕಾನೂನು ಕ್ರಮಕ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್‌ಗೆ ಕಾರು ಡಿಕ್ಕಿ: ಆರೋಪಿತ ಯುವಕರು 3 ಬೈಕ್‌ಗಳಲ್ಲಿ ಹೊಸೂರಿನಲ್ಲಿರುವ ಫಾಲ್ಸ್‌ಗೆ ಹೋಗಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನಗರಕ್ಕೆ ವಾಪಸ್ ಬರುತ್ತಿದ್ದರು. ಇದೇ ವೇಳೆ ಸೇಂಟ್ ಜಾನ್ ಆಸ್ಪತ್ರೆಯಿಂದ ಮಹಿಳೆ ಹಾಗೂ ಆಕೆಯ ಪತಿ ಕೋರಮಂಗಲ ಕಡೆಯಿಂದ ಮಡಿವಾಳ ಕಡೆ ಕಾರಿನಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಕಾರು ಚಾಲಕ ಯಾವುದೇ ಸೂಚನೆ ನೀಡದೆ(ಇಂಡಿಕೇಟರ್) ಎಡ ತಿರುವು ಪಡೆದುಕೊಂಡಿದ್ದು, ಆರೋಪಿಗಳ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಅದರಿಂದ ಕೋಪಗೊಂಡ ಯುವಕರು ಇಂಡಿಕೇಟರ್ ಹಾಕಬೇಕಲ್ಲವೇ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.
ಆಗ ಕಾರು ಚಾಲಕ ಮಧ್ಯದ ಬೆರಳು ತೋರಿಸಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅದರಿಂದ ಇನ್ನಷ್ಟು ಆಕ್ರೋಶಗೊಂಡ ಯುವಕರು, ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದು, ಮಡಿವಾಳದ ಅಂಡರ್‌ಪಾಸ್ ಬಳಿ ಕಾರಿನ ಅಕ್ಕ-ಪಕ್ಕ ಬಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ಕಾರಿನ ಎರಡು ಕಡೆ ಯುವಕರು ಬಂದು ಅನುಚಿತವಾಗಿ ವರ್ತಿಸುತ್ತಿದ್ದರಿಂದ ಗಾಬರಿಗೊಂಡ ಮಹಿಳೆ ಮೊಬೈಲ್‌ನಲ್ಲಿ ಯುವಕರ ಪುಂಡಾಟ ಸೆರೆ ಹಿಡಿದುಕೊಂಡಿದ್ದರು. ಬಳಿಕ ಈ ವಿಡಿಯೋವನ್ನು ಸನುಕ್ ಘೋಷ್ ಎಂಬುವರು ಶೇರ್ ಮಾಡಿ, ಪುಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಯುವಕರ ವಿಳಾಸ ಪತ್ತೆ ಹಚ್ಚಿ ಬಂಧಿಸಲಾಗಿದೆ. ಪೈಕಿ ಜಗನ್ನಾಥ್, ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ. ತೇಜಸ್ ಶೇಷಾದ್ರಿಪುರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ. ತಲೆಮರಸಿಕೊಂಡಿರುವ ಕಣ್ಣನ್ ಮನೆಗಳಿಗೆ ಪೇಪರ್ ಹಾಕುತ್ತಾನೆ ಎಂದು ಪೊಲೀಸರು ಹೇಳಿದರು.
“ಚಾಲಕ ಮಧ್ಯದ ಬೆರಳು ತೋರಿಸಿದ್ದಕ್ಕೆ ಹಿಂಬಾಲಿಸಿದೆವು’ :
ಕಾರು ಚಾಲಕ ಯಾವುದೇ ಸೂಚನೆ ನೀಡದೇ ಏಕಾಏಕಿ ಎಡತಿರುವು ಪಡೆದುಕೊಂಡು, ಬೈಕ್‌ಗೆ ಡಿಕ್ಕಿ ಹೊಡೆದರು. ಅದನ್ನು ಪ್ರಶ್ನಿಸಿದಕ್ಕೆ ಚಾಲಕ ಮಧ್ಯದ ಬೆರಳು ತೋರಿಸಿ ಅವಮಾನ ಮಾಡಿದರು. ಅದರಿಂದ ಕಾರು ಹಿಂಬಾಲಿಸಿದೆವು. ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಆರೋಪಿಗಳು ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.