ಕೆ.ಆರ್.ಪೇಟೆ: ತಾಲೂಕಿನ ಎಪಿಎಂಸಿ ಆವರಣದಲ್ಲಿರುವ ರಾಗಿ, ಭತ್ತ ಮತ್ತು ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರ ಉತ್ಪನ್ನಗಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಸಿಬ್ಬಂದಿ ಅನಗತ್ಯ ಕಿರುಕುಳ ನೀಡಿ, ಲಂಚಕ್ಕಾಗಿ ಪೀಡಿಸುತ್ತಿರುವ ಆರೋಪ ಕೇಳಿಬಂದಿದೆ.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಸರ್ಕಾರ ರೈತರ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಪಟ್ಟಣದ ಎಪಿಎಂಸಿಯಲ್ಲಿ ಪ್ರತಿದಿನ ಲಕ್ಷಾಂತರ ರೂ. ಖರೀದಿ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿನ ಪಾಂಡವಪುರ ಉಪವಿಭಾಗದ ವೆಂಕಟೇಶ್ ನಾಯಕ್, ಕೆ.ಆರ್.ಪೇಟೆ ಘಟಕದ ಹನುಮಂತು ನಫೆಡ್ ಅಧಿಕಾರಿಗಳಾಗಿದ್ದಾರೆ.
ಲಂಚ ನೀಡಿದ್ರೆ ಪರಿಶೀಲಿಸದೇ ಖರೀದಿ: ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳನ್ನು ಖರೀದಿ ಕೇಂದ್ರದ ಅಧಿ ಕಾರಿಗಳು ಗುಣಮಟ್ಟದ ಹೆಸರಿನಲ್ಲಿ ಇಲ್ಲಸಲ್ಲದ ಸಬೂಬು ಹೇಳಿ ಖರೀದಿಸಲು ಸತಾಯಿಸುತ್ತಾರೆ. ಲಂಚ ನೀಡಿದವರ ಉತ್ಪನ್ನಗಳನ್ನು ಪರಿಶೀಲಿಸದೆ ಖರೀದಿ ಮಾಡುತ್ತಾರೆ ಎಂದು ರೈತರು ದೂರಿದ್ದಾರೆ. ಪಟ್ಟಣದ ಎಪಿಎಂಪಿಗೆ ತಾಲೂಕಿನ ರೈತರೊಬ್ಬರು ಗುಣಮಟ್ಟದ 90 ಚೀಲ ಕೊಬ್ಬರಿ ಮಾರಾಟಕ್ಕಾಗಿ ತಂದಿದ್ದಾರೆ. ಆದರೆ, ಖರೀದಿ ಕೇಂದ್ರದ ಅ ಧಿಕಾರಿಗಳು ಗುಣಮಟ್ಟದ್ದನ್ನು ಮಾತ್ರ ಆಯ್ದು ಕೊಡುವಂತೆ ಒತ್ತಾಯಿಸಿದ್ದಾರೆ. ಪ್ರತಿಯೊಬ್ಬ ರೈತರಿಂದ ಇಲ್ಲಿನ ಖರೀದಿ ಅಧಿಕಾರಿಗಳು ವಸ್ತುಗಳ ಮೌಲ್ಯ ಆಧರಿಸಿ ಲಂಚಕ್ಕಾಗಿ ಬೇಡಿಕೆ ಇಡುತ್ತಾರೆ.
ಉತ್ತಮವಾದದ್ದನ್ನು ಆಯ್ದುಕೊಡಿ ಅಂತಾರೆ: ಹಣಕೊಟ್ಟ ರೈತರಿಗೆ ಯಾವುದೇ ಗುಣಮಟ್ಟದ ಪರಿಶೀಲನೆ ನಡೆಸದೇ ಖರೀದಿ ಮಾಡುತ್ತಾರೆ. ಇಲ್ಲದಿದ್ದರೆ, ನೀವು ತಂದಿರುವ ಕೊಬ್ಬರಿ ಚೆನ್ನಾಗಿಲ್ಲ. ತೆಗೆದುಕೊಳ್ಳಲು ಸಾಧ್ಯವಿಲ್ಲ. ನೆಲಕ್ಕೆ ಸುರಿದು ಉತ್ತಮವಾದುದ್ದನ್ನು ಮಾತ್ರ ಆಯ್ದುಕೊಡಿ ಎಂದು ಒತ್ತಡದ ತಂತ್ರ ಅನುಸರಿಸುತ್ತಾರೆ.
ಖರೀದಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ: ತಾನು ತಂದಿರುವ ಎಲ್ಲಾ ಕೃಷಿ ಉತ್ಪನ್ನಗಳನ್ನು ನೆಲಕ್ಕೆ ಸುರಿದು ಆಯ್ಕೆ ಮಾಡಲು ಸಾಧ್ಯವಿಲ್ಲದ ಕಾರಣ, ರೈತ ಅನಿವಾರ್ಯವಾಗಿ ಲಂಚಕೊಟ್ಟು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿಯಿದೆ. ಖರೀದಿ ಕೇಂದ್ರದ ಕಿರುಕುಳದ ಬಗ್ಗೆ ಎಪಿಎಂಸಿ ಗಮನಕ್ಕೆ ತಂದರೆ ಅಧಿ ಕಾರಿಗಳು ಖರೀದಿ ಕೇಂದ್ರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಕೇವಲ ಗೋಡನ್ ಮಾತ್ರ ನೀಡಿದ್ದೇವೆ. ಖರೀದಿ ವ್ಯವಹಾರ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಗೆ ಸೇರಿದ್ದು ಎನ್ನುತ್ತಾರೆ.
ಡೀಸಿ ಗಮನ ಹರಿಸಲಿ: ಜಿಲ್ಲಾಧಿಕಾರಿಗಳು, ರಾಜ್ಯ ಮಾರಾಟ ಮಹಾಮಂಡಳಿಯ ಅಧಿ ಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಒತ್ತಾಯಿಸಿದ್ದಾರೆ. ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ಶೀಳನೆರೆ ಮೋಹನ್, ಇದು ನಮ್ಮ ಫೆಡರೇಷನ್ ಗಮನಕ್ಕೂ ಬಂದಿದೆ. ತಾಲೂಕಿನ ರಾಗಿ ಖರೀದಿ ಕೇಂದ್ರದಲ್ಲಿನ ಮಹಿಳಾ ಸಿಬ್ಬಂದಿ ಯೊಬ್ಬರು ತಮ್ಮ ಕುಟುಂಬದ ಸರ್ವ ಸದಸ್ಯರ ಹೆಸರಿನಲ್ಲಿಯೂ ರಾಗಿ ಮಾರಾಟ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಮಹಾ ಮಂಡಳದ ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.
ಸಹಕಾರ ಮಾರಾಟ ಮಹಾಮಂಡಳದ ನೌಕರರ ಭ್ರಷ್ಟಾಚಾರದ ಬಗ್ಗೆ ರೈತರು ಲಿಖಿತ ದೂರು ನೀಡದೆ ಸ್ಥಳೀಯ ಮಟ್ಟದಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದ ನಾವು ಯಾವುದೇ ನೌಕರರ ಮೇಲೂ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ರೈತರು ಜಾಗೃತರಾಗಬೇಕು. ತಮ್ಮ ಉತ್ಪನ್ನಗಳ ಖರೀದಿಗೆ ಲಂಚಕ್ಕಾಗಿ ಪೀಡಿಸುವ ಸಿಬ್ಬಂದಿ ವಿರುದ್ಧ ಮಹಾಮಂಡಳಕ್ಕೆ ಅಥವಾ ಲೋಕಾಯುಕ್ತರಿಗೆ ದೂರು ನೀಡಿ ಅವ್ಯವಹಾರ ತಡೆಗಟ್ಟಲು ಸಹಕರಿಸಬೇಕು. ರೈತರು ಜಾಗೃತಿಗೊಳ್ಳದೆ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ ಎಂದಿದ್ದಾರೆ.