ಮಂಡ್ಯ: ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದವರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ. ಅಲ್ಲದೆ, ಸೋಲು-ಗೆಲುವಿನ ಕುರಿತು ಹಣ, ಆಸ್ತಿಯನ್ನು ಪಣಕ್ಕಿಟ್ಟು ಬೆಟ್ಟಿಂಗ್ ನಡೆಸಬೇಡಿ. ಕಷ್ಟಪಟ್ಟು ಗಳಿಸಿದ ಆಸ್ತಿ, ಹಣವನ್ನು ಕಳೆದುಕೊಳ್ಳಬೇಡಿ ಎಂದು ಜನಸಾಮಾನ್ಯರಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದರು. ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಈಗಾಗಲೇ ಕಿರುಕುಳ ನೀಡಲಾಗುತ್ತಿದೆ.
ಮೊನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದರ್ಶನ್ ಮತ್ತು ಯಶ್ ಅವರನ್ನು ಗುರಿಯಾಗಿಸಿಕೊಂಡು ಪ್ರಾಯಶ್ಚಿತ್ತ ಹಾಗೂ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಅದು ಯಾವ ರೀತಿಯ ಪ್ರಾಯಶ್ಚಿತ್ತ. ಅವರು ಯಾವ ರೀತಿಯಲ್ಲಿ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಕುಮಾರಸ್ವಾಮಿ ಬಿಡಿಸಿ ಹೇಳಬೇಕು. ಇದೊಂದು ಬೆದರಿಕೆ ತಂತ್ರವೇ ಎಂದು ಪ್ರಶ್ನಿಸಿದರು.
ಇದೇ ವೇಳೆ, ಬೆಟ್ಟಿಂಗ್ ಬಗ್ಗೆ ಪ್ರಸ್ತಾಪಿಸಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಕುರಿತು ಲಕ್ಷಾಂತರ ರೂ.ನಗದು, ಆಸ್ತಿಯನ್ನು ಪಣಕ್ಕಿಟ್ಟು ಬೆಟ್ಟಿಂಗ್ ನಡೆಸುತ್ತಿರುವುದು ನೋವು ತಂದಿದೆ. ದಯವಿಟ್ಟು ಕಷ್ಟಪಟ್ಟು ಗಳಿಸಿದ ಆಸ್ತಿ, ಹಣವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
“ನಾನು ನನ್ನದೇ ಸಿದ್ಧಾಂತ, ವಿಚಾರಗಳ ಮೇಲೆ ಬೆಳೆದು ಬಂದಿದ್ದೇನೆ. ಅವುಗಳನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಕುಟುಂಬದ ಜವಾಬ್ದಾರಿ ಹೊರಲು ನಾನು ಹದಿನೈದನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಮದುವೆಯಾದ ಮೇಲೆ ಪತ್ನಿಯಾಗಿ, ನಂತರ ತಾಯಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸಬೇಕಿತ್ತು.
ಅದು ಕಳೆಯುವವರೆಗೂ ರಾಜಕೀಯಕ್ಕೆ ಬರಬಾರದು ಎನ್ನುವುದು ನನ್ನ ವೈಯಕ್ತಿಕ ಸಿದ್ಧಾಂತವಾಗಿತ್ತು. ಅಂಬರೀಶ್ ಕನಸುಗಳ ಜೊತೆಗೆ ಅಭಿವೃದ್ಧಿ ಕುರಿತು ನನ್ನದೇ ಪರಿಕಲ್ಪನೆಗಳಿಗೆ ಪ್ರಣಾಳಿಕೆಯ ರೂಪ ಕೊಡುವ ಯತ್ನ ನಡೆಸಿದ್ದೆ. ಆದರೆ, ವಿರೋಧಿಗಳು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅವರಿಂದ ಎದುರಾಗುತ್ತಿದ್ದ ಟೀಕಾಸ್ತ್ರಗಳಿಗೆ ಉತ್ತರಿಸುವುದರಲ್ಲೇ ಕಾಲಹರಣವಾಯಿತು.
ಮೇ 29ರಂದು ಅಂಬರೀಶ್ ಅವರ ಹುಟ್ಟುಹಬ್ಬವಿದ್ದು, ಅದನ್ನು ಮಂಡ್ಯದಲ್ಲೇ ಆಚರಿಸಬೇಕು ಎಂದುಕೊಂಡಿದ್ದೇನೆ’ ಎಂದರು. ಚುನಾವಣೆ ಬಳಿಕ ಪುತ್ರನೊಂದಿಗೆ ಸಿಂಗಾಪೂರ್‌ಗೆ ಹೋಗುತ್ತಾರೆ ಎಂಬ ಟೀಕೆಗೆ ಉತ್ತರಿಸಿದ ಸುಮಲತಾ, “ನನಗೆ ಮಂಡ್ಯವೇ ಸಿಂಗಾಪೂರ್. ನಾನಿಲ್ಲೇ ಇದ್ದೇನೆ ಎಂದರು.