ಹೊಸದಿಲ್ಲಿ : ಆಲ್ ಇಂಡಿಯಾ ರೇಡಿಯೋ ದಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾದ ವರದಿಗಳ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಆಕ್ರೋಶ, ಕಳವಳ ವ್ಯಕ್ತಪಡಿಸಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಸಚಿವೆ ಮೇನಕಾ ಅವರು ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ ರಾಥೋರ್ ಅವರಿಗೆ ಪತ್ರ ಬರೆದು, ಆಲ್ ಇಂಡಿಯಾ ರೇಡಿಯೋ ದಲ್ಲಿನ ಈ ಕಳವಳಕಾರಿ ವಿಷಯದ ಬಗ್ಗೆ ಗಮನ ಹರಿಸಿ ಸೂಕ್ಷ್ಮತೆ ಮತ್ತು ನ್ಯಾಯೋಚಿತ ವ್ಯವಸ್ಥೆ ಚಾಲ್ತಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆಲ್ ಇಂಡಿಯಾ ರೇಡಿಯೋ ದಲ್ಲಿ ತಾತ್ಕಾಲಿಕ ಅನೌನ್ಸರ್ ಗಳಾಗಿ ಕೆಲಸ ಮಾಡುವ ಕೆಲ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಗಮನಿಸಿ ಸಚಿವೆ ಮೇನಕಾ ಗಾಂಧಿ, ಸಚಿವ ರಾಜ್ಯವರ್ಧನ ಅವರಿಗೆ ಪತ್ರ ಬರೆದಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಎಐಆರ್ ನಲ್ಲಿ ಕೆಲಸ ಮಾಡುತ್ತಿದ್ದ ತಾತ್ಕಾಲಿಕ ಅನೌನ್ಸರ್ ಮತ್ತು ಕಾಂಪಿಯರ್ ಗಳ ಯೂನಿಯನ್ ಸಚಿವೆ ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಸಂಸ್ಥೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದುತಿಳಿಸಿತ್ತು.
ವರದಿಯ ಪ್ರಕಾರ ಇದು ಕೂಡ ಮೀ ಟೂ ಲೈಂಗಿಕ ಹಗರಣದ ಭಾಗವೇ ಆಗಿದ್ದು ದೇಶಾದ್ಯಂತ ಎಐಆರ್ ಕೇಂದ್ರಗಳಲ್ಲಿ ಈ ರೀತಿಯ ಲೈಂಗಿಕ ದುರ್ವರ್ತನೆಯನ್ನು ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅನೌನ್ಸರ್‌ಗಳ ಮೇಲೆ ತೋರಲಾಗುತ್ತಿದೆ ಎಂದು ಸಚಿವೆಯ ಗಮನಕ್ಕೆ ತರಲಾಗಿತ್ತು.