Advertisement

ಮಾಸ್ಕ್ ಧರಿಸದಿದ್ದರೆ ಶಿಸ್ತು ಕ್ರಮ

12:03 PM Apr 18, 2020 | Naveen |

ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬರುವವರ ವಿರುದ್ಧ ದೂರು ದಾಖಲಿಸಿ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಕೊರೊನಾ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅನ್ಯ ರಾಜ್ಯ ಮತ್ತು ಜಿಲ್ಲೆಗಳಿಂದ ನಮ್ಮ ಚೆಕ್‌ಪೋಸ್ಟ್‌ಗಳಿಗೆ ಬರುವವರನ್ನು ಇದ್ದಲ್ಲಿಗೆ ಅವರನ್ನು ವಾಪಾಸ್‌ ಕಳಿಸಬೇಕು. ಕೊರೊನಾ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಪಟ್ಟಣ ಮತ್ತು ಪ್ರತಿ ಹಳ್ಳಿಯಲ್ಲಿ ಫಾಗಿಂಗ್‌ ಮಾಡಿಸಬೇಕು ಮತ್ತು ಚರಂಡಿ ಹೂಳು ತೆಗೆಸಿ ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದರು.

ನಂಜನಗೂಡು ಮತ್ತು ಮೈಸೂರಿನಿಂದ ಆಗಮಿಸಿರುವ ಒಟ್ಟು 9 ಜನರಿಗೆ ತಕ್ಷಣವೇ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಬೇಕು. ನಿರಾಶ್ರಿತರ ಕೇಂದ್ರದಲ್ಲಿ ಅವರನ್ನು ಪ್ರತ್ಯೇಕವಾಗಿಸಬೇಕು. ಅವರಿಗೆ ಏಕೆ ರಕ್ತ ಪರೀಕ್ಷೆ ಮಾಡಿಸಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಪ್ರಶ್ನಿಸಿದ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣವಾಗಿಲ್ಲ, ಏನಾದರೂ ತೊಂದರೆಯಾದಲ್ಲಿ ಯಾರು ಹೊಣೆ? ತಕ್ಷಣವೇ ಪರೀಕ್ಷೆ ನಡೆಸಬೇಕು ಎಂದು ಟಿಎಚ್‌ಒ ಅವರಿಗೆ ಸೂಚಿಸಿದರು.

ಹೈದ್ರಾಬಾದ್‌, ಆಂಧ್ರ ಸೇರಿದಂತೆ ವಿದೇಶದಿಂದ ಬಂದಿರುವವರನ್ನು ಮನೆಗಳಲ್ಲಿ ಇರಿಸದೇ ಪ್ರತ್ಯೇಕವಾಗಿಸಿ ಅವರ ಮೇಲೆ ನಿಗಾ ಇಡಬೇಕು. ಹೋಟೆಲ್‌ಗ‌ಳನ್ನು ಬಂದ್‌ ಮಾಡಿಸಬೇಡಿ, ಹೋಟೆಲ್‌ ಮಾಲೀಕರ ಸಭೆ ನಡೆಸಿ ಪಾರ್ಸಲ್‌ ವಿತರಣೆ ಮಾಡುವಂತೆ ವ್ಯವಸ್ಥೆ ಮಾಡಿ, ಇಲ್ಲವೇ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಸೇವಿಸಲು ವ್ಯವಸ್ಥೆ ಆಗಲಿ. ಎಪಿಎಂಸಿಗೆ ಅನ್ಯ ರಾಜ್ಯಗಳಿಂದ ಬರುವ ಗೂಡ್ಸ್‌ ಲಾರಿಯ ಹಿಸ್ಟರಿ ಪಡೆದು ರೋಗ ನಿವಾರಕ ಔಷಧ ಸಿಂಪಡಿಸಿ ಎರಡು ದಿನವಾದ ನಂತರ ಅದನ್ನು ಅನಲೋಡ್‌ ಮಾಡಿಸಬೇಕು ಎಂದು ಸಲಹೆ ನೀಡಿದರು.

ಮೊಬೈಲ್‌ ವಾಹನದಲ್ಲಿ ಡಾಕ್ಟರ್‌ ವ್ಯವಸ್ಥೆ, ಜನರಿಕ್‌ ಔಷಧ ಕೇಂದ್ರ ಸಂಜೆವರೆಗೆ ತೆರೆಯುವಂತೆ, ಸರ್ಕಾರಿ ಆಸ್ಪತ್ರೆ ನರ್ಸ್‌ಗಳಿಗೆ ಎನ್‌-95 ಮಾಸ್ಕ್ ವಿತರಣೆ, ಏ. 20ರ ನಂತರ ವಿವಿಧ ಇಲಾಖೆಯ ಯಂತ್ರಚಾಲಿತ ಕೆಲಸಗಳನ್ನು ಪ್ರಾರಂಭಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಸಂಬಂಧಿಸಿದ ಪಿಡಿಒ ಮಿಟಿಂಗ್‌ ಕರೆದು ಖಾತ್ರಿ ಕೆಲಸ ಆರಂಭಿಸಬೇಕು. ಪಟ್ಟಣದ ಶನಿವಾರ ಮತ್ತು ಭಾನುವಾರದ ಸಂತೆ ರದ್ದುಪಡಿಸಬೇಕು. ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಕಡಿಮೆ ವಿತರಣೆ ಮಾಡುವುದಾಗಿ ಎನ್‌. ಶೀರನಹಳ್ಳಿ ಜನರ ದೂರು ಹೇಳಿದ್ದು, ಜನರ ಅಭಿಪ್ರಾಯ ಸಂಗ್ರಹಿಸಿ ಲೈಸನ್ಸ್‌ ರದ್ದುಪಡಿಸಲು ತಹಶೀಲ್ದಾರ್‌ಗೆ ಸೂಚಿಸಿದರು.

Advertisement

ಕೊವೀಡ್‌-19 ನೋಡಲ್‌ ಅಧಿಕಾರಿ ಪಿ.ಎನ್‌. ಲೋಕೇಶ್‌, ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌, ತಹಶೀಲ್ದಾರ್‌ ಡಾ| ನಾಗವೇಣಿ, ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನೆ, ಸಿಪಿಐ ಕೆ. ಕುಮಾರ್‌, ಟಿಎಚ್‌ಓ ಡಾ| ಇನಾಯತ್‌ವುಲ್ಲಾ, ತಾಪಂ ಇಒ ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ನಾಗರಾಜ ನಾಯ್ಕ, ಬಿಇಒ ವೀರಭದ್ರಯ್ಯ, ಬಿಸಿಎಂ ವಿಸ್ತರಣಾಧಿಕಾರಿ ಭೀಮಾನಾಯ್ಕ, ಸಿಡಿಪಿಒ ಮಂಜುನಾಥ, ವೀರಣ್ಣ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next