Advertisement

ಮಳೆಗೆ ಮಾವು-ಟೊಮೆಟೋ ಬೆಳೆ ನಷ್ಟ

12:58 PM Apr 09, 2020 | Naveen |

ಹರಪನಹಳ್ಳಿ: ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆಗೆ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ದಾಳಿಂಬೆ, ಬಾಳೆ, ಸಪೋಟ, ಪಪ್ಪಾಯಿ, ಅಡಕೆ, ಮಾವು, ಟೊಮೆಟೋ ಬೆಳೆ ನೆಲಕಚ್ಚಿದೆ. ಅಲ್ಲದೇ ಶೇಂಗಾ, ಕೊತ್ತಂಬರಿ, ಮೆಂತೆ ಸೊಪ್ಪು ಬೆಳೆಗಳು ಹಾಳಾಗಿವೆ. ಬಾಗಳಿ ಗ್ರಾಮದಲ್ಲಿ 3 ಮನೆ, ಅಡವಿಹಳ್ಳಿ-2, ತೋಗರಿಕಟ್ಟೆ-3, ನಂದಿಬೇವೂರು ಸೇರಿ ಒಟ್ಟು 9 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಬಾಗಳಿ ಗ್ರಾಮದಲ್ಲಿ 5 ಎಕರೆ ಪಪ್ಪಾಯಿ, 5 ಎಕರೆ ಬಾಳೆ, 2 ಎಕರೆ ಅಡಕೆ, ತೋಗರಿಕಟ್ಟೆ ಗ್ರಾಮದಲ್ಲಿ 5 ಎಕರೆ ದಾಳಿಂಬೆ, 2 ಎಕರೆ ಸಪೋಟ ಸೇರಿದಂತೆ ಒಟ್ಟು 19 ಎಕರೆ ತೋಟಗಾರಿಕೆ ಬೆಳೆ ಹಾಳಾಗಿದೆ.

Advertisement

ಕಸಾಬ ಹೋಬಳಿಗೆ ಸೇರಿದ ಪಟ್ಟಣದ ಹೊರವಲಯದ ಕಾಯಕದಹಳ್ಳಿ ರಸ್ತೆಯಲ್ಲಿರುವ ಕೆ.ಎಂ. ಬಸವರಾಜಯ್ಯ ಎಂಬುವವರ ತೋಟದಲ್ಲಿ ಸುಮಾರು ಎರಡು ಎಕರೆ ಪ್ರದೇಶದ ಮಾವು ಬೆಳೆ ಮಳೆ ಗಾಳಿಗೆ ನೆಲಕ್ಕುರುಳಿದೆ. ಇದರಿಂದ ಲಕ್ಷಾಂತರರೂ ಕಷ್ಟ ಸಂಭವಿಸಿದೆ. ತಾಲೂಕಿನ ಕೊಂಗನಹೊಸೂರು, ನಂದಿಬೇವೂರು, ಬಾವಿಹಳ್ಳಿ, ಕಣವಿಹಳ್ಳಿ, ಚಿಗಟೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಗೋಕಟ್ಟೆ, ಹಳ್ಳಗಳು ತುಂಬಿಕೊಂಡಿವೆ.

ಕೊಂಗನಹೊಸೂರು ಹಳ್ಳ ತುಂಬಿ ಹರಿದಿದ್ದು, ಈ ಭಾಗದ ರೈತರಿಗೆ ಸಂತಸ ತಂದಿದೆ. ನಂದಿಹಳ್ಳಿ ಈಶಪ್ಪ ಎಂಬುವವರ ಹೊಲದಲ್ಲಿ ಬೆಳೆಯಲಾದ ಮೆಂತೆ ಸೊಪ್ಪು ಆಲಿಕಲ್ಲು ಮಳೆಗೆ ಸಂಪೂರ್ಣ ಹಾಳಾಗಿದೆ. ಕೊಂಗನಹೊಸೂರು ಗ್ರಾಮದ ರೈತರ ಹೊಲದಲ್ಲಿ ಬೆಳೆಯಲಾದ ಶೇಂಗಾ, ಕೊತ್ತಂಬರಿ ಮೆಂತೆ ಸೊಪ್ಪು ಬೆಳೆಗಳು ಹಾಳಾಗಿವೆ. ಕಣಿವಿಹಳ್ಳಿ ಗ್ರಾಮದ ರೈತ ಹೊನ್ನಪ್ಪ ಎಂಬುವವರಿಗೆ ಸೇರಿದ 1 ಎಕರೆ ಟೊಮೆಟೋ ಮತ್ತು 1 ಎಕರೆ ಈರುಳ್ಳಿ ಬೆಳೆ ನೆಲಕಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next