ಹರಪನಹಳ್ಳಿ: ಕೋವಿಡ್ ಸೋಂಕು ಯಾವುದೇ ಜಾತಿ-ಜನಾಂಗದಿಂದ ಬಂದಿದ್ದಲ್ಲ. ಜಾತಿ ಬಣ್ಣ ಕಟ್ಟದೇ ಎಲ್ಲರೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತ ಸರ್ಕಾರದ ಮಾರ್ಗಸೂಚಿ ಪಾಲಿಸೋಣ ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ತಾಲೂಕಿನ ಚಿಗಟೇರಿ ಹೋಬಳಿಯಲ್ಲಿ ಬುಧವಾರ ಟಾಸ್ಕ್ಫೋರ್ಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಗ್ರಾಮಗಳಾದ ಮೈದೂರು, ಬಳಿಗನೂರು, ಗೌರಿಪುರ ಗ್ರಾಮದ ಕುಟುಂಬದ ಸದಸ್ಯರಿಗೆ ಆಹಾರ ಕಿಟ್ ಹಾಗೂ ಧನ ಸಹಾಯ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವಕ್ಕೆ ಮಾರಕವಾಗಿರುವ ಈ ವೈರಸ್ ಬಗ್ಗೆ ಯಾರಿಗೂ ಭಯ ಬೇಡ. ಜಾಗೃತಿ ಇರಲಿ. ವಿಶ್ವಾದ್ಯಂತ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರೆ ಕರ್ನಾಟಕದಲ್ಲಿ ಒಂದಿಷ್ಟು ಸಮಾಧಾನಕರ ವರದಿ ಬರುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಯಾವುದೇ ಹೊಸ ಪ್ರಕರಣ ಬಂದಿಲ್ಲ. ಲಾಕ್‌ಡೌನ್ ಘೋಷಣೆಯಾಗಿ ಏ. 23ಕ್ಕೆ ಒಂದು ತಿಂಗಳು ಕಳೆಯಲಿದೆ. ಜನರು ಕೂಡ ಸಹಕಾರ ಕೊಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯ್ದಕೊಂಡು ಮನೆಯಿಂದ ಹೊರಗೆ ಬಾರದೇ ಒಗ್ಗಟ್ಟಿನಿಂದ ಕೊರೊನಾ ಎದುರಿಸುವಂತಾಗಿದೆ ಎಂದರು.
ಅಕಾಲಿಕ ಮಳೆಗೆ ಚಿಗಟೇರಿ ಹೋಬಳಿಯಲ್ಲಿ ಕೆಲ ಮನೆಗಳಿಗೆ ಹಾನಿಯಾಗಿ, ಮನೆ ಮೇಲ್ಛಾವಣಿ ಹಾರಿಹೋಗಿದೆ. ಇಂಥ ಫಲಾನುಭವಿಗಳ ನೆರವಿಗೆ ಚಿಗಟೇರಿ ಮತ್ತು ಹರಪನಹಳ್ಳಿ ಟಾಸ್ಕ್ ಫೋರ್ಸ್ ಪದಾಧಿಕಾರಿಗಳು ಧಾವಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಕೆಲಸವಿಲ್ಲದೇ ಆಹಾರಕ್ಕಾಗಿ ಪರದಾಡುವಂತಾಗಿದೆ. ಇಂಥವರಿಗೆ ಉಳ್ಳವರು ಸಹಾಯ-ಸಹಕಾರ ಮಾಡಬೇಕು. ಮನೆಯ ಮೇಲ್ಛಾವಣೆ ಹಾರಿಹೋಗಿರುವ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವೆ ಎಂದು ತಿಳಿಸಿದರು.
ಮನೆ ಹಾನಿಗೊಳಗಾದ 8 ಜನರಿಗೆ ಧನ ಸಹಾಯ ಹಾಗೂ ಆಹಾರ ಕಿಟ್ ವಿತರಿಸಲಾಯಿತು. ಜಿಲ್ಲಾ ಗ್ರಾಮಾಂತರ ಟಾಸ್ಕ್ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ಪುರಸಭೆ ಮಾಜಿ ಅಧ್ಯಕ್ಷ ಎಚ್. ಕೆ. ಹಾಲೇಶ್, ಜಿಪಂ ಸದಸ್ಯ ಉತ್ತಂಗಿ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಮುಖಂಡರಾದ ಎಂ. ರಾಜಶೇಖರ್, ಪಿ.ಎಲ್.ಪೋಮ್ಯಾನಾಯ್ಕ, ಎಂ.ಟಿ. ಬಸವನಗೌಡ, ಮುತ್ತಿಗಿ ಜಂಬಣ್ಣ, ಮತ್ತಿಹಳ್ಳಿ ಅಜ್ಜಪ್ಪ, ಪಿ.ಪ್ರೇಮ್‌ಕುಮಾರಗೌಡ,
ನೀಲಪ್ಪ, ಕಲ್ಲೇಶ್, ದಿವಾಕರ್, ಸಾಬಳ್ಳಿ ಮಂಜಣ್ಣ, ಕುಬೇರಪ್ಪ, ಜಿ.ಎಸ್. ಬಸವನಗೌಡ, ರಿಯಾಜ್, ಮರಿಯಪ್ಪ, ಹನುಮಂತಪ್ಪ, ದುರಗಪ್ಪ ಇತರರಿದ್ದರು.