ಹರಪನಹಳ್ಳಿ: ಎಲ್ಲ ತಾಂಡಗಳಲ್ಲಿ ಮಂಗಳವಾರ ದೀಪಾವಳಿ ಹಬ್ಬದ ಅಂಗವಾಗಿ ಯುವತಿಯರು ಕಾಡಿಗೆ ತೆರಳಿ ಹೂ ತಂದು ನಂತರ ನೃತ್ಯ ಮಾಡುವ ಮೂಲಕ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಅಮಾವಾಸ್ಯೆ ದಿನದಂದು ತಾಂಡಗಳಲ್ಲಿರುವ ಎತ್ತುಗಳನ್ನು ಶುಭ್ರವಾಗಿಟ್ಟು, ವಿವಿಧ ಅಕರ್ಷಕ ಬಣ್ಣಗಳಿಂದ ಅಲಂಕಾರ ಮಾಡಿದರು. ನಂತರ ಪ್ರತಿಯೊಂದು ಎತ್ತಿನ ಕೊರಳಲ್ಲಿ ಒಣ ಕೊಬ್ಬರಿ ಕಟ್ಟಿ ಬೆದರಿಸಿ ಓಡಿಸಲಾಯಿತು.
ಅದನ್ನು ಪಳಗಿಸಿ ಹಿಡಿದುಕೊಂಡು ಬಂದ ಯುವಕರಿಗೆ ಗ್ರಾಮಸ್ಥರು,ಹಿರಿಯರು ಬಹುಮಾನ ನೀಡಿ ಎಲ್ಲರೆದುರು ಪುರಸ್ಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳವಾರ ಯುವತಿಯರು ಮತ್ತು ಮಹಿಳೆಯರು ಮಡಿಯಿಂದ ಸಿಹಿ ಅಡುಗೆ ತಯಾರಿಸಿದ ನಂತರ ಡಲ್ಯ (ಮಾಹಿತಿದಾರ) ಊರಿನ ಗೌಡರ ಸೂಚನೆಯಂತೆ ಹಲಗೆ ಬಡಿಯುವ ಮೂಲಕ ಪ್ರತಿಯೊಂದು ಮನೆಗಳಿಂದ ಅವಿವಾಹಿತ ಯುವತಿಯರು ಹಟ್ಟಿ ನಾಯಕರ ಮನೆ ಹತ್ತಿರ ಬರಬೇಕು ಎಂದು ಡಂಗೂರ ಸಾರಿದರು. ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ಲಂಬಾಣಿ ಭಾಷೆಯಲ್ಲಿ ಹಾಡು ಹೇಳುತ್ತ ಕುಣಿದು ಸಂಭ್ರಮಿಸಿದರು. ನಂತರ ಸಂಜೆ ವೇಳೆ ಹಟ್ಟಿ ಗೌಡರ ಹೆಂಡತಿ ಹಾಗೂ ತಾಂಡದ ಹಿರಿಯರು ಸೇರಿಕೊಂಡು ತಾಂಡದ ಕೊನೆಯ ಭಾಗಕ್ಕೆ ಬಂದು ಹೂವುಗಳನ್ನು ತರಲು ಕಾಡಿಗೆ ತೆರಳುವ ಯುವತಿಯರಿಗೆ ಬೀಳ್ಕೊಟ್ಟರು.
ಕಾಡಿನಲ್ಲಿ ಸಿಗುವ ಕಣಗಲು (ವಲಾಣ್ಯ) ಹೂ ಕಿತ್ತುಕೊಂಡು ಬುಟ್ಟಿಯಲ್ಲಿಟ್ಟುಕೊಂಡು ಸಾಂಪ್ರದಾಯಿಕ ನೃತ್ಯ ಮಾಡುತ್ತ ಶ್ಯಾಲು(ಛಾಟ್ಯಾ) ಹೊದ್ದು ಬುನಃ ತಾಂಡಕ್ಕೆ ಆಗಮಿಸಿದಾಗ ಬುನಃ ಹಿರಿಯರು ಮತ್ತು ಹಟ್ಟಿ ಗೌಡರು ತಾಂಡ ಗಡಿ ಬಳಿ ಬಂದು ಸ್ವಾಗತಿಸಿಕೊಂಡರು. ಹೂವಿನ ಬುಟ್ಟಿಗಳನ್ನು ಹೊತ್ತುಕೊಂಡ ಯುವತಿಯರ ಗುಂಬು ತಾಂಡದ ಪ್ರತಿಯೊಂದು ಮನೆಗೂ ತೆರಳಿ ಸಗಣಿಯ ಗುರ್ಚಿಯಲ್ಲಿ ಹೂಗಳನ್ನು ಇಟ್ಟು ಬಂದರು.
ಸಂಜೆ ಸಮಯದಲ್ಲಿ ಮನೆಗೊಬ್ಬ ಯುವತಿಯರು ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿಯಿಟ್ಟು ಪೂಜೆ ಸಲ್ಲಿಸಿ ನಂತರ ಅವರಿಗೆ ಇಷ್ಟವಾದಂಥ ಮನೆಗಳಿಗೆ ತೆರಳಿ ಮನೆ ಹಾಗೂ ಅವರ ಹೆಸರು ಸೇರಿಸಿಕೊಂಡು
ಹಾಡು ಹೇಳುವ ಮೂಲಕ ಶುಭಾಶಯ ಕೋರಿದರು.
ಚಿಕ್ಕವರಿಗೂ-ಹಿರಿಯರು ಎಲ್ಲರಿಗೂ ನಮನಗಳು. ಈ ತುಂಬಿದ ಮನೆ ಸದಾ ಹಸಿರಾಗಿರಾಗಿರುವಂತೆ ಸದಾ ನೋಡಿಕೋ ಎಂದು ಯುವತಿಯರು ದೇವರಲ್ಲಿ ಪ್ರಾರ್ಥಿಸಿದರು.
ಬುಟ್ಟಿಯಲ್ಲಿ ಹೂವುಗಳನ್ನಿಟ್ಟುಕೊಂಡು ಮಂಡಕ್ಕಿ, ಬಲೂನ್, ರಿಬ್ಬನ್‌ಗಳನ್ನು ಕಟ್ಟಿ ಅಲಂಕಾರ ಮಾಡಿಕೊಂಡಿದ್ದರು. ಸಾಂಪ್ರದಾಯಿಕ ಲಂಬಾಣಿ ಸಮುದಾಯದ ಬಟ್ಟೆ ಧರಿಸಿ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ನೃತ್ಯ ಮಾಡಿದರು.
ನಂತರ ಪ್ರಸ್ತಕ ವರ್ಷ ಮದುವೆಯಾಗಿ ತೆರಳುವಂಥ ಯುವತಿಯರಿಗೆ ಬಳೆ ಬಳುವಳಿಯಾಗಿ ನೀಡುವ ಕಾರ್ಯ ನಡೆಯುವುದರೊಂದಿಗೆ ದೀಪಾವಳಿ ಹಬ್ಬಕ್ಕೆ ತೆರೆ ಬಿತ್ತು.