Advertisement
2008 ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಹರಪನಹಳ್ಳಿ ಸಾಮಾನ್ಯ ಕೇತ್ರವಾಗಿ ಬದಲಾದ ನಂತರ ಎರಡು ರಾಷ್ಟೀಯ ಪಕ್ಷದಲ್ಲಿ ಟಿಕೆಟ್‌ಗಾಗಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈ ಬಾರಿ ಕಾಂಗ್ರೆಸ್‌ನಿಂದ 17 ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಾಗೂ ಅರಸೀಕೆರೆ ಎನ್.ಕೊಟ್ರೇಶ್ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.
Related Articles
Advertisement
ಕಾಂಗ್ರೆಸ್‌ನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಕಾಂಕ್ಷಿಗಳಾದ ಶಶಿಧರ್ ಪೂಜಾರ್ ಹೆಚ್.ಬಿ. ಪರಶುರಾಮಪ್ಪ, ಡಾ.ಉಮ್ಮೇಶ್‌ಬಾಬು ಸೇರಿದಂತೆ ಅನೇಕರು ಹೈಕಮಾಂಡ್ ಬಳಿ ಒತ್ತಡ ಹಾಕುವ ಮೂಲಕ ತೆರೆಮರೆ ಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿಯೂ ಸಹ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಪ್ರಮುಖವಾಗಿ ಜಿ.ನಂಜನಗೌಡ, ಆರುಂಡಿ ನಾಗರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ವೈ.ಡಿ.ಅಣ್ಣಪ್ಪ ಅವರ ಹೆಸರು ಕೇಳಿ ಬರುತ್ತಿವೆ.
ಜೆಡಿಎಸ್ ಅಭ್ಯರ್ಥಿ ಯಾರು ಎಂದು ಪಕ್ಷ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಕೂಡ್ಲಿಗಿಯ ಮಾಜಿ ಶಾಸಕ ಎನ್.ಎಂ.ನಬಿ ಅವರ ಪುತ್ರ ನೂರ್ ಅಹ್ಮದ್ ಅವರೇ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಆಮ್ ಅದ್ಮಿ ಪಕ್ಷದಿಂದ ಹೊಸಕೋಟೆ ನಾಗರಾಜ ಹೆಸರು ಅಂತಿಮವಾಗಿದ್ದು ಸ್ಪರ್ಧಿಸುವುದು ಖಚಿತವಾಗಿದೆ.
ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸಂಸದರ ಪುತ್ರ ವೈ.ಡಿ.ಅಣ್ಣಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಬಿಜೆಪಿಯಿಂದ ಹಾಲಿ ಶಾಸಕ ಕರುಣಾಕರ ರೆಡ್ಡಿಗೆ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಅಣ್ಣಪ್ಪ ಅವರ ಸ್ಪರ್ಧೆಯಿಂದ ಯಾರಿಗೆ ಮುಳುವಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
-ದೇವೇಂದ್ರ ಮಜ್ಜಿಗೇರಿ