Advertisement

ತಿರಂಗಾಕ್ಕೆ ಭಾರೀ ರೆಸ್ಪಾನ್ಸ್‌; 20 ಕೋಟಿ ಮನೆಗಳಲ್ಲಿ ಹರ್‌ ಘರ್‌ ತಿರಂಗಾ

08:17 PM Aug 12, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ (ಹರ್‌ ಘರ್‌ ತಿರಂಗಾ)ಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಗುರಿಯನ್ನು ಮುಟ್ಟಲಾಗುತ್ತದೆ ಎಂದು ಬಿಜೆಪಿ ಹೇಳಿದೆ.

ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ಆ.9ರಿಂದಲೇ ದೇಶದ ವಿವಿಧ ಭಾಗಗಳಲ್ಲಿ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಪಕ್ಷದ ಸಂಸದರು ಮತ್ತು ಮುಖಂಡರು ಕಾರ್ಯನಿರತರಾಗಿದ್ದಾರೆ. ಜನರೂ ಕೂಡ ಈ ಅಭಿಯಾನ ಯಶಸ್ಸುಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಆ.13 ಮತ್ತು ಆ.14ರಂದು ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಜನರು ಸೆಲ್ಫಿ ತೆಗೆದು https://harghartiranga.com/ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ. ಇದೇ ವೇಳೆ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ದೇಶ ವಿಭಜನೆಯ ಕರಾಳ ನೆನಪುಗಳ ಬಗೆಗಿನ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಅದರಲ್ಲಿ ದೇಶ ವಿಭಜನೆ ವೇಳೆ, ಉಂಟಾದ ಹಿಂಸಾತ್ಮಕ ಘಟನೆಗಳು, ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ ಎಂದರು.

ಆ.14ರಂದು ಪ್ರತಿ ಜಿಲ್ಲೆಯಲ್ಲಿ ಮೌನ ಮೆರವಣಿಗೆ ಮಾಡಲಾಗುತ್ತದೆ ಎಂದು ಅರುಣ್‌ ಸಿಂಗ್‌ ಹೇಳಿದ್ದಾರೆ.

Advertisement

ದೆಹಲಿಯಲ್ಲಿ 2 ಸಾವಿರ ಸಜೀವ ಗುಂಡು ವಶಕ್ಕೆ
ದೇಶಾದ್ಯಂತ ಆ.15ರಂದು 75ನೇ ಸ್ವಾತಂತ್ರ್ಯ ದಿನದ ಆಚರಣೆಗೆ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ರಾಜಧಾನಿ ನವದೆಹಲಿ ಸೇರಿದಂತೆ ದೇಶಾದ್ಯಂತ ಪಹರೆಯನ್ನೂ ಬಿಗಿಗೊಳಿಸಲಾಗಿದೆ.

ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 2,251 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿಯ ಆನಂದ ವಿಹಾರ್‌ ಅಂತರ್‌ ರಾಜ್ಯ ಬಸ್‌ ನಿಲ್ದಾಣದ ಬಳಿ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕ್ರಂಜಿತ್‌ ಸಿಂಗ್‌ ಮಾತನಾಡಿ, ಬಂಧಿತರು ಮೇಲ್ನೋಟಕ್ಕೆ ಅಪರಾಧ ಎಸಗುವ ಗುಂಪಿಗೆ ಸೇರಿದವರು ಎಂದು ತರ್ಕಿಸಲಾಗಿದೆ. ಅವರಿಗೆ ಉಗ್ರ ಸಂಘಟನೆಗಳ ನಂಟು ಇದೆಯೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಬಂಧಿತರ ಪೈಕಿ ಅಜ್ಮಲ್‌ ಖಾನ್‌ ಮತ್ತು ರಶೀದ್‌ ಒಟ್ಟು ನಾಲ್ಕು ಬಾರಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದರು ಎಂದೂ ತನಿಖೆಯಿಂದ ಗೊತ್ತಾಗಿದೆ.

ಕೋಲ್ಕತಾದಲ್ಲಿ:
ಇದೇ ವೇಳೆ ಕೋಲ್ಕತಾದಲ್ಲಿರುವ ವಿಕ್ಟೋರಿಯಾ ಮೆಮೋರಿಯಲ್‌ ಹಾಲ್‌ ಮೇಲೆ ಡ್ರೋನ್‌ ಹಾರಿಸಲಾಗಿರುವ ಘಟನೆ ನಡೆಸಿದೆ. ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಂಗ್ಲಾದೇಶೀಯರನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಚರಣೆಗೆ ಹೆಚ್ಚು ಜನ ಬೇಡ: ಕೇಂದ್ರ
15ರಂದು ದೇಶಾದ್ಯಂತ ಸ್ವಾತಂತ್ರ್ಯೋತ್ಸವ ದಿನದ ವೇಳೆ ದೊಡ್ಡ ಮಟ್ಟದ ಜನಸಮೂಹ ಸೇರದಂತೆ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಇದಲ್ಲದೆ, ಸ್ವಾತಂತ್ರ್ಯೋತ್ಸವ ಮಾತ್ರವಲ್ಲದೆ ಮನೆಯಿಂದ ಹೊರಗಡೆ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸುವಂತೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹಾಗೂ ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವಂತೆ ಸೂಚಿಸಿದೆ. ಈಗಾಗಲೇ, ನಾನಾ ರಾಜ್ಯಗಳು ತಮ್ಮಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next