Advertisement

ಅಮೃತ ಮಹೋತ್ಸವ ಹೊತ್ತಲ್ಲಿ ಖಾದಿ ಬೇಗುದಿ

01:27 PM Jul 31, 2022 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲೇ ಹರ್‌ ಘರ್‌ ತಿರಂಗಾ ಅಭಿಯಾನದೊಂದಿಗೆ ಪಾಲಿಸ್ಟರ್‌ -ಚೈನಾಸಿಲ್ಕ್ ರಾಷ್ಟ್ರಧ್ವಜ ಬಳಕೆಗೆ ಅನುಮತಿಸುವ ಕೇಂದ್ರ ಸರಕಾರದ ನಿರ್ಧಾರ ರಾಷ್ಟ್ರಧ್ವಜ ನಿರ್ಮಾಣದ ಖಾದಿ ಕೆಲಸಗಾರರು, ಖಾದಿ ಪ್ರೇಮಿಗಳಲ್ಲಿ ಅಸಮಾಧಾನ ಸೃಷ್ಟಿಸಿದೆ.

Advertisement

ಚೈನಾಸಿಲ್ಕ್ ಹಾಗೂ ಪಾಲಿಸ್ಟರ್‌ ಬದಲು ಎಸ್‌ಟಿ ಖಾದಿ ಬಟ್ಟೆಯಿಂದಲೇ ರಾಷ್ಟ್ರಧ್ವಜ ತಯಾರಿಗೆ ಸರಕಾರ ಸೂಚಿಸಿದ್ದರೆ ರಾಜ್ಯದ ಸುಮಾರು 250-300 ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ ನೂರಾರು ಖಾದಿ ಸಂಸ್ಥೆಗಳು ಚೇತರಿಕೆ ಕಾಣುತ್ತಿದ್ದವು. ಭವಿಷ್ಯದಲ್ಲಿ ಖಾದಿ ರಾಷ್ಟ್ರಧ್ವಜ ತಯಾರಿಕೆಗೆ ಗಂಡಾಂತರ ತಂದೊಡ್ಡುವ ಈ ಕ್ರಮ ಒಪ್ಪಲಾಗದು ಎಂಬ ಆಕ್ರೋಶ ಖಾದಿ ಪ್ರೇಮಿಗಳದ್ದಾಗಿದೆ. ಬಿಎಸ್‌ಐ ಮಾನದಂಡದಡಿ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ಕೇಂದ್ರ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣ ಹೋರಾಟ ವೇದಿಕೆಯಾಗಿ ಮಾರ್ಪಡತೊಡಗಿದೆ.

ಕೇಂದ್ರ ಸರಕಾರ ಒಂದು-ಒಂದೂವರೆ ವರ್ಷದ ಮೊದಲೇ ಹರ್‌ ಘರ್‌ ತಿರಂಗಾ ಅಭಿಯಾನದ ಬಗ್ಗೆ ತಿಳಿಸಿದ್ದರೆ ಖಾದಿ ರಾಷ್ಟ್ರಧ್ವಜ ತಯಾರು ನಿಟ್ಟಿನಲ್ಲಿ ಮಹತ್ವದ ಸಾಧನೆಯೊಂದು ಖಾದಿ ಸಂಸ್ಥೆಗಳಿಂದ ದಾಖಲೆಯಾಗುತ್ತಿತ್ತು. ಸೊರಗುತ್ತಿರುವ ಖಾದಿ ಸಂಸ್ಥೆಗಳಿಗೆ ಮಹತ್ವದ ಆರ್ಥಿಕ ಬಲ ದೊರೆಯುತ್ತಿತ್ತು. ರಾಷ್ಟ್ರಧ್ವಜ ಸಂಹಿತೆ ಪ್ರಕಾರ ರಾಷ್ಟ್ರಧ್ವಜ ತಯಾರಿಸಲು ಕಟ್ಟುನಿಟ್ಟಿನ ಮಾನದಂಡಗಳಿವೆ. ಅವುಗಳಿಗೆ ತಿದ್ದುಪಡಿ ತಂದು ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವುದು ಖಾದಿ ಬೇಗುದಿ ಹೆಚ್ಚಿಸಿದೆ. ಕಳೆದ ಹಲವಾರು ದಶಕಗಳಿಂದ ಪ್ಲಾಸ್ಟಿಕ್‌ ರಾಷ್ಟ್ರಧ್ವಜ ತಯಾರು, ಮಾರಾಟ ಸಂಪೂರ್ಣ ನಿಷೇಧ ಎಂಬ ಸರಕಾರ ಆದೇಶ ನಡುವೆ ಇಂದಿಗೂ ಹಾದಿ-ಬೀದಿಗಳಲ್ಲಿ ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಮಾರಾಟವಾಗುತ್ತ ಬಂದಿದ್ದು, ಪಾಲಿಸ್ಟರ್‌ ಧ್ವಜಕ್ಕೆ ಅನುಮತಿಸಿದ್ದು ಎಷ್ಟು ಸಮಂಜಸ ಎಂಬ ಜಿಜ್ಞಾಸೆ ನಡೆದಿದೆ. ಜತೆಗೆ ಈ ಸಂದರ್ಭದಲ್ಲಿ ಚೈನಾಸಿಲ್ಕ್ ಮೂಲಕ ಚೀನಾ ಆರ್ಥಿಕವಾಗಿ ಸಂಭ್ರಮ ಪಡುವಂತಾಗಿದ್ದು ಯಾವ ನ್ಯಾಯ ಎಂಬುದು ಹಲವರ ಪ್ರಶ್ನೆ.

ಖಾದಿ ಕೇಂದ್ರಗಳೇ ಕಣ್ಮುಚುವ ಅಪಾಯ

ಹರ್‌ ಘರ್‌ ತಿರಂಗಾ ಅಭಿಯಾನ ಘೋಷಣೆಯಡಿ ಬೇಡಿಕೆಯಷ್ಟು ರಾಷ್ಟ್ರಧ್ವಜ ಪೂರೈಕೆ ಖಾದಿ ಸಂಸ್ಥೆಗಳಿಂದ ಅಸಾಧ್ಯ. ಅದಕ್ಕಾಗಿಯೇ ಪಾಲಿಸ್ಟರ್‌ ನಿಂದ ತಯಾರಿಸಲು ಅವಕಾಶ ನೀಡಲಾಗಿದೆ. ಇದು ಕೇವಲ ಅಮೃತ ಮಹೋತ್ಸವ ಆಚರಣೆಗಷ್ಟೇ ಸೀಮಿತ ಎಂಬುದು ಕೇಂದ್ರ ಸರಕಾರದ ಸಮಜಾಯಿಷಿ. ಆದರೆ, ಸರಕಾರ ಅಂದುಕೊಂಡಷ್ಟು ಮಾರುಕಟ್ಟೆ ಶಕ್ತಿಗಳು ಸುಲಭವಾಗಿರುವುದಿಲ್ಲ. ಕೇವಲ ಒಂದು ವರ್ಷ, ಒಂದು ದಿನಕ್ಕೆ ಸೀಮಿತವಾಗಿ ರಾಷ್ಟ್ರಧ್ವಜ ತಯಾರು ಮಾಡಿರುವುದಿಲ್ಲ. ಕನಿಷ್ಟ ನಾಲ್ಕೈದು ವರ್ಷಕ್ಕೆ ಆಗುವಷ್ಟು ತಯಾರು ಮಾಡಿರುತ್ತವೆ. ಮುಂದಿನ ವರ್ಷಗಳಲ್ಲಿಯೂ ಅದನ್ನು ಮುಂದುವರಿಸುತ್ತವೆ. ಬೇಡಿಕೆ ಕಂಡುಬಂದರೆ ಮತ್ತಷ್ಟು ಉತ್ಪಾದನೆ ಮಾಡಿ ಮಾರುಕಟ್ಟೆಗೆ ನೀಡುತ್ತವೆ. ಪರಿಣಾಮ ನಿಧಾನಕ್ಕೆ ಖಾದಿಯಿಂದ ರಾಷ್ಟ್ರಧ್ವಜ ತಯಾರಿಕೆ ಕೇಂದ್ರಗಳೇ ಕಣ್ಮುಚ್ಚುವ ಅಪಾಯ ಇಲ್ಲದಿಲ್ಲ.

Advertisement

18 ಲಕ್ಷ ಕೆಲಸಗಾರರಿಗೆ ಸಿಗುತ್ತಿತ್ತು ಉತ್ತೇಜನ

ಕೇಂದ್ರ ಸರಕಾರ ಖಾದಿ ಕಾಟನ್‌ ಎಸ್‌ಟಿ ಪ್ಲಾಗ್‌ ತಯಾರಿಕೆಗೆ ಒಂದು ವರ್ಷದ ಮೊದಲೇ ಸೂಚಿಸಿದ್ದರೆ, ರಾಜ್ಯದಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗಳ ಒಕ್ಕೂಟದಡಿ ಸುಮಾರು 55 ಸಂಸ್ಥೆಗಳು ಬರುತ್ತಿದ್ದು, ಇದಲ್ಲದೆ ರಾಜ್ಯದಲ್ಲಿ ಅಂದಾಜು 250-300 ಖಾದಿ ಸಂಸ್ಥೆಗಳು ಇವೆ. ಇದರಂತೆ ದೇಶಾದ್ಯಂತ ಇರುವ ನೂರಾರು ಖಾದಿ ಸಂಸ್ಥೆಗಳ ಸುಮಾರು 18 ಲಕ್ಷದಷ್ಟು ಕೆಲಸಗಾರರು ಖಾದಿ ಕಾಟನ್‌ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಸಿಕೊಡುತ್ತಿದ್ದರು. ಬಿಎಸ್‌ಐ ಮಾನದಂಡ ಹೊಂದಿಲ್ಲ ಹಾಗೂ ಖಾದಿಯಲ್ಲಿ ಅತ್ಯಲ್ಪ ಪ್ರಮಾಣದ ದಪ್ಪ ಬಟ್ಟೆ ಬಳಕೆ ಎಂಬುದು ಬಿಟ್ಟರೆ ರಾಷ್ಟ್ರಧ್ವಜಕ್ಕೆ ಹತ್ತಿರವಾಗುವ ತಯಾರಿಕೆ ಇದಾಗಿದ್ದು, ಪಾಲಿಸ್ಟರ್‌ಗಿಂತ ಉತ್ತಮವಾಗಿದೆ.

ಭರದಿಂದ ಸಾಗಿದ ಧ್ವಜ ತಯಾರಿ: ಬಿಐಎಸ್‌ ಮಾನದಂಡದಡಿ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಧ್ವಜ ತಯಾರು ಮಾಡುವ ದೇಶದ ಏಕೈಕ ಕೇಂದ್ರ ಬೆಂಗೇರಿ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿರುವ ರಾಷ್ಟ್ರಧ್ವಜ ತಯಾರು ಕೇಂದ್ರದಲ್ಲಿ ರಾಷ್ಟ್ರಧ್ವಜ ತಯಾರು ಕಾರ್ಯ ಭರದಿಂದ ಸಾಗಿದೆ. ಸುಮಾರು 20-25 ಮಹಿಳೆಯರು ರಾತ್ರಿ 8 ಗಂಟೆವರೆಗೂ ರಾಷ್ಟ್ರಧ್ವಜ ತಯಾರು ಮಾಡುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಅಸಾಧ್ಯವಾಗಿದೆ. ಒಂದು ವರ್ಷದ ಮೊದಲೇ ಹೇಳಿದ್ದರೆ ಬೇಡಿಕೆ ಪ್ರಮಾಣದಲ್ಲಿ ತಕ್ಕಮಟ್ಟಿಗಾದರೂ ನೀಡಬಹುದಾಗಿತ್ತು ಎಂಬುದು ಅಲ್ಲಿನವರ ಅನಿಸಿಕೆ. ಪ್ರಸ್ತುತ ನಿತ್ಯ ಇತರೆ ಅಳತೆಯವು 100-150, ದೊಡ್ಡ ಪ್ರಮಾಣದ್ದು 75-80 ಧ್ವಜ ತಯಾರಿಸುತ್ತಿದ್ದಾರೆ. ಅತಿದೊಡ್ಡದಾದ ಗಾತ್ರದ 14/21 ಅಳತೆಯ ಒಟ್ಟು 68 ರಾಷ್ಟ್ರಧ್ವಜ ತಯಾರಿಸಲಾಗಿದ್ದು, ಮುಂಬೈಗೆ 50 ಕಳುಹಿಸಲಾಗಿದೆ. ಅದರಂತೆ ಪ್ರತಿವರ್ಷ ಹೆಚ್ಚಿನ ಬೇಡಿಕೆ ಇರುವ 2/3, 4/6 ಅಳತೆ ಧ್ವಜಗಳ ತಯಾರಿ ನಡೆದಿದೆ. ಈ ಬಾರಿ ಮನೆ ಮೇಲೆ ಧ್ವಜ ಹಾರಿಸುವ ಕೇಂದ್ರದ ಘೋಷಣೆ ಹಿನ್ನೆಲೆಯಲ್ಲಿ ಒಂದು-ಒಂದೂವರೆ ಅಳತೆಯ ಕಟ್ಟಿಗೆ ಕಟ್ಟುವ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಬೇಡಿಕೆ ಬರತೊಡಗಿದೆ. ಕಳೆದ ಎರಡು ವರ್ಷಗಳ ಹಿಂದೆ 2 ಕೋಟಿಗೂ ಅಧಿಕ ವಹಿವಾಟು ನಡೆಸಿ, ಕೋವಿಡ್‌ನಿಂದ ಎರಡು ವರ್ಷ ವಹಿವಾಟು ಕುಸಿತ ಕಂಡಿದ್ದ ರಾಷ್ಟ್ರಧ್ವಜಗಳ ವಹಿವಾಟು ಈ ವರ್ಷ ಮತ್ತೆ ಚೇತರಿಕೆ ಕಂಡಿದೆ ಈಗಾಗಲೇ 2 ಕೋಟಿ ದಾಟಿದ್ದು, ಈ ಬಾರಿ 3 ಕೋಟಿ ರೂ. ವರೆಗೂ ವಹಿವಾಟು ನಡೆಸುವ ವಿಶ್ವಾಸ ಮೂಡಿಸಿದೆ.

ಖಾದಿಯಿಂದ ತಯಾರಿಸುವ ರಾಷ್ಟ್ರಧ್ವಜ ಭಾವನಾತ್ಮಕ ವಿಚಾರ. ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಮುಂಚಿತವಾಗಿ ಕೇಂದ್ರ ಒಂದಿಷ್ಟು ಯೋಚಿಸಿದ್ದರೂ ಖಾದಿ ಕೆಲಸಗಾರರಿಗೆ ವರವಾಗಿ ಪರಿಣಮಿಸಬಹುದಾಗಿತ್ತು. ಪಾಲಿಸ್ಟರ್‌ ರಾಷ್ಟ್ರಧ್ವಜದ ಕುರಿತು ಕೇಂದ್ರದ ತೀರ್ಮಾನ ವಿರುದ್ಧ ಹುಬ್ಬಳ್ಳಿ, ಗರಗ ಹಾಗೂ ಹೆಬ್ಬಳ್ಳಿಯ ರಾಷ್ಟ್ರಧ್ವಜ ತಯಾರು ಕೆಲಸಗಾರರು ಈಗಾಗಲೇ ಹೋರಾಟಕ್ಕಿಳಿದಿದ್ದಾರೆ. –ಬಸವಪ್ರಭು ಹೊಸಕೇರಿ, ಹಿರಿಯ ವಕೀಲ

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಬೇಡಿಕೆಯಷ್ಟು ರಾಷ್ಟ್ರಧ್ವಜ ಪೂರೈಕೆ ಸಾಧ್ಯವಾಗುತ್ತಿಲ್ಲ. ದಿಢೀರನೆ ಬೇಡಿಕೆ ಸಲ್ಲಿಸಿದರೆ ರಾಷ್ಟ್ರಧ್ವಜ ತಯಾರಿ ಸಾಧ್ಯವಾಗದು. ಎಷ್ಟು ಸಾಧ್ಯವೋ ಅಷ್ಟು ತಯಾರಿ ಕಾರ್ಯದಲ್ಲಿ ತೊಡಗಿದ್ದೇವೆ. ಮುಂಚಿತವಾಗಿಯೇ ನಮಗೆ ಬೇಡಿಕೆ ಬಂದಿದ್ದರೆ ಹೆಚ್ಚಿನ ಪ್ರಮಾಣದ ತಯಾರಿಕೆಗೆ ಅನುಕೂಲವಾಗುತ್ತಿತ್ತು. –ವಿಜಯಕುಮಾರ ನಾದಪ್ಪನವರ, ಗೋದಾಮು ಮುಖ್ಯಸ್ಥ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next