Advertisement

BJP ಜತೆ ಸೇರಿ ಸಂತೋಷವಾಗಿದ್ದೇನೆ: ಕುಮಾರಸ್ವಾಮಿ

12:13 AM Jun 15, 2024 | Team Udayavani |

ಬೆಂಗಳೂರು: ನಾನು 2008 ಮತ್ತು 2018ಕ್ಕೆ ಹೋಲಿಸಿದರೆ ಈಗ ಸಂತೋಷವಾಗಿದ್ದೇನೆ ಎಂದು ಕೇಂದ್ರದ ಬೃಹತ್‌ ಉದ್ದಿಮೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಳೆದೆರಡು ದಶಕಗಳ ತಮ್ಮ ರಾಜಕೀಯ ಜೀವನವನ್ನು ವ್ಯಾಖ್ಯಾನಿಸಿದರು.

Advertisement

ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಜೆಡಿಎಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಹಳೆಯ ಘಟನೆಗಳನ್ನು ಮೆಲುಕು ಹಾಕಿದ ಅವರು, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಗಳಾಗಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಇದನ್ನು ನನ್ನ ಜನತೆಗೆ ಅರ್ಪಣೆ ಮಾಡುತ್ತೇನೆ ಎಂದು ಹೇಳಿದರು.

2006ರಲ್ಲಿ ನಾನು ಬಯಸಿ ಮುಖ್ಯಮಂತ್ರಿ ಆಗಿರಲಿಲ್ಲ. ಆಗ ಬಹುಮತ ಬರದಿದ್ದಾಗ ದೇವೇಗೌಡರು ಕಾಂಗ್ರೆಸ್‌ ನಂಬಿದ್ದರು. ಆಗ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್‌ ಜೇಟ್ಲಿಯವರು, ಪತ್ರಿಕೋದ್ಯಮಿಯೊಬ್ಬರ ಮನೆಯಲ್ಲಿ ನನ್ನನ್ನು ಭೇಟಿಯಾಗಿ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್‌ ಸರಕಾರ ಮಾಡೋಣ. ನಿಮ್ಮ ತಂದೆಯವರ ಶಕ್ತಿ ಗೊತ್ತಿದೆ. ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರು. ಆದರೆ ನಾನು ಪಕ್ಷ ಕಟ್ಟಲು ತೀರ್ಮಾನ ಮಾಡಿದ್ದೇನೆ ಎಂದು ಹೇಳಿ ಬಳಿಕ ಕಾಂಗ್ರೆಸ್‌ ಜತೆ ಸರಕಾರ ಮಾಡಿದೆ. ಆದರೆ ಕಾಂಗ್ರೆಸ್‌ ನಮ್ಮ ಕಾರ್ಯಕರ್ತರಿಗೆ ಸ್ಥಾನವನ್ನು ಕೊಡಲು ಬಿಡಲಿಲ್ಲ. ಸರಕಾರ ವಿಸರ್ಜಿಸುವಂತೆ ದೇವೇಗೌಡರು ಹೇಳಿದರು. ತಾತ್ಕಾಲಿಕವಾಗಿ ಸರಕಾರ ರಚಿಸಲು ಬಿಜೆಪಿ ಮುಂದಾಗಿತ್ತು. ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಬೇಕು ಎಂದಿದ್ದೆ. ಕೊಡದೆ ಇರೋದಕ್ಕೆ ಹಲವು ಕುತಂತ್ರಗಳು ನಡೆಯಿತು. ಅದಕ್ಕೆ ಬಲಿಯಾದವನು ನಾನು. 2008ರಿಂದ ಪಕ್ಷವನ್ನು ಉಳಿಸಲು ಪ್ರಯತ್ನ ಮಾಡಿದೆ ಎಂದು ಹೇಳಿದರು.

2018ರಲ್ಲಿ ಬಹುಮತ ಬರದಿದ್ದಾಗ ಕಾಂಗ್ರೆಸ್‌ ಪಕ್ಷದ ದಿಲ್ಲಿಯ ನಾಯಕರು ದೇವೇಗೌಡರ ಮನೆಗೆ ಬಂದು, ಎರಡು ಪಕ್ಷ ಸೇರಿ ಸರಕಾರ ಮಾಡಬೇಕೆಂದು ಒತ್ತಡ ಹಾಕಿದ್ದರು. ಸರಕಾರ ರಚನೆ ಆಯಿತು. ಆಗ ನಾನು ಒಂದೇ ತಿಂಗಳಲ್ಲಿ ಇದೇ ವೇದಿಕೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿ ವಿಷಕಂಠನಾಗಿದ್ದೇನೆ ಎಂದು ಹೇಳಿದ್ದೆ. ಆದರೆ ಇವತ್ತು ಸಂತೋಷದಿಂದ ನಾನು ಮಾತನಾಡುತ್ತಿದ್ದೇನೆ. ಯಾವುದೇ ಕಲ್ಮಶ ಇಟ್ಟುಕೊಳ್ಳದೆ ಮಾತನಾಡುತ್ತಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 2023ರ ಸೋಲಿನ ಬಳಿಕವೂ ಬಿಜೆಪಿ ನಾಯಕರೇ ನಮ್ಮನ್ನು ಕರೆದು ಗೌರವಯುತವಾಗಿ ಮಾತನಾಡಿಸಿದ್ದಾರೆ ಎಂದು ನೆನಪಿಸಿಕೊಂಡರು.

ದ್ವೇಷಕ್ಕೆ ಅಧಿಕಾರ ಬಳಸುವುದಿಲ್ಲ
ರಾಜ್ಯದ ಜನತೆ ನನಗೆ ಕೊಟ್ಟಿರುವ ಶಕ್ತಿಯನ್ನು ದ್ವೇಷಕ್ಕೆ ಬಳಸಿಕೊಳ್ಳುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಬನ್ನಿ ನಮ್ಮ ಕಚೇರಿಗೆ, ನಾಡಿನ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಆಹ್ವಾನ ನೀಡಿದರು. ಇತ್ತೀಚೆಗೆ ಮುಖ್ಯಮಂತ್ರಿಗಳು ತಮ್ಮ ಕಾನೂನು ಸಲಹೆಗಾರರ ಜತೆ ನಾನು ಮಂತ್ರಿಯಾಗಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ನಾಯಕರು ತಮ್ಮ ಸಣ್ಣತನ, ನೀಚ ಬುದ್ಧಿ ಬಿಡಬೇಕು. ನಾನು ಕೇಂದ್ರ ಸಚಿವನಾಗಿದ್ದರಿಂದ ಕಾಂಗ್ರೆಸ್‌ ನಾಯಕರಿಗೆ ನಿದ್ದೆ ಮಾಡಲು ಆಗುತ್ತಿಲ್ಲ. ಊಟದ ತಟ್ಟೆ ಮುಂದೆಯೂ ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

ಲೋಕಸಭೆಯಲ್ಲಿ ಕಾಂಗ್ರೆಸ್‌ ಶ್ರಮದಿಂದ 9 ಕ್ಷೇತ್ರ ಗೆದ್ದಿಲ್ಲ. ನಮ್ಮ ಮೈತ್ರಿ 26 ಸ್ಥಾನ ಗೆಲ್ಲಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಾವು ನಮ್ಮ ಶ್ರಮ ಕಡಿಮೆ ಮಾಡಿದ್ದರಿಂದ ಕಾಂಗ್ರೆಸ್‌ ಅಷ್ಟು ಸ್ಥಾನ ಗೆದ್ದಿದೆ ಎಂದು ಹೇಳಿದರು.

ಈ ಹಿಂದೆ ಕುಮಾರಸ್ವಾಮಿ ಎರಡೂ ಬಾರಿ ಸಿಎಂ ಆಗಿದ್ದಾಗ ರೈತರ ಪರ ಕೆಲಸ ಮಾಡಿದ್ದರು. ಚನ್ನಪಟ್ಟಣ ಕಾರ್ಯಕರ್ತರ ಒತ್ತಾಯದಂತೆ ಅವರು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ದೇಶದ ಜಿಡಿಪಿ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುವ ಬೃಹತ್‌ ಕೈಗಾರಿಕಾ ಖಾತೆ ಅವರಿಗೆ ಸಿಕ್ಕಿದೆ.
-ನಿಖಿಲ್‌ ಕುಮಾರಸ್ವಾಮಿ,
ಯುವ ಜೆಡಿಎಸ್‌ ರಾಜ್ಯಾಧ್ಯಕ್ಷ

ಈ ಸಲ ಮೈತ್ರಿ ಒಂದಾಗಿ ಕೆಲಸ ಮಾಡಿದೆ. ಕುಮಾರಸ್ವಾಮಿ ಜನಪ್ರಿಯತೆ ಶಾಶ್ವತವಾಗಿ ಉಳಿದಿದೆ. ಕುಮಾರಸ್ವಾಮಿ ನಮಗೆ ಆಶಾಕಿರಣವಾಗಿದ್ದಾರೆ. ನಾವು ಮೂಲೆಯಲ್ಲಿ ಕುಳಿತಿದ್ದಾಗ ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಬಿಜೆಪಿ ಜತೆ ಸೇರಿ ಎಷ್ಟೇ ಕಷ್ಟ ಆದರೂ ಒಂದಾಗಿ ಹೋರಾಡಿ ಮತ್ತೆ ಸರ್ಕಾರ ತರಬೇಕು.
ಜಿ.ಟಿ.ದೇವೇಗೌಡ,
ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next