Advertisement

Ramanagara JDS: ಜಿಲ್ಲಾ ಜೆಡಿಎಸ್‌ಗೆ ಟಾನಿಕ್‌ ನೀಡಿದ ಡಾಕ್ಟರ್‌!

03:39 PM Jun 10, 2024 | Team Udayavani |

ರಾಮನಗರ: ಜೆಡಿಎಸ್‌ ಭದ್ರಕೋಟೆ ಎನಿಸಿದ್ದ ರಾಮನಗರ ಜಿಲ್ಲೆಯಲ್ಲಿ 2 ದಶಕದ ಬಳಿಕ 3 ಶಾಸಕರನ್ನು ಗೆಲ್ಲಿಸಿಕೊಂಡಿದ್ದ ಕೈಪಾಳಯಕ್ಕೆ, ಈ ಲೋಕಸಭಾ ಚುನಾವಣಾ ಫಲಿತಾಂಶ ಶಾಕ್‌ ನೀಡಿದೆ. ಜಿಲ್ಲೆಯಲ್ಲಿ ಮೈತ್ರಿ ಕೂಟದ ಮತಗಳಿಕೆ ಪ್ರಮಾಣ ಹೆಚ್ಚಳವಾಗುವ ಮೂಲಕ, ಕಾಂಗ್ರೆಸ್‌ ನಾಯಕರ ಅಬ್ಬರದಲ್ಲಿ ಮಸುಕಾಗಿದ್ದ ಜೆಡಿಎಸ್‌ ಪಾಳಯ ಹೆಚ್ಚು ಮತ ಪಡೆಯುವ ಮೂಲಕ ಡಾ.ಮಂಜುನಾಥ್‌ರಿಗೆ ಟಾನಿಕ್‌ ನೀಡಿದ್ದಾರೆ.

Advertisement

ಹೌದು, ಡಾ.ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರೂ, ಅವರು ದೇವೇಗೌಡರ ಕುಟುಂಬದ ಭಾಗ. ರಾಮನಗರ ಜಿಲ್ಲೆಯಲ್ಲಿ ಅವರು ಗಳಿಸಿದ ಮತ ಡಿಕೆಎಸ್‌ ಸಹೋದರರ ಪ್ರಾಬಲ್ಯದಲ್ಲಿ ನಿತ್ರಾಣಗೊಂಡಿದ್ದ ಜಿಲ್ಲಾ ಜೆಡಿಎಸ್‌ ಗೆ ಶಕ್ತಿ ಮದ್ದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಎಚ್‌. ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಹೊರತು ಪಡಿಸಿದರೆ, ಉಳಿದ 3 ಕ್ಷೇತ್ರ ಕಾಂಗ್ರೆಸ್‌ ಪಾಲಾಗಿತ್ತು.

ಇನ್ನು ಕನಕಪುರದಲ್ಲಿ ಕೇವಲ 20 ಸಾವಿರ ಮತ ಪಡೆದು ಜೆಡಿಎಸ್‌ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಚಿತ್ರಣವೇ ಬದಲಾಗಿದ್ದು, ಕನಕಪುರದಲ್ಲಿ 1.20 ಲಕ್ಷ ಲೀಡ್‌ ಪಡೆದಿದ್ದ ಕಾಂಗ್ರೆಸ್‌ ಇದೀಗ 26 ಸಾವಿರಕ್ಕೆ ಕುಸಿದಿದೆ. ಇನ್ನು ರಾಮನಗರದಲ್ಲಿ ಕಾಂಗ್ರೆಸ್‌ ಪಡೆದಿರುವ ಲೀಡ್‌ ಕೇವಲ 145 ಮಾತ್ರ. ಕಳೆದ ಬಾರಿ ಸೋತಿದ್ದ ಮಾಗಡಿಯಲ್ಲಿ 30 ಸಾವಿರ ಮತಗಳ ಮುನ್ನಡೆ ಪಡೆಯುವ ಮೂಲಕ ಮೈತ್ರಿ ಅಭ್ಯರ್ಥಿ ಒಳ್ಳೆ ಸ್ಕೋರ್‌ ಮಾಡಿದ್ದಾರೆ. ಗೆದ್ದಿರುವುದು ಬಿಜೆಪಿ ಅಭ್ಯರ್ಥಿಯಾದರೂ ಜಿಲ್ಲೆಯಲ್ಲಿ ಮೈತ್ರಿ ಮತಗಳು ಜೆಡಿಎಸ್‌ಗೆ ಲಾಭದಾಯಕವಾಗಿದೆ.

ಮತ್ತೆ ಜೆಡಿಎಸ್‌ ಹಿಡಿತಕ್ಕೆ ಕ್ಷೇತ್ರ: 2 ದಶಕದಿಂದ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರ ನಡುವೆ ಹೋರಾಟ ನಡೆಯುತ್ತಿತ್ತು. ಆದರೆ, ಈ ಹೋರಾಟದಲ್ಲಿ ಜೆಡಿಎಸ್‌ ಪ್ರಾಬಲ್ಯ ಸಾಧಿಸುತ್ತಿತ್ತು. ಕೇವಲ ಕನಕಪುರಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡಿದೆ. ಚನ್ನಪಟ್ಟಣ ಹೊರತು ಪಡಿಸಿ ಮೂರು ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಂಡಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾ ವ್ಯಾಪ್ತಿಯ 4ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಅತ್ಯಧಿಕ ಮತಗಳ ಅಂತರವನ್ನು ಎಚ್‌ಡಿಕೆ ಭಾವ ಸಿ.ಎನ್‌.ಮಂಜುನಾಥ್‌ರಿಗೆ ದೊರೆತಿದೆ. 10 ಸಾವಿರ ಮತಗಳ ಅಂತರದಿಂದ ಸೋತಿದ್ದ ರಾಮನಗರದಲ್ಲಿ ಸಮಬಲದ ಪೈಪೋಟಿ ನೀಡಿದೆ.

ಇಲ್ಲಿ ಕಾಂಗ್ರೆಸ್‌ 10 ಸಾವಿರ ಲೀಡ್‌ ನಿರೀಕ್ಷಿಸಿತ್ತಾದರೂ ಪಡೆದದ್ದು 145 ಮತಗಳ ಲೀಡ್‌ ಮಾತ್ರ. ಉಳಿದಂತೆ ಮಾಗಡಿಯಲ್ಲಿ ಎನ್‌ಡಿಎ ಅಭ್ಯರ್ಥಿ ಮಂಜುನಾಥ್‌ ಸರಿಸುಮಾರು 30 ಮತಗಳ ಲೀಡ್‌ ಹಾಗೂ ಕನಕಪುರದಲ್ಲಿ ಡಾಕ್ಟರ್‌ 85 ಸಾವಿರ ಮತ ಪಡೆದು ಕಾಂಗ್ರೆಸ್‌ಗೆ ಕಳೆದ ವಿಧಾನ ಸಭೆ ಮತ್ತು 2019ರ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಇದ್ದ ಸರಿಸುಮಾರು 1.20 ಸಾವಿರ ಲೀಡ್‌ ಅನ್ನು 25 ಸಾವಿರಕ್ಕೆ ಇಳಿಸಿದ್ದಾರೆ. ಇದು ಕಾಂಗ್ರೆಸ್‌ ಅನ್ನು ಚಿಂತೆಗೀಡು ಮಾಡಿದೆ.

Advertisement

ಚನ್ನಪಟ್ಟದಲ್ಲಿ ಜೆಡಿಎಸ್‌, ಬಿಜೆಪಿ ನಿರೀಕ್ಷಿಸಿದ್ದ ಮತಗಳ ಲೀಡ್‌ ಅನ್ನು ಸಾಧಿಸಲು ಸಾಧ್ಯವಾಗದಿದ್ದರೂ ಕಳೆದ ಕ್ಷೇತ್ರದಲ್ಲಿ ಮಂಜುನಾಥ್‌ 22 ಸಾವಿರ ಮತಗಳ ಲೀಡ್‌ ಪಡೆದುಕೊಂಡಿದ್ದಾರೆ. ಇಲ್ಲಿ ಸುರೇಶ್‌ ಗಣನೀಯ ಪ್ರಮಾಣದಲ್ಲಿ ತನ್ನ ಮತ ಹೆಚ್ಚಿಸಿಕೊಂಡಿದ್ದಾರೆ.

ಉಭಯ ನಾಯಕರಿಗೆ ಸ್ವಕ್ಷೇತ್ರಗಳಲ್ಲಿ ಎಚ್ಚರಿಕೆ ಗಂಟೆ: ಕನಕಪುರದಲ್ಲಿ ಮತಗಳ ಪ್ರಮಾಣ ತೀವ್ರ ಕುಸಿತ ಡಿ.ಕೆ. ಶಿವಕುಮಾರ್‌ರಿಗೆ ಎಚ್ಚರಿಕೆ ಗಂಟೆಯಾಗಿದ್ದರೆ, ಇತ್ತ ಚನ್ನಪಟ್ಟಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲೀಡ್‌ ದೊರೆಯದಿರುವುದು ಮತ್ತು ಸುರೇಶ್‌ ಗಣನೀಯ ಮತ ಪಡೆದಿರುವುದು ಕುಮಾರಸ್ವಾಮಿ, ಯೋಗೇಶ್ವರ್‌ ರಿಗೆ ಎಚ್ಚರಿಕೆ ಗಂಟೆಯಾಗಿದೆ.

ಮುಂದೆ ಚನ್ನಪಟ್ಟಣದಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಆಸೆ ಕಾಂಗ್ರೆಸ್‌ನಲ್ಲಿ ಮೂಡಿದೆ. ಸ್ಪರ್ಧೆಗೆ ಸುರೇಶ್‌ ಹೆಸರು ಕೇಳಿ ಬರುತ್ತಿದೆ. ಇನ್ನು ಕನಕಪುರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆಲ್ಲಬಹುದು ಎನ್ನುವ ಚರ್ಚೆ ಜೆಡಿಎಸ್‌ ನಾಯಕರಲ್ಲಿ ಕೇಳಿ ಬರುತ್ತಿವೆ.

ಸೇಡು ತೀರಿಸಿಕೊಂಡ ಎಚ್‌ಡಿಕೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಕರ್ಮಭೂಮಿ ಎನಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರನ್ನು ಸೋಲಿಸುವ ಮೂಲಕ ಜೆಡಿಎಸ್‌ ಕೋಟೆಯನ್ನು ಕಾಂಗ್ರೆಸ್‌ ಉರುಳಿಸಿದ್ದರು. ರಾಮನಗರದಲ್ಲಿ ನಿಖಿಲ್‌ ಸೋಲಿನ ಹಿಂದೆ ಡಿ.ಕೆ.ಸುರೇಶ್‌ ಪಾತ್ರ ಸಾಕಷ್ಟಿತ್ತು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಭಾವನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.

ಕನಕಪುರಕ್ಕೆ ಡಾ.ಅನುಸೂಯ ಮಂಜುನಾಥ್‌ ಸಾರಥ್ಯ?: ಕನಕಪುರದಲ್ಲಿ ಡಿ.ಕೆ.ಎಸ್‌ ಸಹೋದರರಿಗೆ ಟಕ್ಕರ್‌ ಕೊಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪುತ್ರಿ ಡಾ. ಅನುಸೂಯ ಮಂಜುನಾಥ್‌ರಿಗೆ ಕ್ಷೇತ್ರದ ಉಸ್ತುವಾರಿ ವಹಿಸಬೇಕು ಎಂಬ ಕೂಗು ಕನಕಪುರ ಜೆಡಿಎಸ್‌ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ. ಕಳೆದ ಶನಿವಾರ ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದಾಗ, ಈ ಅಭಿಲಾಷೆಯನ್ನು ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ಬಹಿರಂಗವಾಗೇ ವ್ಯಕ್ತಪಡಿಸಿದರು. ಮೈತ್ರಿ ಅಭ್ಯರ್ಥಿ ಗಣನೀಯ ಪ್ರಮಾಣದ ಸ್ಕೋರ್‌ ಮಾಡಿರುವುದು ಕಳೆದ 34 ವರ್ಷಗಳಿಂದ ಡಿ.ಕೆ.ಶಿವಕುಮಾರ್‌ ಪ್ರಾಬಲ್ಯದ ವಿರುದ್ಧ ಹೋರಾಟ ಮಾಡುತ್ತಿದ್ದ ಜೆಡಿಎಸ್‌ ನಾಯಕರಲ್ಲಿ ಹುರುಪು ಮೂಡಿಸಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಬಲ ಪೈಪೋಟಿ ನೀಡಿದವರೆಲ್ಲಾ ಇದೀಗ ಅವರಿಗೆ ಶರಣಾಗಿ ಅವರ ಜತೆಗೆ ನಿಂತಿರುವ ಹಿನ್ನೆಲೆ ಪ್ರಬಲ ನಾಯಕತ್ವ ಬೇಕು ಎಂಬುದು ಕನಕಪುರ ಜೆಡಿಎಸ್‌ ಕಾರ್ಯಕರ್ತರ ಬೇಡಿಕೆಯಾಗಿದ್ದು ಡಾ.ಅನುಸೂಯಾ ಅವರಿಗೆ ಜವಾಬ್ದಾರಿ ವಹಿಸಲಿದ್ದಾರೆ ಎಂಬ ಚರ್ಚೆ ನಡೆದಿದೆ.

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next