ಮತ್ತೂಂದು ಹೊಸತು ಕಣ್ಣು ಬಿಟ್ಟಿದೆ. ನಿನ್ನೆ ಕಂಡ ಹಳತೆಲ್ಲವೂ ಆಲ್ಬಮ್ ಆಗಿ, ಕಾಲದ ಕಪಾಟಿನೊಳಕ್ಕೆ ಹೋಗಿ ಬೆಚ್ಚಗೆ ಕುಳಿತು, ಬಾಗಿಲು ಮುಚ್ಚಿಕೊಂಡಿದೆ. ಅದರ ಕೀಲಿ ಹುಡುಕಿದರೂ ಸಿಗದು. ಅದರೊಟ್ಟಿಗೆ ನುಸುಳಿ ಕೂರಲು, ಅಲ್ಲಿ ಪುಟ್ಟ ಕಿಂಡಿಯೂ ಕಾಣಿಸದು. ಕಾಲದೊಟ್ಟಿಗೆ ಎದುರಿಗೆ ಮುಖ ಮಾಡುವುದು ಎಲ್ಲರಿಗೂ ಅನಿವಾರ್ಯ. ಕಳೆದು ಹೋದದ್ದು “ವ್ಯರ್ಥ’ ಎನ್ನುವ ಚಿಂತೆ ಯಾರಲ್ಲೂ ಇಲ್ಲ. ಅದು ಕೂಡಿಟ್ಟ ಅನುಭವದ ಸಂಪತ್ತಷ್ಟೇ. ಅಲ್ಲಿ ಹೆಜ್ಜೆ ಹೆಜ್ಜೆಗೂ ಕಲಿತ ಪ್ರಜ್ಞೆಗಳೆಲ್ಲ ನಮ್ಮೊಳಗೆ ಹರಳುಗಟ್ಟಿ, ಈ ಹೊಸ ಹಾದಿಗೆ ಸಾಲಿಗ್ರಾಮದಂತೆ ಬೆಳಕಾದ ರೇನೇ, ಬದುಕಿನ ಯಾನ ಬಲು ಚೆಂದ ಮತ್ತು ಸುಲಭ.
ಸಾಮಾನ್ಯ ವಾಗಿ ಹೊಸತರ ಬಗ್ಗೆ ಒಂದು ಪುಟ್ಟ ದಿಗಿಲಿರುತ್ತದೆ. ಅದು ಹೇಗಿರುತ್ತೋ, ಏನೋ ಅಂತ. ಅದೇನು ಮಾಯೆಯೋ, ತಿಳಿಯದು… ಹೊಸ ವರುಷವೆಂದಾಗ, “ಅಯ್ಯೋ ಇದು ಹೊಸತು’ ಎನ್ನುವ ಆತಂಕ ದಿಂದ ಯಾರೂ ತಬ್ಬಿಬ್ಟಾಗುವುದಿಲ್ಲ. ಕಾರಣ, ಈ ಹೊಸ ಹಾದಿ ಯಲ್ಲಿ ಹೆಜ್ಜೆ ಹಾಕುತ್ತಿರುವುದು ನಾವೊಬ್ಬರೇ ಅಲ್ಲವಲ್ಲ. ಸಮಸ್ತ ಸಂಕುಲವೇ ಈ ಹೊಸ ಪಯಣಕ್ಕೆ ಜೋಡಿ.
ಆ ಹೊಸತನ್ನು ಯಾರೂ ನೋಡಿದವರಿಲ್ಲ. ಅದರ ರೂಪ ಗೊತ್ತಿಲ್ಲ. ಭಾವ ತಿಳಿದಿಲ್ಲ. ಬಣ್ಣ ಕಂಡವರಿಲ್ಲ. ಅಂದಾಜಿನಲ್ಲಿ ಅದನ್ನು ಊಹಿಸಿದ ಒಬ್ಬನೇ ಒಬ್ಬನು ನಮ್ಮ ಜೋಡಿ ಕಾಣಿಸುವುದೂ ಇಲ್ಲ. ಹಾಗಾಗಿ ಅದರ ಬಗ್ಗೆ ಏನೋ ಕುತೂಹಲ. ಎಲ್ಲರಿಗೂ ಒಟ್ಟಿಗೆ ದರುಶನ ನೀಡುವ ಏಕ ಕಾಲದ ಬೆರಗು ಅದು. ಆಗಿದ್ದು ಆಗಿಹೋಯ್ತು, ಹೊಸ ಹಾದಿಯಲ್ಲಿ ಎಲ್ಲವೂ ಒಳಿತೇ ಆಗುತ್ತೆ ಎನ್ನುವ ಧೈರ್ಯದ ಹುಮ್ಮಸ್ಸನ್ನು ಎದೆಯೊಳಗೆ ತುಂಬುವ ದಂಡನಾಯಕನಂತೆ ಹೊಸ ಪರ್ವ ನಮ್ಮೆಲ್ಲ ರನ್ನು ಒಟ್ಟಿಗೆ ಕರೆದೊಯ್ಯುತ್ತಿದೆ. “ವರುಷ ಕ್ಕೊಂದು ಹೊಸತು ಜನುಮ, ಹರುಷಕ್ಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ’ ಎನ್ನುವ ವರಕವಿಯ ಹಾಡಿನಂತೆ, ಎಲ್ಲರಿಗೂ ಒಂದು ಜನುಮ ಮತ್ತೆ ಸಿಕ್ಕಿದೆ. ಹಳತೆನ್ನುವ ಶಕ್ತಿಯನ್ನು ಕಳಕೊಂಡು, ಹೊಸತೆನ್ನುವ ಶಕ್ತಿಯನ್ನು ತುಂಬಿ ಕೊಂಡು ಸಾಗುವ ಪಯಣಕ್ಕೆ ಎಲ್ಲರೂ ಸಜ್ಜಾಗಿದ್ದೇವೆ. ಹಾಗೆ ನೋಡಿದರೆ, ಪ್ರಕೃತಿ ಹಾಗೂ ಮನುಷ್ಯ ಚಕ್ರದ ಎಲ್ಲ ರಾಗವೈಭವ ಗಳೂ ಇದನ್ನೇ ಆಧರಿಸಿ ಮುನ್ನಡೆಯುವಂಥವು.
“ಈ ವರ್ಷ ಹೀಗೆಯೇ ಬದುಕಬೇಕು’ ಎನ್ನುವ ಸಂಕಲ್ಪ ಈಗಾಗಲೇ ಅನೇಕರ ಹೆಗಲೇರಿ ಕೂತು, ಮತ್ತೇನನ್ನೋ ಪಿಸುಗುಟ್ಟುತ್ತಿರಬಹುದು. ಅದು ಹೇಳಿದಂತೆಯೇ ಹೆಜ್ಜೆ ಇಡುವ ಸಾಹಸ ನಮ್ಮದಾದರೇನೇ, ಬದುಕಿಗೊಂದು ಸ್ಪಷ್ಟತೆ ಎನ್ನುವ ಭಾವ ನಮ್ಮದು. ಆದರೆ, ಈ ತತ್ವದ ಆಚೆಗೂ ಆಲೋಚನೆ ನೆಟ್ಟ ಭಂಡನೊಬ್ಬ ನಮ್ಮೊಳಗೇ ಇದ್ದಾನೆ. “ಬಂದಂತೆ ಬದುಕು’ ಎನ್ನುವ ಅವನ ಮಾತನ್ನು ಕಿವಿಯೊಳಗೆ ಬಿಟ್ಟುಕೊಳ್ಳಲೇಬೇಕು. ನಾಳೆ ಎನ್ನುವುದರ ಬಗ್ಗೆ ಅವನಿಗೇನೋ ಧೈರ್ಯ. ಅದನ್ನು ಹಿಡಿಯುವ ಈ ಓಟವೇ ಒಂದು ಸ್ಫೂರ್ತಿ ಯಾನ.