ಇದು ಸುಮಾರು ಏಳೆಂಟು ವರ್ಷಗಳ ಮಾತು. ಆಗ ಬಹುಶಃ ನಾನು ಆರನೇ ತರಗತಿ ಓದುತ್ತಿದ್ದಿರಬಹುದು. ಒಂದು ದಿನ ಶಾಲೆಯಿಂದ ಬೇಗ ಬಂದಿದ್ದೆ. ಅಂದು ಅಮ್ಮನೊಡನೆ ಯಾವುದೋ ವಿಚಾರಕ್ಕಾಗಿ ಕಾಲ್ಕಿತ್ತು ಜಗಳಕ್ಕೆ ನಿಂತಿದ್ದೆ. ಅಮ್ಮ ಆಗ ನನ್ನನ್ನೇ ದಿಟ್ಟಿಸಿ ನೋಡುತ್ತಾ ನಕ್ಕಿತು. ನಾನು ಆಗ ಕೋಪದಿಂದ “ನಾನಿಲ್ಲಿ ಬಡ್ಕೊಳ್ತಾ ಇದೀನಿ, ನೀನು ನಗ್ತಾ ಇದೀಯಾ” ಅಂತ ಹೇಳಿದೆ.
ಆಗ ಅವಳು “ಇಲ್ಲ ಗುಂಡ ನೀನು ಸಣ್ಣ ಪಾಪು ಆಗಿದ್ದಾಗ ಹೇಗೆ ತುಂಟನಿದ್ದೋ ಹಾಗೆಯೇ ಇವಾಗಲೂ ತುಂಟಾನಾಗಿಯೇ ಇದ್ದೀಯಾ, ಸ್ವಲ್ಪನೂ ಬದಲಾವಣೆಯಾಗಿಲ್ಲ ಎಂದಳು. ಅವಳು ನನ್ನ ಬಾಲ್ಯವನ್ನು ಮೆಲಕು ಹಾಕಿದ್ದೆ ತಡ… ಆಗ ನಾನು “ಅಮ್ಮ ನನ್ನ ಬಾಲ್ಯದ ಫೋಟೋ ತೋರಿಸು ಅಂದೆ…” ಆಗ ಅವಳು ಎಲ್ಲೋ ಬೀರುವಿನ ಖಜಾನೆಯಲ್ಲಿ ಇಟ್ಟಿದೀನಿ ನೋಡಪ್ಪ ಅಂತ ಹೇಳಿದ್ದೆ ತಡ, ಬಹಳ ಉತ್ಸಾಹದಿಂದ ಬೀರುವಿನ ಖಜಾನೆಗೆ ಕೈ ಹಾಕಿ ಫೋಟೋ ಹುಡುಕುವ ಕೆಲಸ ಶುರು ಮಾಡಿದೆ… ಆ ಬೀರುವಿನ ಖಜಾನೆಯಲ್ಲಿ ಮುಖ್ಯ ಚೀಟಿಗಳು , ಪತ್ರಗಳು ಎಲ್ಲವೂ ಇದ್ದವು.
ಹಾಗೇಯೇ ಹುಡುಕುತ್ತಿದ್ದಾಗ ಅಮ್ಮನ ಹತ್ತನೇ ತರಗತಿ ಅಂಕಪಟ್ಟಿ ಸಿಕ್ಕಿತು. ಅಮ್ಮ 10 ನೇ ತರಗತಿಯಲ್ಲಿದ್ದಾಗ ತೆಗೆದಿದ್ದ ಅಂಕ ನೋಡುತ್ತಾ… ಹಾಗೆ ಗಮನಿಸುವಾಗ ಅವಳ ಹುಟ್ಟಿದ ಹಬ್ಬಕ್ಕೆ ಇನ್ನೊಂದು ದಿನ ಮಾತ್ರವೇ ಬಾಕಿ ಇತ್ತು ಎಂದು ತಿಳಿದೆ. ಅಮ್ಮನ ಹುಟ್ಟು ಹಬ್ಬಕ್ಕೆ ಏನಾದರೂ ಉಡುಗೊರೆ ಕೊಡಲೇ ಬೇಕೆಂದು ಯೋಚಿಸಿದೆ.
ಆಗ ತಲೆಗೆ ನನ್ನ ಹುಂಡಿಯ ನೆನಪಾಯ್ತು. ನಾನು ಪ್ರತೀ ದಿನ ಶಾಲೆಗೆ ಹೋಗುವಾಗ ಅಪ್ಪ ಕೊಡುತ್ತಿದ್ದ ಚಿಲ್ಲರೆ ಕಾಸನ್ನು ಸುಖಾ-ಸುಮ್ಮನೇ ಖರ್ಚು ಮಾಡುತ್ತಿರಲಿಲ್ಲ. ಆ ಹಣವನ್ನು ಹುಂಡಿಯೊಳಗೆ ಹಾಕುತ್ತಿದ್ದೆ. ಅಮ್ಮನಿಗೆ ತಿಳಿಯದೆ ಆ ಹುಂಡಿಯನ್ನು ಒಡೆದು ಎಣಿಸಿದಾಗ ಅದರಲ್ಲಿ 320 ರೂ.ಗಳು ಇತ್ತು. ಆ ದಿನ ಬೆಳಗ್ಗೆ ಪಟ್ಟಣಕ್ಕೆ ಹೋಗಿ ಅಮ್ಮನಿಗಾಗಿಯೆ ಅವಳಿಷ್ಟದ ಹಸಿರು ಬಣ್ಣದ ಸೀರೆಯನ್ನು ತೆಗೆದುಕೊಂಡು ಅದರ ಜೊತೆ ಒಂದಿಪ್ಪತ್ತು ರೂಪಾಯಿ ಕೊಟ್ಟು ಕೆಂಪು ಬಣ್ಣದ ಗಾಜಿನ ಬಳೆಗಳನ್ನು ತಗಂಡು ಮನೆಗೆ ಬಂದೆ.
ನಾನು ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು, ಮನೆಗೆ ಹೋಗಿದ್ದ ತಕ್ಷಣವೇ ಅವಳಿಗಿಷ್ಟವಾದ ಹಸಿರು ಬಣ್ಣದ ಸೀರೆಯನ್ನು, ಕೆಂಪು ಬಣ್ಣದ ಬಳೆಗಳನ್ನು ಕೊಟ್ಟು, ಹುಟ್ಟು ಹಬ್ಬದ ಶುಭಾಶಯ ಅಮ್ಮಾ… ಎಂದು ಬಹಳ ಖುಷಿಯಿಂದ ಹೇಳಿದ್ದೇ.. ತಡ ಅವಳು ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಏನು ಮಾತಾನಾಡದೇ ಕೆನ್ನೆಗೆ ಮುತ್ತಿಟ್ಟಳು. ಆ ಕ್ಷಣದ ಉಲ್ಲಾಸಕ್ಕೆ ಇಬ್ಬರ ಕಣ್ಣಾಲಿಗಳು ಜಿನುಗಿದವು. ಅವಳು ಇಂದಿಗೂ ಆ ಸೀರೆಯನ್ನು ಭದ್ರವಾಗಿ, ಸುರಕ್ಷಿತವಾಗಿ ಎತ್ತಿಟ್ಟಿದ್ದಾಳೆ. ಆ ಸೀರೆಯನ್ನು ಈಗಲೂ ನೋಡಿದರು ಸಹ ಆ ನೆನಪು ಕಾಡಿ, ಕಣ್ಣಂಚು ತೇವವಾಗುತ್ತಿವೆ.
ರವಿತೇಜ ಚಿಗಳಿಕಟ್ಟೆ
ಪತ್ರಿಕೋದ್ಯಮ ವಿದ್ಯಾರ್ಥಿ, ತುಮಕೂರು