-ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ ಮಾತ್ರ ಹೇಳ ಹೆಸರಿಲ್ಲದಂತಿತ್ತು. ಫೆಬ್ರವರಿ ತಿಂಗಳು ಬರುತ್ತಿದ್ದಂತೆಯೇ, ಒಂದಷ್ಟು ಹೊಸಬರ ಚಿತ್ರಗಳು ಗೆಲುವಿನ ಗೆರೆ ಮುಟ್ಟಿದ್ದು ಸುಳ್ಳಲ್ಲ. ಹಾಗೆ ನೋಡಿದರೆ, ಫೆಬ್ರವರಿಯಲ್ಲಿ ಬರೋಬ್ಬರಿ 34 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಹಾಗೆ ಲೆಕ್ಕ ಹಾಕಿದರೆ, ದಿನಕ್ಕೊಂದು ಸಿನಿಮಾ ಬಂದ ಹಾಗೆ. ಹಾಗಂತ, ಫೆಬ್ರವರಿ ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ತಕ್ಕಮಟ್ಟಿಗೆ ಒಂದಷ್ಟು ಹೊಸಬರ ಚಿತ್ರಗಳು ಖುಷಿಪಡಿಸಿದವು. ಮಿಕ್ಕಂತೆ ಹಾಗೆ ಬಂದ ಸಿನಿಮಾಗಳು ಹಾಗೆ ಹೊರಟುಬಿಟ್ಟವು.
Advertisement
ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಕಾದಿದ್ದವು. ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಒಂದಷ್ಟು ಗೆಲುವಿನ ಮಂದಹಾಸ ಮೂಡಿಸಿದರೆ, ಇನ್ನಷ್ಟು ಚಿತ್ರಗಳು ತಕ್ಕಮಟ್ಟಿಗಿನ ಸಮಾಧಾನಕ್ಕೆ ಕಾರಣವಾದವು. ಮೊದಲ ವಾರ ಒಂಬತ್ತು ಚಿತ್ರಗಳು, ಎರಡನೇ ವಾರ ಎಂಟು ಚಿತ್ರಗಳು, ಮೂರನೇ ವಾರ ಆರು ಸಿನಿಮಾಗಳು ಬಿಡುಗಡೆಯಾಗಿವೆ. ಈ ವಾರ ಲೆಕ್ಕಕ್ಕೆ ಆರು ಸಿನಿಮಾಗಳಿವೆ. ಲೆಕ್ಕಕ್ಕೆ ಸಿಗದ ಬೆರಳೆಣಿಕೆಯಷ್ಟು ಬಿಡುಗಡೆಯಾದ ಸಿನಿಮಾಗಳನ್ನೂ ಸೇರಿಸಿದರೆ, 34 ಪ್ಲಸ್ ಚಿತ್ರಗಳಾಗುತ್ತವೆ. ಈ ಪೈಕಿ ಭರವಸೆ ಮೂಡಿಸಿದ ಚಿತ್ರಗಳಿಗೇನೂ ಕಮ್ಮಿ ಇಲ್ಲ. ಸ್ಟಾರ್ ಚಿತ್ರಗಳು ಬಂದರೆ, ಹೊಸಬರ ಚಿತ್ರಗಳಿಗೆ ಸ್ವಲ್ಪ ಪೆಟ್ಟು ಬೀಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಒಂದರ ಮೇಲೊಂದರಂತೆ ಬಿಡುಗಡೆ ಕಂಡ ಸಿನಿಮಾಗಳ ಪೈಕಿ ಸದ್ದು ಮಾಡಿದ ಚಿತ್ರಗಳೂ ಸಿಕ್ಕಿವೆ ಎಂಬುದೇ ಸಮಾಧಾನದ ಸಂಗತಿ.
Related Articles
Advertisement
ಈ ಸಿನಿಮಾ ಬಿಡುಗಡೆಯ ಪರ್ವ ಈ ವಾರಕ್ಕೂ (ಫೆ.28) ಮುಂದುವರೆದಿದೆ ಎಂಬುದನ್ನು ಗಮನಿಸಲೇಬೇಕು. ಹೌದು ಸದ್ಯಕ್ಕೆ ಘೋಷಣೆಯಾಗಿರುವ ಪ್ರಕಾರ ಈ ವಾರ ಕೂಡ ಆರು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಈ ಸಿನಿಮಾಗಳನ್ನು ಲೆಕ್ಕ ಹಾಕಿದರೆ 29 ಚಿತ್ರಗಳು ಬಿಡುಗಡೆಯಾದಂತೆ.
ಪ್ರಚಾರವಿಲ್ಲದೆಯೂ ಬೆರಳೆಣಿಕೆ ಚಿತ್ರಗಳು ತೆರೆಗೆ ಬಂದಿರುವುದೂ ಉಂಟು. ಅಂದಹಾಗೆ, ಈ ವಾರ “ಮಾಯ ಬಜಾರ್’, “ಬಿಚ್ಚುಗತ್ತಿ’, “ಅಸುರ ಸಂಹಾರ’, “ಜಗ್ಗಿ ಜಗನ್ನಾಥ’, “ಆನೆಬಲ’, “ಮಾಯಾ ಕನ್ನಡಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು. ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳೆಂದರೆ, ಪುನೀತ್‌ರಾಜಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗಿರುವ “ಮಾಯಾ ಬಜಾರ್’ ಹಾಗು ಐತಿಹಾಸಿಕ ಸಿನಿಮಾ “ಬಿಚ್ಚುಗತ್ತಿ’. ಇವುಗಳ ಮೇಲೆ ಸಹಜವಾಗಿಯೇ ಕುತೂಹಲವಿದೆ. ಅದಕ್ಕೆ ಕಾರಣ, ಪುನೀತ್ ಬ್ಯಾನರ್‌ನ ಸಿನಿಮಾ ಅಂದಾಗ, ಕಥೆಗೆ ಹೆಚ್ಚು ಒತ್ತು ಕೊಡಲಾಗುತ್ತೆ. ಈಗಾಗಲೇ ಟೀಸರ್, ಟ್ರೇಲರ್ ಮತ್ತು ಪೋಸ್ಟರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ವಾಸ್ತವ ಸತ್ಯಾಂಶಗಳಿವೆ. ಇನ್ನು, ಕೋಟೆ ನಾಡು ಚಿತ್ರದುರ್ಗದ ಭರಮಣ್ಣ ನಾಯಕ ಅವರ “ಬಿಚ್ಚುಗತ್ತಿ’ ಸಿನಿಮಾ ಕೂಡ ಸಾಕಷ್ಟು ಭರವಸೆ ಮೂಡಿಸಿದೆ. ಇದು ಬಿ.ಎಲ್.ವೇಣು ಅವರ ಕಾದಂಬರಿ ಆಧರಿತ ಸಿನಿಮಾ ಅನ್ನುವುದು ಒಂದೆಡೆಯಾದರೆ, ರಾಜವರ್ಧನ್ ಅವರ ಮೊದಲ ಐತಿಹಾಸಿಕ ಸಿನಿಮಾ ಎಂಬುದು ಇನ್ನೊಂದೆಡೆ. ಚಿತ್ರದಲ್ಲಿ ದಳವಾಯಿ ಮುದ್ದಣ್ಣ ಅವರ ಕುರಿತ ಕಥೆಯೂ ಮೂಡಿದೆ ಅನ್ನೋದು ಇನ್ನೊಂದು ವಿಶೇಷ. ಹಾಗಾಗಿ ಈ ಎರಡು ಸಿನಿಮಾಗಳು ಈ ವಾರದ ಭರವಸೆ ಎಂಬುದಂತೂ ನಿಜ. ಅದೇನೆ ಇರಲಿ, ಈ ವರ್ಷ ಫೆಬ್ರವರಿ ಅಧಿಕ ವರ್ಷ. ಹಾಗೆಯೇ ಸಿನಿಮಾ ಬಿಡುಗಡೆಯಲ್ಲೂ ಅಧಿಕ ದಾಖಲೆಯಂತೂ ಹೌದು.
ವಿಜಯ್ ಭರಮಸಾಗರ