Advertisement

ಪ್ರಧಾನಿ ನರೇಂದ್ರ ಮೋದಿ@68; ಶುಭ ಹಾರೈಸಿ- ಅಪರೂಪದ ಫೋಟೋಗಳು

06:02 PM Apr 13, 2020 | Sharanya Alva |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 68ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಪೂಜೆ, ಹೋಮ, ಹವನಗಳು ನಡೆಯುತ್ತಿದೆ.

Advertisement

ಪ್ರಧಾನಿ ಮೋದಿ ಅವರು ಸೋಮವಾರ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ತೆರಳಿ, ಅಲ್ಲಿ ನಾರೂರ್ ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಸಮಯ ಕಳೆಯುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಬಳಿಕ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಏತನ್ಮಧ್ಯೆ ಪ್ರಧಾನಿಯ ಹುಟ್ಟು ಹಬ್ಬ ಇಂದು ಟ್ವೀಟರ್ ಟ್ರೆಂಡಿಂಗ್ ನಲ್ಲಿ ಭರ್ಜರಿ ಸದ್ದು ಮಾಡಿದೆ. ಹ್ಯಾಶ್ ಟ್ಯಾಗ್ #HappyBDayPMModi ಭರ್ಜರಿ ಟ್ರೆಂಡಿಂಗ್ ಆಗಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ನೀವು ನೂರ್ಕಾಲ ಬಾಳಿ ದೇಶದ ಜನರ ಸೇವೆಯನ್ನು ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.

Advertisement

ಕಾಂಗ್ರೆಸ್ ಪಕ್ಷ ಕೂಡಾ ಟ್ವೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದೆ. ಅಲ್ಲದೇ ಭಾರತೀಯ ಜನತಾ ಪಕ್ಷದ ಮುಖಂಡರಾದ ಅಮಿತ್ ಶಾ, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಸಾವಿರಾರು ಗಣ್ಯರು ಶುಭ ಹಾರೈಸಿದ್ದಾರೆ.

ಜನಪ್ರಿಯ ನಾಯಕನ ಬಾಲ್ಯ:

1950ರ ಸೆಪ್ಟೆಂಬರ್ 17ರಂದು ಗುಜರಾತ್ ನ (ಅಂದು ಮುಂಬೈ ರಾಜ್ಯಕ್ಕೆ ಸೇರಿತ್ತು) ಮೆಹ್ಸಾನಾ ಜಿಲ್ಲೆಯ ವಡ್ ನಗರದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಜನಿಸಿದ್ದರು. ದಾಮೋದರ್ ದಾಸ್ ಮುಲ್ ಚಾಂದ್ ಮೋದಿ ಹಾಗೂ ಹೀರಾಬೆನ್ ಮೋದಿ ದಂಪತಿಗೆ ಒಟ್ಟು ಆರು ಮಂದಿ ಮಕ್ಕಳು. ಅವರಲ್ಲಿ ಮೂರನೇಯವರೇ ನರೇಂದ್ರ ಮೋದಿ.

ಬಾಲ್ಯದಲ್ಲಿ ಕಷ್ಟದ ದಿನಗಳನ್ನು ಕಳೆದ ಮೋದಿ ಅವರು ಬಾಲ್ಯದಲ್ಲಿ ವಡ್ ನಗರದ ರೈಲ್ವೆ ನಿಲ್ದಾಣದಲ್ಲಿ ಟೀ ಮಾರಾಟ ಮಾಡುವ ಮೂಲಕ ತಂದೆಗೆ ಸಹಾಯ ಮಾಡುತ್ತಿದ್ದರು. 1967ರಲ್ಲಿ ಹೈಯರ್ ಸೆಕೆಂಡರಿ ಎಜುಕೇಶನ್ ಪೂರೈಸಿದ್ದರು. 8ನೇ ವಯಸ್ಸಿಗೆ ಮೋದಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಸ್ಥಳೀಯ ಆರ್ ಎಸ್ ಎಸ್ ಶಾಖೆಯ ತರಬೇತಿಗೆ ಹೋಗಲು ಆರಂಭಿಸಿದ್ದರು. ಅಲ್ಲಿ ಮೋದಿ ಅವರಿಗೆ ಲಕ್ಷ್ಮಣ್ ರಾವ್ ಇನಾಮಾದಾರ್ ಅವರನ್ನು ಭೇಟಿಯಾಗಿದ್ದರು. ವಕೀಲ ಸಾಹೇಬ್ ಎಂದೇ ಜನಪ್ರಿಯರಾಗಿದ್ದ ಅವರು ಬಾಲ ಸ್ವಯಂಸೇವಕ್ ಆಗಿದ್ದ ಮೋದಿಯವರು ಇಷ್ಟವಾಗಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆಯೇ 1967ರಲ್ಲಿ ಮೋದಿ ಮನೆ ತೊರೆದಿದ್ದರು.

ಸೇವೆಯತ್ತ ಚಿತ್ರ ನೆಟ್ಟಿದ್ದ ಮೋದಿ ಅವರು ಉತ್ತರ, ಈಶಾನ್ಯ ಭಾರದತ್ತ ಮೋದಿ ಅವರು 2 ವರ್ಷಗಳ ಕಾಲ ಸಂಚರಿಸಿದ್ದರು. ಕೋಲ್ಕತಾದಲ್ಲಿ ಸ್ವಾಮಿ ವಿವೇಕಾನಂದ ಅವರು ಸ್ಥಾಪಿಸಿದ್ದ ಆಶ್ರಮಕ್ಕೂ ಭೇಟಿ ನೀಡಿದ್ದರು. ಸ್ವಾಮಿ ವಿವೇಕಾನಂದ ಅವರು ಮೋದಿ ಅವರ ಬಹು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

1971ರಲ್ಲಿನ ಭಾರತ ಪಾಕಿಸ್ತಾನ ಯುದ್ಧದ ನಂತರ ಗುಜರಾತ್ ನಲ್ಲಿ ತನ್ನ ಚಿಕ್ಕಪ್ಪನ ಜೊತೆ ಮಾಡುತ್ತಿದ್ದ ಕೆಲಸಕ್ಕೆ ಪೂರ್ಣ ವಿರಾಮ ಹಾಕಿದ ಬಳಿಕ ಆರ್ ಎಸ್ ಎಸ್ ನಲ್ಲಿ ಇಮಾನ್ ದಾರ್ ಅವರ ಗರಡಿಯಲ್ಲಿ ಪೂರ್ಣ ಪ್ರಮಾಣದ ಪ್ರಚಾರಕ್ ಆಗಿ ಕಾರ್ಯನಿರ್ವಹಿಸತೊಡಗಿದ್ದರು.

ಹೀಗೆ ಹಲವಾರು ಏಳು ಬೀಳುಗಳ ನಡುವೆ 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ತದನಂತರ ದೀರ್ಘಕಾಲ ಸಿಎಂ ಗಾದಿಯಲ್ಲಿ ಆಡಳಿತ ನಡೆಸಿದ್ದರು. 2014ರಲ್ಲಿ ಪ್ರಧಾನಿ ಗದ್ದುಗೆ ಏರುವ ಮೂಲಕ ದೇಶ, ವಿದೇಶಗಳಲ್ಲಿ ತನ್ನದೇ ವರ್ಚಸ್ಸಿನ ಮೂಲಕ ಜನಮನ್ನಣೆ ಗಳಿಸಿದ ನಾಯಕನಾಗಿ ಬೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next