ಬೆಂಗಳೂರು: ಮೈತ್ರಿ ಸರ್ಕಾರ ಪತನವಾದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅತಿ ಹೆಚ್ಚು ಸಂತುಷ್ಟ ವ್ಯಕ್ತಿಯಾಗಬಹುದು. ಏಕೆಂದರೆ ಅವರು ಸಾಕಷ್ಟು ಆಶ್ವಾಸನೆಗಳನ್ನು ನೀಡಿದ್ದು, ಅವುಗಳನ್ನು ಈಡೇರಿಸಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಪತನಗೊಂಡರೆ ತಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಮುಂದಾಗುತ್ತಿರುವಾಗಲೇ ಸರ್ಕಾರ ಪತನಗೊಂಡಿತು ಎಂದು ಸಬೂಬು ಹೇಳಬಹುದು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವುದಾಗಿ ಕನಸಿನಲ್ಲೂ ಎಣಿಸಿರಲಿಲ್ಲ. ಹಾಗಾಗಿ ಸಾಕಷ್ಟು ಆಶ್ವಾಸನೆ ನೀಡಿದ್ದರು. ಆದರೆ ಈಗ ಮೈತ್ರಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪತನವಾದರೆ ಕುಮಾರಸ್ವಾಮಿ ಹೆಚ್ಚು ಖುಷಿಪಡುತ್ತಾರೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಶೇ.9ರಷ್ಟು ಅನುದಾನ ಕಾಯ್ದಿರಿಸಿದ್ದರು. ಅದನ್ನು ಮುಂದುವರಿಸಿದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್‌ನಲ್ಲಿ ಅನುದಾನವನ್ನು ಶೇ.6ಕ್ಕೆ ಇಳಿಕೆ ಮಾಡಿದ್ದರು. ಕುಮಾರಸ್ವಾಮಿಯವರು ಇತ್ತೀಚೆಗೆ ಮಂಡಿಸಿ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕೆ ಕೇವಲ ಶೇ.5ರಷ್ಟು ಅನುದಾನ ಕಾಯ್ದಿರಿಸಿದ್ದಾರೆ. ಶೇ.33ರಷ್ಟು ಜನಸಂಖ್ಯೆಯಿರುವ ಸಮುದಾಯದವರ ಕಲ್ಯಾಣಕ್ಕೆ ಕೇವಲ ಶೇ.5ರಷ್ಟು ಅನುದಾನ ಕಾಯ್ದಿರಿಸಿರುವುದು ಸರಿಯೇ? 150 ಜಾತಿಗಳನ್ನು ಒಳಗೊಂಡ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯಡಿಯೂರಪ್ಪ ಅವರು 100 ಕೋಟಿ ರೂ. ಅನುದಾನ ನೀಡಿದ್ದರು. ಆದರೆ ಕುಮಾರಸ್ವಾಮಿಯವರು ಕೇವಲ 25 ಕೋಟಿ ರೂ. ಕಾಯ್ದಿರಿಸಿದ್ದು, ಈವರೆಗೆ 10 ಕೋಟಿ ರೂ. ಕೂಡ ಬಿಡುಗಡೆಯಾಗಿಲ್ಲ ಎಂದು ದೂರಿದರು.
ರಾಜ್ಯದ ರೈತರ ಸಾಲ 48,000 ಕೋಟಿ ರೂ. ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದರು. ಅದರಂತೆ 44 ಲಕ್ಷ ಫಲಾನುಭವಿಗಳು ಋಣಮುಕ್ತರಾಗಬೇಕು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ 50,000 ರೈತರನ್ನು ಋಣಮುಕ್ತರನ್ನಾಗಿಸಲಾಗಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಎಲ್ಲ 44 ಲಕ್ಷ ರೈತರ ಸಾಲ ಮನ್ನಾ ಆಗಲು ಎಷ್ಟು ವರ್ಷ ಬೇಕಾಗಬಹುದೋ ಗೊತ್ತಾಗುತ್ತಿಲ್ಲ ಎಂದರು.
ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಬಾರದು ಹಾಗೂ ಜನಾಭಿಪ್ರಾಯಕ್ಕೆ ಮನ್ನಣೆ ಸಿಗಬೇಕು ಎಂಬುದು ಬಿಜೆಪಿ ಆಶಯ. ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯ. ಶಬರಿಮಲೆಗೆ ಹೋಗುವವರನ್ನು ಹೋಗಬೇಡಿ ಎನ್ನಲು ಸಾಧ್ಯವಿಲ್ಲ
– ಬಿ.ಜೆ.ಪುಟ್ಟಸ್ವಾಮಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ