ಬೆಂಗಳೂರು: ಹಾಪ್‌ಕಾಮ್ಸ್ ವತಿಯಿಂದ ಫೆ.14ರಿಂದ ಮಾರ್ಚ್ ತಿಂಗಳ ಅಂತ್ಯದವರೆಗೆ ಸಂಸ್ಥೆಯ ಮಳಿಗೆಗಳಲ್ಲಿ ದ್ರಾಕ್ಷಿ, ಕಲ್ಲಂಗಡಿ ಮತ್ತು ವಿವಿಧ ಹಣ್ಣುಗಳ ಮೇಳ ನಡೆಯಲಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಅವರು, ಫೆ.14ರಂದು ಬೆಳಗ್ಗೆ 11ಕ್ಕೆ ನಗರದ ಹಡ್ಸನ್ ವೃತ್ತದ ಸಂಸ್ಥೆಯ ಮಾರಾಟ ಮಳಿಗೆ ಆವರಣದಲ್ಲಿ ಮೇಳ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನಗರಾಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್ ಕಾರ್ಯಕ್ರಮ ಉದ್ಘಾಟಿಸುವರು.
ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾರ್ಪೊರೇಟರ್ ಆರ್.ವಸಂತಕುಮಾರ್, ಕೆಎಚ್‌ಎಫ್ ಅಧ್ಯಕ್ಷ ಬಸವರಾಜ್ ಆರ್.ಪಾಟೀಲ್, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ದ್ರಾಕ್ಷಾರಸ ಅಭಿವೃದ್ಧಿ ಮಂಡಳಿ ರವೀಂದ್ರ ಶಂಕರ ಮಿರ್ಜೆ, ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೀವ್ ಜಾವ್ಲಾ, ಆಯುಕ್ತ ಪ್ರಭಾಷ್ ಚಂದ್ರ ರೇ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.
ವಿವಿಧ ತಳಿಗಳು: ಮೇಳದಲ್ಲಿ ಬೆಂಗಳೂರು ನೀಲಿ, ಶರದ್ ಸೀಡ್‌ಲೆಸ್, ಕೃಷ್ಣ ಶರದ್, ಫ್ಲೇಮ್ ಸೀಡ್‌ಲೆಸ್, ಥಾಮ್ಸನ್ ಸೀಡ್‌ಲೆಸ್, ಸೊನಾಕ, ತಾಜ್‌ಗಣೇಶ್, ಇಂಡಿಯನ್ ರೆಡ್‌ಗೊಬ್, ಇಂಡಿಯನ್ ಬ್ಲಾಕ್‌ಗೊಬ್, ಕ್ರಿಮ್‌ಸನ್ ಸೀಡ್‌ಲೆಸ್, ಆಸ್ಟ್ರೇಲಿಯಾ ರೆಡ್‌ಗೊÉàಬ್, ವಾಷಿಂಗ್ಟನ್ ರೆಡ್‌ಗೊಬ್ ಮತ್ತು ರಸಕ್ಕೆ ಉಪಯೋಗಿಸುವ ದ್ರಾಕ್ಷಿಗಳಿಗಳ ಮಾರಾಟ ಮಾಡಲಾಗುತ್ತಿದೆ. ನಾಮದಾರಿ, ಕಿರಣ್, ಹಳದಿ ತಿರುಳಿನ ಕಲ್ಲಂಗಡಿ ತಳಿಗಳು, ನಾಗಪುರ ಕಿತ್ತಳೆ, ಕೊಡಗು ಕಿತ್ತಳೆ, ಕಿನೋ ಕಿತ್ತಳೆ, ಆಸ್ಟ್ರೇಲಿಯಾ ಕಿತ್ತಳೆ, ಟರ್ಕಿ ಕಿತ್ತಳೆ, ಸೌತ್ ಆಫ್ರಿಕಾ ಕಿತ್ತಳೆ ಮತ್ತು ದೇವನಹಳ್ಳಿ ಚಕ್ಕೋತ, ಸೌತ್ ಆಫ್ರಿಕಾ ಚಕ್ಕೋತ, ನಾಮದಾರಿ ಖಬೂìಜ, ಸನ್ ಖಬೂìಜ, ಹನಿ ಡ್ನೂ ಖಬೂìಜ ಇತ್ಯಾದಿ ತಳಿಗಳನ್ನು ಮಾರಾಟಕ್ಕೆ ಇಡಲಾಗುತ್ತಿದೆ ಎಂದರು.
ಶೇ.10 ರಿಯಾಯಿತಿ: ಕಳೆದ ಬಾರಿ 355 ಟನ್ ದ್ರಾಕ್ಷಿ, 1001 ಟನ್ ಕಲ್ಲಂಗಡಿ 4.67 ಕೋಟಿ ವಹಿವಾಟು ನಡೆಸಲಾಗಿತ್ತು. ಈ ಬಾರಿ 1000 ಮೆಟ್ರಿಕ್ ಟನ್ ದ್ರಾಕ್ಷಿ, 1200 ಮೆಟ್ರಿಕ್ ಟನ್ ಕಲ್ಲಂಗಡಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಒಣಹಣ್ಣುಗಳ ಮಾರಾಟವು ಇದ್ದು, ಒಣದ್ರಾಕ್ಷಿ (ಶೇ.5 ರಿಯಾಯಿತಿ), ಗೋಡಂಬಿ, ಖರ್ಜುರ, ಬಾದಾಮಿ, ಪಿಸ್ತಾ, ಡೇಟ್ಸ್‌ಗಳು ಮಾರುಕಟ್ಟೆ ದರದಂತೆ ಸಿಗಲಿದ್ದು, ನಗರದ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇಳ ನಡೆಯಲಿದೆ ಎಂದು ಹೇಳಿದರು.
ಸಿರಿಧಾನ್ಯ ಮೇಳ
ಹಾಪ್‌ಕಾಮ್ಸ್ ಇದೇ ಮೊದಲ ಬಾರಿಗೆ ಸಿರಿಧಾನ್ಯ ಮೇಳ ನಡೆಸಲಿದೆ. ರಾಜಾಜಿನಗರದ ರಾಮಮಂದಿರ, ನಾಗರಬಾವಿ, ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್, ಮೈಸೂರು-ಬೆಂಗಳೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ಮಾತ್ರ ಮುಂದಿನವಾರ ಸಿರಿಧಾನ್ಯ ಮೇಳ ನಡೆಸಲು ಯೋಜಿಸಿದೆ. ಈ ಮೇಳದಲ್ಲಿ ಸಿರಿಧಾನ್ಯಗಳಿಂದ ಮಾಡಬಹುದಾದ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಗ್ರಾಹಕರು ಮಾಡಿದ ತಿಂಡಿಯನ್ನು ಸವಿದು, ನಂತರ ಸಿರಿಧಾನ್ಯ ಖರೀದಿಸಲು ಅವಕಾಶ ನೀಡಲಾಗುತ್ತಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾಹಿತಿ ನೀಡಿದ್ದಾರೆ.
ಹಾಪ್‌ಕಾಮ್ಸ್ ಪ್ರಧಾನ ಕಚೇರಿ ಸೇರಿ 51 ಮಳಿಗೆಗಳಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳ ನಡೆಯಲಿದೆ. ಫೆ.14ರಿಂದ 15 ದಿನಗಳ ವರೆಗೆ ಒಂದೊಂದು ಬಡಾವಣೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರಿಂದ ಮೇಳ ಉದ್ಘಾಟನೆ ಮಾಡಿಸುವ ಪ್ರಯತ್ನವನ್ನು ಹಾಪ್‌ಕಾಮ್ಸ್ ಮಾಡುತ್ತಿದೆ. ಈ ಮೂಲಕ ಸ್ಥಳೀಯ ಗ್ರಾಹಕರ ಗಮನ ಸೆಳೆಯುವ ಉದ್ದೇಶವಿದ್ದು, ಮೇಳದ ಯಶಸ್ವಿಗೆ ಇದು ಸಹಕಾರಿಯಾಗಲಿದೆ.
-ಪ್ರಶಾಂತ್, ಪ್ರಧಾನ ವ್ಯವಸ್ಥಾಪಕ, ಹಾಪ್‌ಕಾಮ್ಸ್