ಹನೂರು: ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ಗಡಿಯಂಚಿನ ಗ್ರಾಮ ಜಲ್ಲಿಪಾಳ್ಯದ ಚಿನ್ನತಂಬಿ ಎಂಬಾತ ಬಂಧಿತ ಆರೋಪಿ.
ಈತ ಮನೆಯಲ್ಲಿ ಕೆಲ ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿರುವುದಾಗಿ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ದೊರೆಕಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಜಿ.ಕೆ.ಗಿರಿಧರ್ ನೇತೃತ್ವದ ತಂಡ ಆರೋಪಿ ಚಿನ್ನತಂಬಿ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿಯ ಮನೆಯಲ್ಲಿ ಚಿಪ್ಪುಹಂದಿಯ ಚಿಪ್ಪುಗಳು, ಉಗುರುಗಳು, ಒಂದು ಚುಕ್ಕೆ ಜಿಂಕೆಯ ಕೊಂಬು, ಒಂದು ಕಸಾಪ್ ಕತ್ತಿ, 4 ಉರುಳುಗಳು ಮತ್ತು ಒಂದು ಚಾಕನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಗಿರೀಶ್.ಎಸ್, ಅರಣ್ಯ ಪಾಲಕರಾದ ಅಮೀನ್ ಸಾಬ್ ಮಕಂದರ್, ಕಾಶಿಲಿಂಗ ನರೂಟೆ, ದೀಕ್ಷಿತ್.ಡಿ, ವಾಚರ್‍ಗಳಾದ ಮುರುಗ, ಮಹೇಂದ್ರ,ಮೋಹನ್,ಶಿವರಾಜು, ರಮೇಶ್, ವಾಹನ ಚಾಲಕ ಸರವಣನ್ ಭಾಗವಹಿಸಿದ್ದರು.