Advertisement

ನೆಲದಿಂದ ಎದ್ದ ಹನುಮ

09:29 PM Feb 21, 2020 | Lakshmi GovindaRaj |

ರೈತರು ಮಣ್ಣಿನ ದಿಬ್ಬವನ್ನು ನೆಲಸಮ ಮಾಡುವಾಗ, ನೆಲದ ಅಡಿಯಲ್ಲಿ ಹನುಮನ ಗುಡಿ ಕಾಣಿಸಿತು. ಆತನೇ “ನೆಲದಾಂಜನೇಯ’ ಎಂದು ಪ್ರಸಿದ್ಧಿ ಪಡೆದ…

Advertisement

ಕಲಿಯುಗದಲ್ಲಿ ಶನಿದೇವರ ಕೃಪಾಕಟಾಕ್ಷ ಬೇಕಿದ್ದರೆ ಹನುಮಂತನನ್ನು ಆರಾಧಿಸಬೇಕು. ಶಕ್ತಿ, ಯುಕ್ತಿ ಸಾಹಸಕ್ಕೆ ಹನುಮಂತ ಪ್ರಸಿದ್ಧಿ. ಅದರಲ್ಲೂ ಪುರಾತನ ದೇಗುಲಗಳ ಹನುಮ ಎಷ್ಟೇ ದೂರವಿದ್ದರೂ, ಭಕ್ತರು ನಂಬಿ ಬರುತ್ತಾರೆ. ದೊಡ್ಡಬಳ್ಳಾಪುರ­ದಲ್ಲಿರುವ ನೆಲದ ಅಂಜನೇಯ ಕೂಡ ಅಂಥ ಮಹಿಮೆಯುಳ್ಳ ಕ್ಷೇತ್ರ.

ನೆಲದಡಿ ಸಿಕ್ಕ ದೇಗುಲ: ಶತಮಾನಗಳ ಹಿಂದೆ ಈ ದೇಗುಲದ ಜಾಗದಲ್ಲಿ ಹೊಲವಿತ್ತು. ಮಣ್ಣಿನ ದಿಬ್ಬವನ್ನು ನೆಲಸಮ ಮಾಡುವಾಗ, ಇಲ್ಲಿ ನೆಲದ ಆಳದಲ್ಲಿ ದೇವಸ್ಥಾನದ ಗರ್ಭಗುಡಿ ಕಾಣಿಸಿತು. ನಂತರದಲ್ಲಿ ಹನುಮ ಗುಡಿಯನ್ನು ಸ್ವಚ್ಛಮಾಡಿ, ಭಕ್ತಾದಿಗಳು ಬರಲು ದಾರಿಮಾಡಿ, ಪೂಜೆ- ಪುನಸ್ಕಾರಗಳು ಪ್ರಾರಂಭವಾದವು.

ದೇವಸ್ಥಾನ ಹಾಗೂ ದೇವರ ಮೂರ್ತಿ ನೆಲದಡಿಯಲ್ಲಿ ಸಿಕ್ಕಿದ್ದರಿಂದ ಈ ಹನುಮಪ್ಪನಿಗೆ ನೆಲದಾಂಜನೇಯ ಎಂಬ ಹೆಸರು ಬಂತು. ಈ ದೇಗುಲ ಹಾಗೂ ಮೂರ್ತಿ, ಸಾವಿರಾರು ವರ್ಷದ ಹಿಂದಿನದು ಇರಬಹುದೆಂದು ಅಂದಾಜಿಸಲಾಗಿದೆ. ಹಿಂದೆ ಧರ್ಮಾಂಧ ದಾಳಿಕೋರರು ಶ್ರದ್ಧಾ ಹಿಂದೂ ದೇಗುಲಗಳನ್ನು ನಾಶಮಾಡುತ್ತಿದ್ದ ಕಾಲದಲ್ಲಿ ಈ ಗುಡಿಯನ್ನು ರಕ್ಷಿಸುವುದಕ್ಕಾಗಿ ಮಣ್ಣಿನಲ್ಲಿ ಮುಚ್ಚಿ ರಕ್ಷಿಸಿರಬಹುದು ಎಂದು ಊಹಿಸಲಾಗಿದೆ.

ರಾಮ- ಹನುಮ ಆಲಿಂಗನ: ಮುಖ್ಯದ್ವಾರದಲ್ಲಿ ಶ್ರೀರಾಮ- ಹನುಮರು ಆಲಿಂಗಿಸಿಕೊಂಡಿರುವ ಆಳೆತ್ತರದ ಮೂರ್ತಿ ಮನಸ್ಸಿಗೆ ಮುದ ನೀಡುವಂತಿದೆ. ಪ್ರತಿದಿನವೂ ಸಾವಿರಾರು ಜನ ಈ ದೇಗುಲಕ್ಕೆ ಬಂದು ಅಂಜನೇಯನಿಗೆ ಹರಕೆ ಸಲ್ಲಿಸುತ್ತಾರೆ.

Advertisement

8 ದಿನ ನಿರಂತರ ಪ್ರದಕ್ಷಿಣೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ಪ್ರತೀತಿ ಇದೆ. ಸಂತಾನಭಾಗ್ಯ ಕರುಣಿಸುವ ಕರುಣಾಮಯಿ ಈ ಹನುಮ. ಕಂಕಣ ಭಾಗ್ಯ ಕೂಡಿರದ ಹುಡುಗಿಯರು ಇಲ್ಲಿ 48 ದಿನ ಬಂದು ಹನುಮಪ್ಪನ ದರ್ಶನ- ಪೂಜೆ ಮಾಡಿದರೆ, ಕಂಕಣಭಾಗ್ಯ ಕೂಡಿಬರುತ್ತದೆ ಎಂದು ಭಕ್ತರು ನಂಬಿದ್ದಾರೆ.

ದರುಶನಕೆ ದಾರಿ…: ದೊಡ್ಡಬಳ್ಳಾಪುರದ ಹಳೇ ಬಸ್‌ ನಿಲ್ದಾಣದ ಸಮೀಪವೇ ನೆಲದ ಅಂಜನೇಯ ಸ್ವಾಮಿಯ ದೇಗುಲದ ಮುಖ್ಯದ್ವಾರ ಕೈಬೀಸಿ ಕರೆಯುತ್ತದೆ.

ಭಕ್ತರೇ ಇಲ್ಲಿ ಅರ್ಚಕರು!
-ಈ ದೇಗುಲಕ್ಕೆ ಯಾರೂ ಅರ್ಚಕರಿರುವುದಿಲ್ಲ. ಈ ದೇಗುಲಕ್ಕೆ ಬರುವ ಭಕ್ತರು ಸ್ವತಃ ತಾವೇ ತಮ್ಮ ಕೈಯ್ನಾರೆ ಹನುಮಪ್ಪನಿಗೆ ಪೂಜೆ, ಮಂಗಳಾರತಿ ಸಲ್ಲಿಸಿ ಪಾದ ಮುಟ್ಟಿ ನಮಸ್ಕರಿಸಿ ಹೋಗುತ್ತಾರೆ.

-ದೇಗುಲದ ಆವರಣದಲ್ಲಿ ಪಂಚವೃಕ್ಷಗಳಾದ ಅರಳಿಮರ, ಅತ್ತಿಮರ (ದೇವದಾರು) ಬಿಲ್ವಪತ್ರೆ, ಬನ್ನಿಮರ ಹಾಗೂ ಬೇವಿನ ಮರಗಳಿದ್ದು, “ಪಂಚವೃಕ್ಷ ಹನುಮ’ ಎಂಬ ಹೆಸರೂ ಈತನಿಗಿದೆ.

-ದೇವಸ್ಥಾನಕ್ಕೆ ಹೊಂದಿಕೊಂಡಂತೆಯೇ ಮಸೀದಿಯೂ ಇದ್ದು, ಮತೀಯ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

* ಪ್ರಕಾಶ್‌ ಕೆ. ನಾಡಿಗ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next