ಅಳ್ನಾವರ: ಇಲ್ಲಿನ ನೆಹರು ನಗರ ಬಡಾವಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹನುಮಾನ ದೇವಸ್ಥಾನ ಉದ್ಘಾಟನೆಗೆ ಸಜ್ಜಾಗಿದ್ದು, ಏ.15 ರಿಂದ 17ರವರೆಗೆ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಹೋಮ-ಹವನ, ದಾನಿಗಳ ಸನ್ಮಾನ ಮುಂತಾದ ಕಾಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
15 ರಂದು ಬೆಳಿಗ್ಗೆ 9 ಗಂಟೆಗೆ ಪೂಜಾ, ವಾಸ್ತು ಶಾಂತಿ ನಂತರ 10 ಗಂಟೆಗೆ ಕುಂಭ ಮೇಳದೊಂದಿಗೆ ದತ್ತಾತ್ರೇಯ, ನಾಗದೇವತಾ, ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ದೇಣಿಗೆ ಕೊಟ್ಟ ಮಹನೀಯರಿಗೆ, ಗುರು ಹಿರಿಯರ ಸನ್ಮಾನ, ರಾತ್ರಿ 10 ಗಂಟೆಗೆ ಬೈಲಹೊಂಗಲದ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾ ಸ್ವಾಮೀಜಿ ಅವರಿಂದ ಪ್ರವಚನ ಹಾಗೂ ಭಜನೆ ಕಾರ್ಯಕ್ರಮ ಇದೆ.
16ರಂದು ಬೆಳಿಗ್ಗೆ 3 ಗಂಟೆಗೆ ಹೋಮ, ಹವನದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಹನುಮಾನ ದೇವರ ಅನಾವರಣ, 6 ಗಂಟೆಗೆ ಸುಮಂಗಲೆಯರಿಂದ ತೊಟ್ಟಿಲು ಸೇವೆ, 7 ಗಂಟೆಗೆ ಹೋಮ, ಹವನ, ಪೂಜೆ ಆರಂಭ, 9 ಗಂಟೆಗೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನಮಠದ ಭವಾನಿ ದತ್ತ ಪೀಠದ ಮಂಜುನಾಥ ಭಾರತಿ ಸ್ವಾಮೀಜಿ ದೇವಸ್ಥಾನದ ಉದ್ಘಾಟಿಸಲಿದ್ದು, ಬೈಲಹೊಂಗಲದ ಪ್ರಭು ನೀಲಕಂಠ ಮಹಾಸ್ವಾಮೀಜಿ ಕಳಸಾರೋಹಣ ನೆರವೇರಿಸುವರು. 11 ಗಂಟೆಗೆ ಪೂಜ್ಯರ ಆಶೀರ್ವಚನ ಹಾಗೂ ಸನ್ಮಾನ, ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಹಾಪ್ರಸಾದ ವ್ಯವಸ್ಥೆ, ಸಂಜೆ 4 ಗಂಟೆಗೆ ಆಂಜನೇಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಹಾಗೂ ಸಂಜೆ 6 ಗಂಟೆಗೆ ಸನ್ಮಾನ ನಡೆಯಲಿದೆ.
17 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹನುಮಾನ ಚಾಲೀಸ್ ಪಠಣ, ಭಗವದ್ಗೀತಾ ಶ್ಲೋಕ ಪಠಣ, ರಾಮಾಯಣ ನಾಟಕ, ಭರತ ನಾಟ್ಯ, ಭಕ್ತಿ ಗೀತೆ, ಭಕ್ತಿ ಪ್ರದಾನ ಗುಂಪು ನೃತ್ಯ ನಂತರ ಹಳಿಯಾಳದ ಹೊಂಗಿರಣ ಗೊಂಬೆ ಕಲಾ ತಂಡದವರ ಗೊಂಬೆ ಪ್ರದರ್ಶನ ಇದೆ ಎಂದು ಸಮಿತಿ ತಿಳಿಸಿದೆ.