ಜಾರ್ಖಂಡ್: ಜಾರ್ಖಂಡ್‌ನ ಧನ್‌ಬಾದ್ ನಗರದಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲಿನ ಜನರಿಂದ ಸರ್ಕಾರಿ ಭೂಮಿ ಅತಿಕ್ರಮಣ ಮಾಡಲಾಗಿದೆ ಎಂದು ಭಾರತೀಯ ರೈಲ್ವೇಯು ಹನುಮಾನ್ ದೇಗುಲಕ್ಕೆ ನೋಟಿಸ್ ಕಳುಹಿಸಿದೆ.
ಹನುಮಾನ್ ದೇವಸ್ಥಾನವನ್ನು ತೆಗೆದು, ಖಾಲಿ ಇರುವ ಜಾಗವನ್ನು 10 ದಿನಗಳಲ್ಲಿ ರೈಲ್ವೆ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಧನ್‌ಬಾದ್ ನಗರದ ಪಶ್ಚಿಮ ಅಣೆಕಟ್ಟಿನ ಬಳಿ ಇರುವ ದೇವಸ್ಥಾನದ ಗೋಡೆಗೆ ಈ ಸೂಚನೆಯನ್ನು ಅಂಟಿಸಲಾಗಿದೆ.
ಹನುಮಾನ್ ದೇವರನ್ನು ಸೂಚನೆ ನೀಡಿದ್ದು, ನೀವು ಅಕ್ರಮವಾಗಿ ರೈಲ್ವೆ ಭೂಮಿಯನ್ನು ವಶಪಡಿಸಿಕೊಂಡಿದ್ದೀರಿ ಎಂದು ನೋಟಿಸ್ ನ ಲ್ಲಿ ತಿಳಿಸಲಾಗಿದೆ. ಇದು ಕಾನೂನು ಪ್ರಕಾರ ಅಪರಾಧ. ಈ ಸ್ಥಳವನ್ನು 10 ದಿನಗಳಲ್ಲಿ ತೆರವು ಮಾಡದಿದ್ದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ದೇವಸ್ಥಾನದ ಬಳಿ ಇರುವ ಖಾಟಿಕ್ ಬಸ್ತಿಯಲ್ಲಿ ವಾಸಿಸುವ ಸುಮಾರು ಐದಾರು ಕುಟುಂಬದ ಜನರಿಗೆ ಅತಿಕ್ರಮಣದ ವಿರುದ್ಧ ರೈಲ್ವೆ ಇಲಾಖೆ ನೋಟಿಸ್ ಕಳುಹಿಸಿದೆ. ಈ ಜನರು 1921ರಿಂದ ಇಲ್ಲಿ ವಾಸವಿದ್ದು, ಹಣ್ಣು, ಮೀನು, ತರಕಾರಿಯಂತಹ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ರೈಲ್ವೆ ಇಲಾಖೆಯು ಅಕ್ರಮ ನಿವೇಶನದ ಎಲ್ಲಾ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ತಿಳಿಸಿದೆ.
ರೈಲ್ವೆ ಇಲಾಖೆಯ ಸೂಚನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ದೇವಸ್ಥಾನದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ರೈಲ್ವೆ ಇಲಾಖೆಯ ನಿರ್ಧಾರಗಳನ್ನು ವಿರೋಧಿಸಿ ಪ್ರತಿಭಟಿಸಿದ್ದರು.