ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ 12ನೇ ವರ್ಷದ ಹನುಮ ಜಯಂತಿ ಉತ್ಸವವು ಶನಿವಾರ ಶ್ರದ್ಧಾಭಕ್ತಿಯಿಂದ ಜರಗಿತು. ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮಗಳು ಜರಗಿದವು. ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ವಸಂತ ಮಂಟಪದಲ್ಲಿ ನಾಲ್ಕು
ಪ್ರಸಿದ್ಧ ಮಹಿಳಾ ಭಜನ ತಂಡ ಗಳಿಂದ ಭಜನೆ, ಮಧ್ಯಾಹ್ನ 12 ರಿಂದ ರಾಜಾಂಗಣದಲ್ಲಿ ಮಂಗಳೂ ರಿನ ಬಂಟರ ಯಾನೆ ನಾಡವರ ಮಾತೃಸಂಘದಿಂದ ಭಜನೆ, ಚಂದ್ರ ಶಾಲೆಯಲ್ಲಿ ಚಂದ್ರಶೇಖರ್ ಮತ್ತು ಬಳಗ ಅವರಿಂದ ಸ್ಯಾಕ್ಸೋಫೋನ್ ಮತ್ತು ಕೊಳಲುವಾದನ ನಡೆಯಿತು.
ಮಧ್ಯಾಹ್ನ ಮುಖ್ಯಪ್ರಾಣ ದೇವರಿಗೆ ಅತಿ ಪ್ರಿಯವಾದ ಹಾಲು ಪಾಯಸ ಸಹಿತವಾಗಿ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಿತು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಡಗುಮಳಿಗೆಯ ಪಾಕಶಾಲೆಯಲ್ಲಿ ಪಲ್ಲಪೂಜೆಯನ್ನು ನೆರವೇರಿಸಿ, ಆ ಬಳಿಕ ರಾಜಾಂಗಣಕ್ಕೆ ತೆರಳಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಸುಮಾರು 28 ಸಾವಿರ ಮಂದಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ಆಕರ್ಷಕ ಚೆಂಡೆ, ಸುಡುಮದ್ದು ಪ್ರದರ್ಶನದೊಂದಿಗೆ ಬ್ರಹ್ಮರಥ, ಸ್ವರ್ಣರಥ, ನವರತ್ನರಥ ಸೇವೆ ಜರಗಿತು.
ಸೇವಾ ಸಮಿತಿಯ ಪ್ರಮುಖರಾದ ಭುವನೇಂದ್ರ ಕಿದಿಯೂರು, ಯುವರಾಜ್ ಸಾಲ್ಯಾನ್ ಮಸ್ಕತ್, ಹರಿಯಪ್ಪ ಕೋಟ್ಯಾನ್, ಹಿರಿಯಣ್ಣ ಟಿ. ಕಿದಿಯೂರು, ಜಿತೇಶ್ ಕಿದಿಯೂರು, ಹೀರಾ ಬಿ. ಕಿದಿಯೂರು, ಗೋಪಾಲ ಕುಂದರ್, ರಮೇಶ್ ಕೋಟ್ಯಾನ್, ಎಂ.ಎಸ್. ಭಟ್, ರಮೇಶ್ ಕಿದಿ ಯೂರು, ಶೇಖರ್ ಎನ್. ಕೋಟ್ಯಾನ್, ಸೋಮನಾಥ್ ಕಾಂಚನ್, ಸುಧಾಕರ್ ಮೆಂಡನ್, ಪಾಂಡುರಂಗ ಕರ್ಕೇರ, ರಾಧಾಕೃಷ್ಣ ಮೆಂಡನ್, ಬಾಲಕೃಷ್ಣ ಮೆಂಡನ್, ಸಿ.ಸಿ. ಕರ್ಕೇರ, ವಾಸುದೇವ ಸಾಲ್ಯಾನ್, ವಿಲಾಸ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.