Advertisement

ಹನುಮ ಧಾಮ, ಯಲಗೂರು

08:04 PM Nov 15, 2019 | Lakshmi GovindaRaju |

ಉತ್ತರ ಭಾರತದಲ್ಲಿ ಗಂಗಾನದಿಗೆ ಇರುವ ಪ್ರಾಮುಖ್ಯತೆ ದಕ್ಷಿಣ ಭಾರತದಲ್ಲಿ ಕೃಷ್ಣಾ ನದಿಗೂ ಇದೆ. ಗಂಗಾ ತೀರದಲ್ಲಿ ವಾರಾಣಸಿ, ತೀರ್ಥರಾಜ, ಪ್ರಯಾಗ ಮುಂತಾದವು ತೀರ್ಥಯಾತ್ರಾ ಸ್ಥಳಗಳಿರುವಂತೆ, ಕೃಷ್ಣಾ ತೀರದಲ್ಲಿಯೂ ಗೋಷ್ಟದ ತೀರ್ಥ, ಸಿದ್ಧ ತೀರ್ಥ, ಸೀತಾ ತೀರ್ಥ, ಕೃಷ್ಣ ತೀರ್ಥ, ರಾಮ ತೀರ್ಥ, ಆಂಜನೇಯ ತೀರ್ಥ- ಮುಂತಾದ ತೀರ್ಥಧಾಮಗಳಿವೆ. ಶ್ರೀ ಯಲಗೂರು ಕ್ಷೇತ್ರವು ಅಂಜನೇಯ ತೀರ್ಥ ಸನಿಹದ ಭಕ್ತಿ ಆಕರ್ಷಣೆ.

Advertisement

ಏಳು ಊರುಗಳ ಗುಂಪೇ ಏಳೂರು. ಅದೇ ಮುಂದೆ “ಯಲಗೂರು’ ಎಂದು ಬದಲಾಯಿತೆಂದು ನಂಬಿಕೆ. ಈ ಏಳು ಊರುಗಳ ಏಕಮೇವ ಆರಾಧ್ಯದೇವತೆಯಾದವನು ಏಳೂರೇಶ. ಅವನೇ ಯಲಗೂರೇಶ. ಕೃಷ್ಣಾ ತೀರದಲ್ಲಿರುವ ನಾಗಸಂಪಿಗೆ, ಚಂದ್ರಗಿರಿ, ಅಳಲದಿನ್ನಿ, ಯಲಗೂರು, ಕಾಶಿನಕುಂಟೆ, ಬೂದಿಹಾಳ ಹಾಗೂ ಮಸೂದಿ- ಈ ಏಳು ಊರುಗಳಿಗೆ ಆರಾಧ್ಯ ದೈವ ಯಲಗೂರಪ್ಪ. ಸಾಮಾನ್ಯವಾಗಿ ಊರಿಗೊಬ್ಬ ಹನುಮಪ್ಪನಿರುವುದು ವಾಡಿಕೆ.

ಆದರೆ, ಈ ಏಳು ಗ್ರಾಮಗಳನ್ನು ಕಂಡಾಗ, ಯಲಗೂರಿನಲ್ಲಿ ಮಾತ್ರ ಹನುಮಪ್ಪನ ದೇಗುಲವಿದೆ. ಉಳಿದ 6 ಗ್ರಾಮಗಳಲ್ಲಿ ಹನುಮಪ್ಪನ ಗುಡಿ ಇಲ್ಲದಿರುವುದು ವಿಶೇಷ. ಸೀತಾಪಹರಣದ ಸಮಯದಲ್ಲಿ ಕೆಲವು ದಿನಗಳ ಕಾಲ ಈ ಭಾಗದಲ್ಲಿ ಶ್ರೀರಾಮ- ಲಕ್ಷ್ಮಣರು ಇಲ್ಲಿ ತಂಗಿದ್ದರು ಎನ್ನುವುದು ಸ್ಥಳ ಮಹಿಮೆ. ಗರ್ಭಗುಡಿ ಮಂಭಾಗದ ರಂಗಮಂಟಪದಲ್ಲಿನ ಕಲ್ಲಿನ ಕಂಬಗಳ ಕೆತ್ತನೆಗಳು ಚಾಲುಕ್ಯ ಶೈಲಿಯನ್ನು ಹೋಲುತ್ತವೆ.

ರಂಗಮಂಟಪದ ಒಂದು ಕಂಬದಲ್ಲಿ ಮಾರುತಿಯ ಚಿಕ್ಕದಾದ ಮನೋಹರ ಮೂರ್ತಿ ಇದೆ. ರಂಗ ಮಂಟಪದಲ್ಲಿ ಈಶ್ವರಲಿಂಗ ಹಾಗೂ ಭವ್ಯವಾದ ಗಣಪತಿ ವಿಗ್ರಹಗಳಿವೆ. ದೇಗುಲದ ಪ್ರಾಕಾರದಲ್ಲಿ ಶ್ರೀ ಸೂರ್ಯ ನಾರಾಯಣದೇವರ ಚಿಕ್ಕದೊಂದು ಗುಡಿ ಇದೆ. ಹಿಂಭಾಗದ ಮೂಲೆಯಲ್ಲಿ ಶ್ರೀ ತುಳಿಸಿ ವೃಂದಾವನವಿದೆ. ದೇಗುಲದ ಗೋಡೆಗಳನ್ನು ಪ್ರಾಣದೇವರ “ಹನುಮ- ಭೀಮ- ಮಧ್ವ ‘ ಎಂಬ 3 ಅವತಾರಗಳ ಸುಂದರ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.

ಗರ್ಭಗುಡಿಯಲ್ಲಿ ಯಲಗೂರೇಶ ಹನುಮನ ವಿಗ್ರಹವು 7 ಅಡಿ ಎತ್ತರವಿದೆ. ಎಡಗೈಯಲ್ಲಿ ಸೌಗಂಧಿಕಾ ಪುಷ್ಟವಿದ್ದು, ಎಡಪಾದವು ರಾಕ್ಷಸನನ್ನು ತುಳಿಯುತ್ತಿರುವುದನ್ನು ಇಲ್ಲಿ ನೋಡಬಹುದು. ದೊಡ್ಡದಾದ ಕಣ್ಣುಗಳಿಂದ ಗೋಚರಿಸುವ ಹನುಮ ದೇವರ ವಿಗ್ರಹವು ಸುಂದರವಾಗಿದ್ದು, ಶಾಂತ ಹಾಗೂ ಪ್ರಸನ್ನ ವದನನಾಗಿ ಸೆಳೆಯುತ್ತಾನೆ. ಹನುಮದೇವರ ಉದ್ದವಾದ ಬಾಲವು ತಲೆಯ ಮೇಲಿಂದ ಸಾಗಿ, ಎಡಗಡೆಯ ಪಾದದ ಸಮೀಪ ತಲುಪುತ್ತದೆ.

Advertisement

ಆರಾಧನೆಯ ವಿಶೇಷ: ಕೃಷ್ಣಾ ನದಿಯಲ್ಲಿ ಮಿಂದು, ಕೃಷ್ಣೆಯ ಪವಿತ್ರ ಜಲವನ್ನು ತಂದು ಶ್ರೀ ಯಲಗೂರೇಶನ ಪೂಜೆ ಮಾಡುವ ಪರಂಪರೆಯನ್ನು ಅರ್ಚಕರು ಈಗಲೂ ಅನುಸರಿಸುತ್ತಿದ್ದಾರೆ. ನಿತ್ಯವೂ ಮಹಾಭಿಷೇಕ ನಡೆಯುತ್ತದೆ. ಶನಿವಾರದಂದು ವಿಶೇಷ ಪೂಜೆ, ಕುಂಕುಮ ಪೂಜೆ, ಎಲೆ ಪೂಜೆಗಳು ನೆರವೇರುತ್ತವೆ. ಶ್ರಾವಣ, ಕಾರ್ತಿಕ ಮಾಸ, ರಾಮ ನವಮಿ, ವಿಜಯದಶಮಿಯಲ್ಲಿ ದೂರದೂರದ ಸ್ಥಳದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ದರುಶನಕೆ ದಾರಿ…: ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಣ್ಣ ಹಳ್ಳಿ, ಯಲಗೂರು. ಆಲಮಟ್ಟಿ ಅಣೆಕಟ್ಟೆಯಿಂದ ಇಲ್ಲಿಗೆ ಕೇವಲ 5 ಕಿ.ಮೀ. ದೂರ.

* ಸುರೇಶ ಗುದಗನ‌ವರ

Advertisement

Udayavani is now on Telegram. Click here to join our channel and stay updated with the latest news.

Next