ಹುಣಸೂರು: ಹುಣಸೂರಿನಲ್ಲಿ ನಡೆಯಲಿರುವ ಹನುಮ ಜಯಂತಿ ಶೋಭಾಯಾತ್ರೆ ಅಂಗವಾಗಿ ಪೊಲೀಸರು ಅತ್ಯಂತ ಮುನ್ನೆಚ್ಚರಿಕಾ ಕ್ರಮವಹಿಸಿದ್ದು, ಮಂಗಳವಾರ ಸಂಜೆ ದಕ್ಷಿಣ ವಲಯ ಐಜಿಪಿ. ಪ್ರವೀಣ್ ಮಧುಕರ್ ಪವಾರ್, ಎಸ್.ಪಿ. ನೇತೃತ್ವದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿದರು.
ನಗರದ ತಾಲೂಕು ಕ್ರೀಡಾಂಗಣದಿಂದ ಹೊರಟ ಪೊಲೀಸರ ಪಥ ಸಂಚಲನವು ನಗರದ ಜೆ.ಎಲ್.ಬಿ. ರಸ್ತೆ, ಗಣೇಶನಗುಡಿ ಬೀದಿ, ಬಸ್ ನಿಲ್ದಾಣದ ರಸ್ತೆ, ಗೋಕುಲ ರಸ್ತೆ, ಶಬ್ಬೀರ್ ನಗರ, ಕಲ್ಪತರು ವೃತ್ತದ ಮೂಲಕ ಡಿವೈಎಸ್‌ಪಿ ಕಛೇರಿಯಲ್ಲಿ ಮುಕ್ತಾಯಗೊಳಿಸಿದರು. ಪಥ ಸಂಚಲನದಲ್ಲಿ ಡಿವೈಎಸ್ಪಿಗಳಾದ ರವಿಪ್ರಸಾದ್, ಗಜೇಂದ್ರಪ್ರಸಾದ್ ಸೇರಿದಂತೆ ಅನೇಕ ಅಧಿಕಾರಿಗಳು ಬಾಗವಹಿಸಿದ್ದರು.
ನಗರದೆಲ್ಲೆಡೆ ಪೋಲಿಸರು ಬಿಗಿ ಬಂದೋಬಸ್ತು ಏರ್ಪಡಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಿದ್ದಾರೆ. ಎಂಟು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದ್ದು, ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ., ಎಸ್.ಪಿ.ಚೇತನ್ , ಅಡಿಷನಲ್ ಎಸ್.ಪಿ.ನಂದಿನಿ ರವರು ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಕಣ್ಗಾವಲು: ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯ ಸುದ್ದಿ ಹರಡುವವರ ವಿರುದ್ದ ಕಣ್ಗಾವಲಿಡಲು ಮೊಬೈಲ್ ಕಮಾಂಡ್ ವಾಹನ ಬಂದಿದ್ದು, ಐಜಿಪಿ,ಎಸ್.ಪಿ ಹಾಗೂ ಅಡಿಷನಲ್ ಎಸ್.ಪಿ.ಯವರು ಪರಿಶೀಲನೆ ನಡೆಸಿದರು.
ಮೆರವಣಿಗೆ ಮಾರ್ಗ: ರಂಗನಾಥಬಡಾವಣೆ,ಶಬರಿಪ್ರಸಾದ್ ಹೋಟೆಲ್, ಸಂವಿದಾನ ವೃತ್ತ, ಕೋಟೆ ವೃತ್ತ, ಜೆ.ಎಲ್.ಬಿ.ರಸ್ತೆ, ಅಕ್ಷಯಭಂಡಾರ್ ಸರ್ಕಲ್, ಹೊಸ ಬಸಿ ನಿಲ್ದಾಣದ ರಸ್ತೆ, ಕಲ್ಪತರು ವೃತ್ತದ ಮೂಲಕ ಆಂಜನೇಯಸ್ವಾಮಿ ದೇವಾಲಯ ತಲುಪಲು ಅನುಮತಿ ನೀಡಲಾಗಿದೆ ಎಂದು ಡಿವೈ.ಎಸ್.ಪಿ.ರವಿಪ್ರಸಾದ್ ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ಇಂದು ರಜೆ: ಹನುಮ ಜಯಂತಿ ಶೋಭಾಯಾತ್ರೆಯ ಪ್ರಯುಕ್ತ ಹುಣಸೂರು ನಗರದ ಶಾಲಾ-ಕಾಲೇಜುಗಳಿಗೆ ಡಿ.೭ರ ಬುಧವಾರದಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರರವರು ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ: ಸೋದರ ಸಂಬಂಧಿಯನ್ನೇ ಹತ್ಯೆಗೈದು ರುಂಡದೊಂದಿಗೆ ಸೆಲ್ಫಿ ತೆಗೆದ ಯುವಕ!