Advertisement

ಹನ್ಸಿಕಾಳ ಮೂಕವೇದನೆ…

07:30 AM Apr 13, 2018 | |

ರಸ್ತೆಯಲ್ಲಿ ವ್ಯಕ್ತಿಯೊಬ್ಬ, ವೇಶ್ಯೆಯನ್ನು ಮನ ಬಂದಂತೆ ಥಳಿಸುತ್ತಿರುತ್ತಾನೆ. ಅದನ್ನು ನೋಡಿದ ಕೂಡಲೇ, ವೇಶ್ಯೆಯರ ಬದುಕು, ಬವಣೆ ಕುರಿತು ಯಾಕೆ ಒಂದು ಚಿತ್ರ ಮಾಡಬಾರದು ಅಂತೆನಿಸಿ, ಒಂದು ಕಥೆ ಹೆಣೆದು, ಅದಕ್ಕೆ “ಹನ್ಸಿಕಾ’ ಎಂದು ಹೆಸರಿಟ್ಟು, ಕೇವಲ ಹದಿನೈದು ನಿಮಿಷದ ಕಿರುಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ ನಿರ್ದೇಶಕ ಡಾ. ಪ್ರಶಾಂತ್‌ ಜಿ. ಮಾಲೂರು. ಇವರಿಗಿದು ಮೊದಲ
ಅನುಭವ. ಕಥೆ, ಚಿತ್ರಕಥೆ‌ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿರುವುದಲ್ಲದೆ, ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಆಷ್ಟೇ
ಅಲ್ಲ, ಭರತ್‌ ಜೈನ್‌ ಅವರ ಜತೆ ಸೇರಿ ನಿರ್ಮಾಣವನ್ನೂ ಮಾಡಿದ್ದಾರೆ.

Advertisement

ಇತ್ತೀಚೆಗೆ ತಮ್ಮ ಚೊಚ್ಚಲ “ಹನ್ಸಿಕ’ ಕಿರುಚಿತ್ರದ ಪ್ರದರ್ಶನ ಏರ್ಪಡಿಸಿದ್ದರು ನಿರ್ದೇಶಕ ಡಾ. ಪ್ರಶಾಂತ್‌. ಅವರು ಒಂದು ದಿನ ನಡೆದು ಹೋಗುವಾಗ, ರಸ್ತೆ ಬದಿಯಲ್ಲಿ ಒಬ್ಬ ವ್ಯಕ್ತಿ, ವೇಶ್ಯೆಯೊಬ್ಬರನ್ನು ಥಳಿಸುತ್ತಿದ್ದನಂತೆ. ಆ ದೃಶ್ಯ ಅವರನ್ನು ಬಹಳಷ್ಟು ಕಾಡಿದೆ. ಆಗ ಅವರಿಗೆ ತಕ್ಷಣ ಹೊಳೆದದ್ದು, ವೇಶ್ಯೆಯರ ಕುರಿತು ಒಂದು ಕಿರುಚಿತ್ರವನ್ನೇಕೆ ಮಾಡಬಾರದು ಎಂಬುದು. ಕೂಡಲೇ ವೇಶ್ಯೆಯರ ಕುರಿತು ಒಂದಷ್ಟು ಮಾಹಿತಿ ಕಲೆ ಹಾಕಿ, ಸುಮಾರು 40ಕ್ಕೂ ಹೆಚ್ಚು ವೇಶ್ಯೆಯರನ್ನು ಭೇಟಿ ಮಾಡಿ, ಅವರೊಂದಿಗೆ ಚರ್ಚಿಸಿ, ಕೆಲ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ವೇಶ್ಯೆಯರು ಆ ಮಾತುಕತೆಯಲ್ಲಿ ಆಡಿದಂತಹ ಕೆಲ ಮಾತುಗಳನ್ನೇ ಚಿತ್ರದಲ್ಲೂ ಡೈಲಾಗ್‌ ರೂಪದಲ್ಲಿ ಅಳವಡಿಸಿದ್ದಾರಂತೆ ಪ್ರಶಾಂತ್‌. 

ಇನ್ನು, ಕಿರುಚಿತ್ರಕ್ಕೆ ಕಲಾವಿದರ ಆಯ್ಕೆಗೆ ಮುಂದಾದಾಗ, ಸುಮಾರು 80 ಜನರನ್ನು ಆಡಿಷನ್‌ ನಡೆಸಿದ್ದಾರೆ. ಆಗ, ಅವರೆಲ್ಲರೂ ಹೇಳಿದ್ದು ಒಂದೇ ಮಾತು. ಮೊದಲ ಸಲವೇ ವೇಶ್ಯೆ ಪಾತ್ರ ಮಾಡುವುದಿಲ್ಲ ಎಂಬುದು. ಕೊನೆಗೆ ನಿರ್ದೇಶಕರು, ಫೇಸ್‌ ಬುಕ್‌ನಲ್ಲಿ ಸೀಮಾ ಮಂಜಪ್ಪ ಎಂಬುವವರನ್ನು ಪರಿಚಯಿಸಿಕೊಂಡು, ಅವರನ್ನು ಒಪ್ಪಿಸಿ, ಕಿರುಚಿತ್ರ ಮಾಡಿದ್ದಾರೆ. ಇಲ್ಲಿ ಭಾವನಾತ್ಮಕ
ಸಂಬಂಧಗಳ ಜೊತೆಗೆ ಭಾವುಕತೆ ಹೆಚ್ಚಿಸುವ ಅಂಶಗಳಿವೆ. ಕಿರುಚಿತ್ರದಲ್ಲಿ ನಿರ್ದೇಶಕನೊಬ್ಬ ವೇಶ್ಯೆಯನ್ನು ಭೇಟಿ ಮಾಡಿ, ಒಂದು ಚಿತ್ರ ಮಾಡುವ ಕುರಿತು ಚರ್ಚಿಸಿದಾಗ, ಇಬ್ಬರ ನಡುವೆ ಒಂದಷ್ಟು ಮಾತುಕತೆ ನಡೆಯುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಆಕೆ ನಟಿಸಲು ಒಪ್ಪುವುದಿಲ್ಲ. ಕೊನೆಗೆ, ಮುಂದಿನ ದಿನಗಳಲ್ಲಿ ಎಂದಾದರೂ, ಭೇಟಿಯಾದಾಗ, ನಾನು ನಿಮ್ಮನ್ನು ಸಿನಿಮಾಗೆ ಆಯ್ಕೆ ಮಾಡಿ, ಕ್ಯಾಮೆರಾ ಮುಂದೆ ನಿಲ್ಲಿಸುತ್ತೇನೆ ಅಂತ ಹೇಳುವುದರೊಂದಿಗೆ ಚಿತ್ರ ಅಂತ್ಯವಾಗಲಿದೆ. ಅವರಿಬ್ಬರ ನಡುವಿನ ಸಂಭಾಷಣೆ ಮತ್ತು ಆಕೆಯ ಬದುಕಿನ ಕರಾಳ ಚಿತ್ರಣ ಕಿರುಚಿತ್ರದ ಹೈಲೈಟ್‌ ಎನ್ನುತ್ತಾರೆ ನಿರ್ದೇಶಕರು.

ಅಂದು ಕಿರುಚಿತ್ರ ವೀಕ್ಷಿಸಿದ ಉದ್ಯಮಿ ಮಹೇಂದ್ರ ಮನ್ನೋತ್‌, ಎನ್‌ಜಿಓ ಸಂಸ್ಥೆಯ ಪೂರ್ಣಿಮಾ ಇತರರು ಕಿರುಚಿತ್ರದ ಪ್ರಯತ್ನ 
ಮೆಚ್ಚಿಕೊಂಡರು.
 

Advertisement

Udayavani is now on Telegram. Click here to join our channel and stay updated with the latest news.

Next