ಹನೂರು (ಚಾಮರಾಜನಗರ): ಪಕ್ಷ ರಾಜಕೀಯಕ್ಕಿಂತ ಕುಟುಂಬ ರಾಜಕಾರಣದಿಂದಲೇ ಹೆಚ್ಚಿನ ಪ್ರಖ್ಯಾತಿ ಪಡೆದಿದ್ದ ಹನೂರು ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕ್ಷೇತ್ರದಲ್ಲಿನ 3ನೇ ರಾಜಕೀಯ ಶಕ್ತಿಯನ್ನು ಹತ್ತಿಕ್ಕುವ ಪರಿಸ್ಥಿತಿ ಹಿನ್ನೆಲೆ ಬದ್ಧವೈರಿಗಳಂತಿದ್ದ ಕಾಂಗ್ರೆಸ್- ಬಿಜೆಪಿ ಮೈತ್ರಿಯಾಗಿ ಪಟ್ಟಣ ಪಂಚಾಯಿತಿಯ ಚುಕ್ಕಾಣಿ ಹಿಡಿಯಲು ಸಿದ್ಧವಾಗಿವೆ.
ಹನೂರಿನ ರಾಜಕೀಯ ಹಿನ್ನೆಲೆ: ಹನೂರು ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಮಾಜಿ ಸಚಿವದ್ವಯರಾದ ದಿ||ರಾಜುಗೌಡ ಮತ್ತು ದಿ||ನಾಗಪ್ಪ ಅವರ ನಡುವೆ ಮತ್ತು ಅವರು ಕಾಲವಾದ ಬಳಿಕ ಹಾಲಿ ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ನಡುವೆಯೇ ಜಿದ್ದಾಜಿದ್ದಿ. ಹನೂರು ಗ್ರಾಮ ಪಂಚಾಯಿತಿ ಇದ್ದಾಗಿನಿಂದಲೂ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಅಧಿಕಾರ ನಡೆಸಿಲ್ಲ. ಆದರೆ 2018ರ ವಿಧಾನಸಭಾ ಚುನಾವಣೆ ವೇಳೆ ಕ್ಷೇತ್ರದಲ್ಲಿ 3ನೇ ಶಕ್ತಿಯಾಗಿ ಉದಯಿಸಿರುವ ಜೆಡಿಎಸ್ನ ಮಂಜುನಾಥ್ ಅವರ ಅಲೆಯಿಂದಾಗಿ 2019ರಲ್ಲಿ ಜರುಗಿದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹಾಲಿ ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ತೀವ್ರ ಹಿನ್ನೆಡೆಯಾಯಿತು. ಇದೀಗ ಹನೂರು ಪಟ್ಟಣ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದ್ದಲ್ಲಿ 3 ಪಕ್ಷಗಳೂ ಮೈತ್ರಿಯ ಮೊರೆ ಹೋಗಬೇಕಿದೆ.
ಪಕ್ಷಗಳ ಬಲಾಬಲ: ಹನೂರು ಪಟ್ಟಣ ಪಂಚಾಯಿತಿಯು 13 ಸದಸ್ಯ ಬಲವನ್ನು ಹೊಂದಿದ್ದು ಬಹುಮತಕ್ಕಾಗಿ 7 ಸ್ಥಾನ ಗೆಲ್ಲಬೇಕಿದೆ. ಆದರೆ ಚುನಾವಣೆಯಲ್ಲಿ ಜೆಡಿಎಸ್-6, ಕಾಂಗ್ರೆಸ್-4 ಮತ್ತು ಬಿಜೆಪಿ-3 ಸ್ಥಾನಗಳನ್ನು ಪಡೆದಿದ್ದವು. ಆದರೆ ಬಿಜೆಪಿಯ ಓರ್ವ ಸದಸ್ಯ ಕೋವಿಡ್ ಗೆ ತುತ್ತಾಗಿ ಅಸುನೀಗಿರುವ ಹಿನ್ನೆಲೆ ಸಂಖ್ಯಾಬಲ 12ಕ್ಕೆ ಕುಸಿದಿದೆ. ಆದರೂ ಬಹುಮತಕ್ಕೆ 7 ಸ್ಥಾನಗಳೇ ಅವಶ್ಯಕವಾಗಿವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಪಕ್ಷಕ್ಕೂ ಸಂಖ್ಯಾಬಲವಿಲದ್ಲ ಹಿನ್ನೆಲೆ ಮೈತ್ರಿಯು ಅನಿವಾರ್ಯವಾಗಿದೆ.
ಕಾಂಗ್ರೆಸ್ -ಬಿಜೆಪಿ ಮೈತ್ರಿ ಮತ್ತು ಜೆಡಿಎಸ್ ನಡುವೆ ಪೈಪೋಟಿ: ಬೆಂಗಳೂರಿನಿಂದ ವಲಸೆ ಬಂದು ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಾಯಿಸಿರುವ ಜೆಡಿಎಸ್ ನ ಮಂಜುನಾಥ್ ಅವರನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ – ಬಿಜೆಪಿ ಮೈತ್ರಿಗೆ ಸರ್ವಸನ್ನದ್ಧವಾಗಿವೆ. ಕಾಂಗ್ರೆಸ್ ನ 4, ಬಿಜೆಪಿಯ 2 ಸದಸ್ಯರ ಜೊತೆ ಶಾಸಕರ 1ಮತ ಮತ್ತು ಸಂಸದರ 1 ಮತ ಪಡೆದು ಮತಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಅತಿ ಹೆಚ್ಚು ಸ್ಥಾನಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಜೆಡಿಎಸ್ ಗೆ ಮುಖಭಂಗ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆಯಲ್ಲಿವೆ. ಈ ಹಿನ್ನೆಲೆ ಸಂಸದರಾದ ಶ್ರೀನಿವಾಸ್ ಪ್ರಸಾದ್, ಗುಂಡ್ಲುಪೇಟೆ ಶಾಸಕ ನಿರಂಜನ್ಕುಮಾರ್ ಮತ್ತು ಶಾಸಕ ನರೇಂದ್ರ ರಾಜುಗೌಡ ಅವರ ನಡುವೆ ಒಂದು ಸುತ್ತಿನ ಮಾತುಕತೆಯೂ ಮುಗಿದಿದ್ದು ಬಿಜೆಪಿಗೆ ಅಧ್ಯಕ್ಷ ಸ್ಥಾನ ಮತ್ತು ಕಾಂಗ್ರೆಸ್ ಗೆ ಉಪಾಧ್ಯಕ್ಷ ಸ್ಥಾನ ಎಂಬುವ ನಿರ್ಣಯಕ್ಕೆ ಬರಲಾಗಿದೆ ಎನ್ನಲಾಗಿದೆ.
ಅಧ್ಯಕ್ಷರಾಗಿ ಚಂದ್ರಮ್ಮ, ಉಪಾಧ್ಯಕ್ಷರಾಗಿ ಹರೀಶ್ ಕುಮಾರ್: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಕಾಂಗ್ರೆಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ 12ನೆ ವಾರ್ಡಿನ ಚಂದ್ರಮ್ಮ, ಹಿಂದುಳಿದ ವರ್ಗ ಬಿಗೆ ಮೀಸಲಿರುವ ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಕುಮಾರ್ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಒಂದೊಮ್ಮೆ ಯಾವುದಾದರೂ ವ್ಯತ್ಯಾಸವಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ ಏರುಪೇರಾಗಿ ಅಧಿಕಾರ ದೊರೆಯಬಹುದೇನೋ ಎಂಬ ಹಂಬಲದಲ್ಲಿರುವ ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡಿನ ಪವಿತ್ರಾ ಪ್ರಸನ್ನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡಿನ ಆನಂದ್ ಕುಮಾರ್ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಪ್ರವಾಸ ಹೊರಟಿರುವ ಮೈತ್ರಿ ಸದಸ್ಯರು: ಪಟ್ಟಣ ಪಂಚಾಯಿತಿಯ ಅಧಿಕಾರಕ್ಕಾಗಿ ಸದಸ್ಯರ ಕುದುರೆ ವ್ಯಾಪಾರ ನಡೆದಲ್ಲಿ ಅಧಿಕಾರ ಹಿಡಿಯವಲ್ಲಿ ಕಷ್ಟವಾಗುತ್ತದೆ ಎಂಬುದನ್ನು ಅರಿತ ಕಾಂಗ್ರೆಸ್-ಬಿಜೆಪಿ ನಾಯಕರು 2 ಪಕ್ಷಗಳ: 6 ಜನ ಸದಸ್ಯರನ್ನು ಪ್ರವಾಸಕ್ಕಾಗಿ ಅಜ್ಞಾತ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಈ 6 ಸದಸ್ಯರ ಪೈಕಿ 5 ಸದಸ್ಯರು ಸೋಮವಾರ ರಾತ್ರಿಯೇ ತೆರಳಿದ್ದು ಬಿಜೆಪಿ ಓರ್ವ ಸದಸ್ಯನನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಆ ಗುಂಪಿಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.
ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿರುವ ಚುನಾವಣೆ: ಪಟ್ಟಣ ಪಂಚಾಯಿತಿಯ ಚುನಾವಣೆಯು ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದ್ದು ಹಲವು ವೈಶಿಷ್ಠ್ಯಗಳಿಂದ ಕೂಡಿರಲಿದೆ. ಇದುವರೆಗೂ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷವೂ ಅಧಿಕಾರ ಹಿಡಿದಿರಲಿಲ್ಲ. ಗ್ರಾಮ ಪಂಚಾಯಿತಿ ಕಾಲದಿಂದಲೂ ವೀರಶೈವ ಸಮುದಾಯಕ್ಕೆ ಸೇರಿದ್ದ ಯಾರೊಬ್ಬರೂ ಅಧ್ಯಕ್ಷ ಉಪಾಧ್ಯಕ್ಷರಾಗಿರಲಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಒಂದು ಪ್ರಥಮವಾದರೆ, ವೀರಶೈವರೊಬ್ಬರು ಅಧ್ಯಕ್ಷರಾಗುವುದು ಇದೇ ಪ್ರಥಮವಾಗಲಿದೆ. ಆದುದರಿಂದ ಈ ಚುನಾವಣೆ ಹಲವು ವೈಶಿಷ್ಠ್ಯಗಳಿಗೆ ಸಾಕ್ಷಿಯಾಗಲಿದೆ.