Advertisement

ರೈತ ಬದುಕುದಾದ್ರೂ ಹ್ಯಾಂಗ್‌ ಹೇಳ್ರಿ!

10:59 AM Jan 28, 2019 | |

ವಿಜಯಪುರ: ಕಳೆದ 50 ವರ್ಷದಾಗ ಇಂಥ ಗಂಡಾಂತರದ ಭೀಕರ ಬರ ನೋಡಿಲ್ಲ, ನೂರು ಚೀಲ ಜ್ವಾಳಾ ಬೆಳಿತಿದ್ದ ಹೊಲ್ದಾಗ ಇಡೀ ಬೆಳಿ ಒಣಗಿ ನಿಂತೈತಿ. ವರ್ಷ ವರ್ಷ ಹಿಂಗ್‌ ಅದ್ರ ರೈತ ಬದುಕೂದ ಹೆಂಗ್‌ ಸಾಧ್ಯ ಆಕೈತಿ ನೀವ ನೋಡಿ, ಹೇಳ್ರಿ.

Advertisement

ಭೀಕರ ಬರದಿಂದ ತತ್ತರಿಸಿಹೋಗಿರುವ ಬಸವನಬಾಗೇವಾಡಿ ಭಾಗರ ರೈತರು ಕಣ್ಣೀರು ಹಾಕುತ್ತಿದ್ದಾರೆ. ಹಿಂಗಾರು ಆರಂಭವಾದಾಗ ಒಂಚೂರು ಒಳ್ಳೆ ಮಳಿ ಅತಂತ ಲಕ್ಷಾಂತರ ರೂ. ಖರ್ಚ ಮಾಡಿ ಜ್ವಾಳಾ ಬಿತ್ತಿದ್ದೆ. ನಮ್ಮ ಹೊಲದಾದ ಈ ವರ್ಷ ಕನಿಷ್ಠ ಏನಿಲ್ಲಂದ್ರೂ ನೂರ ಚೀಲ ಜ್ವಾಳ ಬೆಳಿತೀವಿ ಅನ್ನೋ ಭರವಸೆ ಇತ್ತು. ಆದ್ರ ಆಮ್ಯಾಲೆ ಮಳಿ ಕೈ ಕೊಟ್ಟ ನೂರ ಚೀಲ ಮಾತಿರಲಿ, ಬಿತ್ತಾಕ ಹಾಕಿದ ಮೂರು ಚೀಲ ಜ್ವಾಳಾನೂ ಕೈಗೆ ಬರಲಾರದಂಗ ಆಗೇತಿ ಎಂದು ಮುತ್ತಣ್ಣ ಕಣ್ಣೀರು ಹಾಕುತ್ತಾರೆ.

ಗುರಪ್ಪ ಪದಮಗೊಂಡ ಐದ ಎಕರೆ ಹೊಲದಾಗ ಲಕ್ಷಾಂತರ ರೂ. ಸಾಲ ಮಾಡಿ ಕಡಲಿ ಬೀಜ, ಗೊಬ್ಬರ ತಂದ ಹಾಕಿದ್ದೆ. ಇನ್ನೇನು ಛಲೋ ಮಳಿ ಅಗಿ, ಕಡ್ಲಿ ಬೆಳಿ ಬಂದ ಕಷ್ಟ ಕಳಿತೈತಿ ಅಂದಕೊಂಡಿದ್ದೆ. ಈಗ ನೋಡಿದ್ರ ಸಾಲದ ಹೊರಿ ತೆಲಿ ಮ್ಯಾಲೆ ಕುಂತ, ಚಿಂತಿ ತಂದಿಟ್ಟೈತಿ ಎಂದು ರೈತರು ಗೋಳಾಡುತ್ತಿದ್ದಾರೆ.

ಸರ್ಕಾರ ರೈತರ ಸಾಲ ಮನ್ನಾ ಮಾಡತೀನಿ ಅಂತಾನ ಕಾಲ ಕಳ್ಯಾಕ ಹತ್ತೇತಿ. ಮತ್ತೂಂದ ಕಡಿ ಬರ ಬಿದ್ದ ಬೆಳಿ ಹಾಳಾದ್ರ ಬೆಳಿ ವಿಮಾ ಪರಿಹಾರ ಕೊಡತೀವಿ ಅಂತಾ ಹೇಳಿ ಸಾವಿರಾರ ರೂ. ಕಟ್ಟಿಸಿಕೊಂಡ್ರೂ ನಮಗ ಬೆಳೆ ನಷ್ಟ ಆದ್ರೂ ಪರಿಹಾರ ಕೊಟ್ಟಿಲ್ಲ. ಇನ್ನ ಕೆಲವು ರೈತರು ಮಳಿ ಗ್ಯಾರಂಟೀದಲ್ಲ ಅಂತ ಅನಕೊಂಡ ಬಿತ್ತಾಕ ಹೋಗ್ಲಿಲ್ಲ. ಈಗ ನೋಡಿದ್ರ ಅವ್ರ ಶಾಣ್ಯಾರ ಅನಸಾಕತೆತಿ. ಬಿತ್ತಾಕ ದಣಿವಿಲ್ಲ, ಹಣ ಖರ್ಚಾಗ್ಲಿಲ್ಲ, ಬೆಳಿ ಒಣಗಲಿಲ್ಲ, ಸಾಲ ತೆಲಿ ಮ್ಯಾಲ ಕುಂಡ್ರಲಿಲ್ಲ ಎಂದು ಮತ್ತೆ ಕೆಲವು ರೈತರು ಸಮಾಧಾನ ಹೇಳಿಕೊಳ್ಳುವ ಮೂಲಕ ಭೀಕರ ಬರದ ನಡುವೆಯೇ ಕೆಲ ಅನ್ನದಾತರು ಬಚಾವಾದರು ಎಂದು ಹೇಳುವಾಗ ಎದೆಯಲ್ಲಿನ ನೋವು ಅವರನ್ನು ಬಾಧಿಸುತ್ತಿರುವುದು ಮಾತಿನಲ್ಲೇ ಸ್ಪಷ್ಟವಾಗಿತ್ತು.

ರೊಕ್ಕ ಹಾಕಿ ಬಿತ್ತಿನ ನಮ್ಮ ಕತಿ ಹಿಂಗಾದ್ರ ಇನ್ನ ಕೆಲವ್ರು ಒಣಗಿ ನಿಂತ ಜ್ವಾಳದ ಕಣಕಿ ಕಿತ್ತ ದನಕ್ಕ ಹಾಕಾಕಾ ಹತ್ಯಾರ. ಮತ್ತ ಕೆಲವು ರೈತರು ನಮ್ಮ ಜೀವನ್ಕ ಆಸರ ಆಗಿರುವ ದನ-ಕರಗಳಿಗೂ ಕಣಕಿ, ಹೊಟ್ಟ ಇಲ್ದಂಗಾಗೇತಿ. ಒಂದಿಷ್ಟ ಮಂದೆಂತೂ ಮೇವು ಇಲ್ದಕ್ಕ ತುಟ್ಟಿ ದನ-ಕರನೆಲ್ಲ ಸಿಕ್ಕ ಸಿಕ್ಕ ರೇಟಿಗೆ ಮಾರಿ, ನಷ್ಟ ಅನುಭವಿಸಿ ಕಣ್ಣೀರ ಹಾಕ್ಕೊಂತ ಮನಿಗೆ ಬಂದಾರ. ಹಿಂಗಾದ್ರ ನಾಡಿಗೆ ಅನ್ನ ಕೊಡೋ ಅನ್ನದಾತ ಬದುಕೋದಾದ್ರೂ ಹೆಂಗ.

Advertisement

ಎಲ್ಲಾರೂ ಬರ ಅಧ್ಯಯನ ಮಾಡ್ತೀವಿ, ಪರಿಹಾರ ಕೊಡಸ್ತೀವಿ ಅಂತ ಹೇಳಿ ಹೊದಾವ್ರ ಮತ್ತ, ಹೊಳ್ಳಿ ಇತ್ಲಾಗ ತೆಲಿ ಹಾಕಿಲ್ಲ. ಅನ್ನದಾತನ ಕಥೀನ ಹಿಂಗಾದ್ರ ನಾಡು ಅನ್ನ ಕಾಣೂದಾದ್ರೂ ಹೆಂಗ್‌ ಎಂದು ಬೀರಪ್ಪ ಗೂಳಪ್ಪ ಹಾಲಕನೂರ ಹೇಳುವಾಗ ಗಂಟಲು ಕಟ್ಟಿಕೊಳ್ಳುತ್ತ, ನಾಲಿಗೆ ಒಣಗುತ್ತಿತ್ತು.

ಹೀಗೆ ಇಡಿ ಜಿಲ್ಲೆ ಭೀಕರ ಬರದಿಂದ ತತ್ತರಿಸಿದ್ದು, ಸರ್ಕಾರ, ರಾಜಕೀಯ ಪಕ್ಷಗಳ ನಾಯಕರು ತಂಡ ತಂಡವಾಗಿ ಬಂದು, ಬರ ಅಧ್ಯಯನ ಮಾಡ್ತೀವಿ ಎನ್ನುವ ಮಾತುಗಳು ಅನ್ನದಾತರಲ್ಲಿ ಭರವಸೆ ಮೂಡಿಸುವ ಬದಲು, ಸಿಟ್ಟು ತರಿಸತೊಡಗಿದೆ.

ನಮ್ಮ ಭಾಗದ ಈ ಜಮೀನಿನಲ್ಲಿ ಮುಂಗಾರು ಬೆಳೆ ಬರುವುದಿಲ್ಲ. ಹೀಗಾಗಿ ಹಿಂಗಾರಿ ಬೆಳೆ ಮಾತ್ರ ಬೆಳೆಯಲು ಸಾಧ್ಯ. ಇಂಥ ನೆಲದಲ್ಲಿ 12 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿರುವ ಒಟ್ಟು ಖರ್ಚೆ 80 ಸಾವಿರ ರೂ. ಆಗಿದ್ದು ಖಾಲಿ ಚೀಲ ಮಾರಿ ಜೀವನ ನಡೆಸಬೇಕಾದ ದುಸ್ಥಿತಿ ಇದೆ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ.
•ಗುರುಪ್ಪ ಪದಮಗೊಂಡ, ಮನಗೂಳಿ ರೈತ

ಬಿತ್ತನೆ ಮಾಡಿದ್ದ ತೊಗರಿ ಬೆಳಿ ಎಲ್ಲ ಒಣಗಿ, ಹೋಗಿರುವ ಕಾರಣ 50 ಸಾವಿರ ರೂ. ಖರ್ಚು ಮಾಡಿರುವ ನಾನು, ಬೆಳೆ ಬಾರದೇ ಕಂಗಲಾಗಿದ್ದೇನೆ. ಮುಂದೆ ಜೀವನ ನಡೆಸುವುದು ಹೇಗೆ ಎಂಬುದೇ ತಿಳಿಯದಾಗಿ ಭವಿಷ್ಯ ಕತ್ತಲಾಗಿದೆ.
•ಬಸಪ್ಪ ಆಮೋಘಿ ಕೋಟಗೊಂಡ, ಮನಗೂಳಿ ರೈತ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next