ಚಿಕ್ಕಮಗಳೂರು: ಕಾಶ್ಮೀರ ಕಣಿವೆಯ ತ್ರಿತ್ವಾಲ್‌ನ ನವೀಕೃತ ಶ್ರೀ ಶಾರದಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಶ್ರೀ ಶಾರದಾದೇವಿ ವಿಗ್ರಹಕ್ಕೆ ಶೃಂಗೇರಿ ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ವಿಜಯದಶಮಿ ಶುಭದಿನದಂದು ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಶಾರದಾ ಸಂರಕ್ಷಣಾ ಸಮಿತಿಗೆ ಹಸ್ತಾಂತರಿಸಿದರು.
ಶ್ರೀ ಶಾರದಾದೇವಿ ವಿಗ್ರಹ ಪಂಚಲೋಹದಿಂದ ತಯಾರಿಸಿದ್ದು, 3 ಅಡಿ ಎತ್ತರ, 100 ಕೆಜಿ ತೂಕ ಒಳಗೊಂಡಿದೆ. ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ಬುಧವಾರ ಬೆಳಗ್ಗೆ ಶಾರದಾದೇವಿ ಮೂರ್ತಿಗೆ ಶ್ರೀಮಠದ ಆವರಣದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅನಂತರ ಶ್ರೀ ಶಾರದಾ ಸಂರಕ್ಷಣ ಸಮಿತಿ ಮುಖ್ಯಸ್ಥ ಎಸ್. ರವೀಂದರ್ ಪಂಡಿತ್ ಅವರಿಗೆ ವಿಗ್ರಹವನ್ನು ನೀಡಿದರು.
ಶ್ರೀ ಶಾರದಾ ಸಂರಕ್ಷಣ ಸಮಿತಿ ಮುಖ್ಯಸ್ಥ ಎಸ್. ರವೀಂದರ್ ಪಂಡಿತ್ ಮಾತನಾಡಿ, 1947ರಲ್ಲಿ ಕಾಶ್ಮೀರದ ತ್ರಿತ್ವಾಲ್‌ನಲ್ಲಿ ಕಳೆದು ಹೋದ ಪರಂಪರೆಯನ್ನು ಮರಳಿ ಪಡೆಯಲು ಶೃಂಗೇರಿ ಶ್ರೀ ಶಾರದಾ ಮಠ ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞನಾಗಿದ್ದೇನೆ.
1947ರಲ್ಲಿ ಕಬಾಲಿ ದಾಳಿಯಿಂದ ನಶಿಸಿ ಹೋಗಿದ್ದ ತ್ರಿತ್ವಾಲ್‌ನಲ್ಲಿ ಧರ್ಮಶಾಲಾ ಮತ್ತು ಗುರುದ್ವಾರವಿತ್ತು. 2021ರ ಸೆಪ್ಪೆಂಬರ್‌ನಲ್ಲಿ ನಡೆದ ವಾರ್ಷಿಕ ಯಾತ್ರೆಯಲ್ಲಿ ಸ್ಥಳೀಯರಿಂದ ಭೂಮಿಯನ್ನು ಪಡೆದುಕೊಂಡಿದ್ದೇವೆ. ಅಲ್ಲಿ ಶ್ರೀ ಶಾರದಾದೇವಿ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದರು.
ಈ ಪಾರಂಪರಿಕ ದೇವಾಲಯದ ಕಾಮಗಾರಿ ನವೆಂಬರ್ ಮಾಸಾಂತ್ಯದಲ್ಲಿ ಪೂರ್ಣಗೊಳ್ಳಲಿದ್ದು, ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜಾ ವಿ ಧಿವಿಧಾನಗಳು ಮುಂದಿನ ವರ್ಷ ಆರಂಭವಾಗಲಿವೆ.
ಮೂರ್ತಿಯನ್ನು ಮುಂದಿನ ವರ್ಷ ಆರಂಭದಲ್ಲಿ ತ್ರಿತ್ವಾಲ್‌ಗೆ ಕೊಂಡೊಯ್ಯಲಾಗುತ್ತದೆ ಎಂದರು. ಶ್ರೀಮಠದ ಆಡಳಿತಾ ಧಿಕಾರಿ ಗೌರಿಶಂಕರ್ ಸೇರಿದಂತೆ ಕಾಶ್ಮೀರಿ ಪಂಡಿತರು ಇದ್ದರು.