Advertisement

Karnataka: ಲೋಕ ಚುನಾವಣೆವರೆಗೆ ಕೈ ಕಾರ್ಯಕರ್ತರಿಗೆ ಇಲ್ಲ ನಿಗಮ

01:10 AM Feb 12, 2024 | Pranav MS |

ಬೆಂಗಳೂರು: ನಿಗಮ ಮಂಡಳಿ ಗಳಲ್ಲಿ ಅಧಿಕಾರ ಭಾಗ್ಯ ಪಡೆಯುವ ಕನಸು ನನಸಾಗಲು ಕಾಂಗ್ರೆಸ್‌ ಕಾರ್ಯಕರ್ತರು ಇನ್ನಷ್ಟು ದಿನ ಕಾಯುವುದು ಅನಿವಾರ್ಯ. ಸ್ಥಾನಮಾನ ನೀಡುವ ಸಂದರ್ಭದಲ್ಲೇ ಕಾರ್ಯಕರ್ತರಿಗೂ ಹುದ್ದೆಗಳನ್ನು ನೀಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಹೈಕಮಾಂಡ್‌ ನಡುವೆ ಈ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ.

Advertisement

ಸೋಮವಾರ ವಿಧಾನ ಮಂಡಲದ ಅಧಿ ವೇಶನ ಆರಂಭಗೊಳ್ಳಲಿದ್ದು, 2 ವಾರಗಳ ಕಾಲ ನಡೆಯಲಿದೆ. ಅದರ ಬೆನ್ನಲ್ಲೇ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡು ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಆ ಬಳಿಕ ಚುನಾವಣೆ ಮುಕ್ತಾಯಗೊಳ್ಳುವ ತನಕ ನಿಗಮ ಮಂಡಲಿಗಳ ನೇಮಕ ನಡೆಯುವ ಸಾಧ್ಯತೆಗಳಿಲ್ಲ.

3ರಿಂದ 4 ತಿಂಗಳ ಕಸರತ್ತಿನ ಬಳಿಕ ಜ. 26 ರಂದು 34 ಶಾಸಕರಿಗೆ ನಿಗಮ ಮಂಡಳಿಯ ಆಧಿಕಾರ ಕೊಟ್ಟು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು. ಈ ಮೊದಲು ಕಾರ್ಯಕರ್ತರಿಗೂ ಸ್ಥಾನಮಾನ ನೀಡುವ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಆದರೆ ಒಮ್ಮತ ಮೂಡದೆ ಮೊದಲು ಶಾಸಕರ ಪಟ್ಟಿ ಬಿಡುಗಡೆ ಮಾಡಿ ಆ ಬಳಿಕ ಕಾರ್ಯಕರ್ತರ ಬಗ್ಗೆ ಚರ್ಚೆ ನಡೆಸುವ ತೀರ್ಮಾನಕ್ಕೆ ಬರಲಾಗಿತ್ತು.

ಪ್ರಗತಿ ಇಲ್ಲ
ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಪ್ರಕ್ರಿಯೆಯಲ್ಲಿ ಕಳೆದೆರಡು ವಾರಗಳಿಂದ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಕಾರ್ಯ ಕರ್ತರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡುವ ಬಗ್ಗೆ ಹೈಕಮಾಂಡ್‌ ಒಲವು ಹೊಂದಿದೆ. ಆದರೆ ಹೈಕಮಾಂಡ್‌ ಮಟ್ಟದಲ್ಲಿ ಪ್ರಬಲರಾಗಿರುವ ನಾಯಕರೊಬ್ಬರು ಕಾರ್ಯಕರ್ತರ ಕೋಟಾದಲ್ಲಿ ಕೆಲವು ಹೆಸರುಗಳನ್ನು ಸೂಚಿಸಿದ್ದರು. ಅವುಗಳ ಬಗ್ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆಯೇ ನನೆಗುದಿಗೆ ಬಿದ್ದಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next