Advertisement

Valmiki Nigama Scam ತನಿಖೆ ಸಿಬಿಐಗೆ ಒಪ್ಪಿಸಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

01:16 AM Jul 25, 2024 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವ ವಾಲ್ಮೀಕಿ ನಿಗಮದ ಹಗರಣ ತನಿಖೆಯನ್ನು ಸಿಬಿಐ ಮೂಲಕ ನಡೆಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ನಿಗಮದಲ್ಲಿ ಉಂಟಾಗಿರುವ ಈ ಹಗರಣದಿಂದಾಗಿ ಫ‌ಲಾನುಭವಿಗಳಿಗೆ ಸಿಗಬೇಕಾದ ಮೂಲಸೌಕರ್ಯಗಳನ್ನು ಕಿತ್ತುಕೊಂಡಂತಾಗಿದೆ. ನಿಗಮದಲ್ಲಿ ನಡೆಯಬೇಕಾಗಿದ್ದ ನೇಮಕಾತಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಹಾಗೂ ಇತರ ಅಭಿವೃದ್ಧಿ ಕೇಂದ್ರಿತ ಯೋಜನೆಗಳು ಹಗರಣದಿಂದಾಗಿ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. ಇದೊಂದು ವ್ಯವಸ್ಥಿತ ಲೂಟಿ ಎಂದು ಆರೋಪಿಸಿದರು.

ಕನ್ನಡದಲ್ಲಿ ಮಾತನಾಡಿದ ಅವರು, ನಿಗಮದ ಅಧಿಕಾರಿಯೊಬ್ಬರ ಸಾವಿನ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಹಗರಣಕ್ಕೆ ಸಂಬಂಧಿಸಿದ 40 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ನಿರ್ದಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಕೆ ಮಾಡಿರುವುದು ಆ ಸಮುದಾಯಕ್ಕೆ ಮಾಡಿದ ದ್ರೋಹ.

ಈ ಪ್ರಕರಣವನ್ನು ಮುಚ್ಚಿ ಹಾಕುವ ಮೊದಲು ಅದನ್ನು ಸಿಬಿಐಗೆ ಒಪ್ಪಿಸಿ, ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಪಕ್ಷವೇ ಅಸಂವಿಧಾನಿಕ ಚಟುವಟಿಕೆಯಲ್ಲಿ ತೊಡಗಿದೆ ಎಂದು ಗುಡಗಿದರು. ಕೆಲ ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಇದೇ ವಿಚಾರದ ಬಗ್ಗೆ ಕೆನರಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದರು.

ರಾಜ್ಯಕ್ಕೆ ಸಂಬಂಧಪಟ್ಟ ಪ್ರಕರಣ ರಾಜ್ಯದಲ್ಲಿಯೇ ಬಗೆಹರಿಸಿಕೊಳ್ಳಿ: ಖರ್ಗೆ
ಸಂಸದ ಕಡಾಡಿ ಪ್ರಸ್ತಾವಕ್ಕೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದರು. ರಾಜ್ಯದ ಪ್ರಕರಣಗಳನ್ನು ರಾಜ್ಯಸಭೆಯಲ್ಲಿ ಮಾತನಾಡುವುದು ಸಮಂಜಸವಲ್ಲ. ರಾಜ್ಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಆಯಾ ರಾಜ್ಯದ ವಿಧಾನಸಭೆಗಳಲ್ಲಿ ಮಂಡಿಸಿ ಬಗೆಹರಿಸಿಕೊಳ್ಳಬೇಕು. ಇಂಥವುಗಳಿಗೆ ಅವಕಾಶ ಕೊಟ್ಟರೆ ಇತರ ರಾಜ್ಯಗಳಲ್ಲಿ ನಡೆಯುವ ಕೊಲೆ ಮತ್ತಿತರ ಪ್ರಕರಣಗಳೂ ಮೇಲ್ಮನೆಯಲ್ಲಿ ಚರ್ಚೆ ಆಗಬೇಕಾದ್ದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next