ನಾನು ಪ್ರಥಮ ಪಿಯುಸಿ ಓದುತ್ತಿದ್ದ ಸಮಯ. ನಾನು ಮತ್ತು ನನ್ನ ಸ್ನೇಹಿತ ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದೆವು. ಪ್ರತಿದಿನ ತುಂಟಾಟ ಮಾಡಿ ಶಿಕ್ಷಕರಿಂದ ಬಯ್ಸಿಕೊಳ್ಳುತ್ತಿದ್ದೆವು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದಿದ್ದರೆ ಪಾಲಕರನ್ನು ಕರೆದುಕೊಂಡು ಬರಬೇಕು ಎಂದು ಶಿಕ್ಷಕರು ನಮಗಿಬ್ಬರಿಗೂ ತಾಕೀತು ಮಾಡಿದ್ದರು. ಅವರು ಹೇಳಿದ್ದನ್ನು ಕೇಳಿ ಭೂಕಂಪ, ಸುನಾಮಿಯೆಲ್ಲಾ ಒಮ್ಮೆಲೇ ಬಡಿದಂತಾಯ್ತು.
ಸರಿ, ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆಯೋಣ ಅಂದುಕೊಂಡರೆ ಇತಿಹಾಸದ ಇಸವಿಗಳು, ಹೆಸರುಗಳು ಒಂದೂ ನೆನಪಲ್ಲಿ ಉಳಿಯುತ್ತಿರಲಿಲ್ಲ. ಇತಿಹಾಸ ಪರೀಕ್ಷೆಗೆ ಎರಡೇ ದಿನ ಬಾಕಿ ಉಳಿದಿತ್ತು. ಮೊದಲ ಪರೀಕ್ಷೆಗಳಲ್ಲಿ ನಮ್ಮಿಬ್ಬರ ಬೆಂಚ್‌ಗಳು ಹಿಂದೆ ಮುಂದೆ ಬಂದಿದ್ದವು. ಅದೇ ಧೈರ್ಯದ ಮೇರೆಗೆ ನಾವಿಬ್ಬರೂ ಇತಿಹಾಸ ಪರೀಕ್ಷೆಯ ದಿನ ಅರ್ಧ ಪುಸ್ತಕವನ್ನು ಅವನು, ಉಳಿದರ್ಧ ಪುಸ್ತಕವನ್ನು ನಾನು ಕಾಪಿ ಮಾಡಿಕೊಂಡು ಹೋದೆವು. ನಮ್ಮ ದುರದೃಷ್ಟಕ್ಕೆ ನನ್ನ ನಂಬರ್ ಮೊದಲ ಬೆಂಚಲ್ಲಿ ಮತ್ತು ಅವನದ್ದು ಕೊನೆಯ ಬೆಂಚಲ್ಲಿ ಬಂದಿತ್ತು. ಬೆಂಚ್ ನಂಬರ್‌ಗಳು ನಮ್ಮ ಆಶಾಗೋಪುರವನ್ನೇ ಕುಸಿಯುವಂತೆ ಮಾಡಿತ್ತು.
ಹಾಗಂತ, ಧೃತಿಗೆಡುವ ಹಾಗಿರಲಿಲ್ಲ. ಹೇಗಾದರೂ ಮಾಡಿ ಪಾಸಾಗಬೇಕೆಂದು ಒಂದು ನಿರ್ಣಯಕ್ಕೆ ಬಂದೆವು. ನನ್ನ ಸ್ನೇಹಿತನ ಬೆಂಚ್ ಬಾಗಿಲ ಬಳಿ ಇದ್ದಿದ್ದರಿಂದ, “ಮೇಲ್ವಿಚಾರಕರು ಹೊರಗೆ ಹೋದಾಗ ಕೆಮ್ಮುವುದರ ಮೂಲಕ ಸಿಗ್ನಲ್ ಕೊಡು. ಆಗ ಕಾಪಿ ವರ್ಗಾವಣೆ ಮಾಡಿಕೊಳ್ಳೋಣ’ ಎಂದು ಹೇಳಿದೆ. ಹಾಗೆ ಮಾಡಿ ಎರಡು ಸಲ ಯಶಸ್ವಿಯಾದೆವು ಕೂಡ. ಆದರೆ, ಒಂದು ಬಾರಿ ಮೇಲ್ವಿಚಾರಕರು ಸದ್ದೇ ಆಗದಂತೆ ಮೆಲ್ಲನೆ ನಡೆದುಕೊಂಡು ಹೋಗಿ ನನ್ನ ಸ್ನೇಹಿತನ ಬಳಿ ನಿಂತಿದ್ದರು. ಅವರಿಗೆ ಗೊತ್ತಾಗಿಯೋ, ಗೊತ್ತಿಲ್ಲದೆಯೋ ಒಮ್ಮೆ ಕೆಮ್ಮಿಬಿಟ್ಟರು. ತಕ್ಷಣ ನಾನದನ್ನು ಸಿಗ್ನಲ್ ಎಂದು ಭಾವಿಸಿ ನನ್ನಲ್ಲಿದ್ದ ಕಾಪಿಚೀಟಿಯನ್ನು ನನ್ನ ಸ್ನೇಹಿತನ ಕಡೆಗೆ ಎಸೆದು ಬಿಟ್ಟೆ!
ರೆಡ್‌ಹ್ಯಾಂಡ್ ಆಗಿ ಇಬ್ಬರೂ ಸಿಕ್ಕಿಬಿಟ್ಟೆವು. ಕೋಪದಿಂದ ನಮ್ಮ ಪತ್ರಿಕೆಗಳನ್ನು ಕಸಿದುಕೊಂಡ ಅವರು ನಮ್ಮನ್ನು ಪ್ರಿನ್ಸಿಪಾಲರ ಬಳಿ ಕಳಿಸಿದರು. ಕೊನೆಗೆ ಪ್ರಿನ್ಸಿಪಾಲರ ಮುಂದೆ ಗೋಳಾಡಿ ಕ್ಷಮೆ ಗಿಟ್ಟಿಸಿಕೊಳ್ಳುವಾಗ ಸಾಕು ಸಾಕಾಗಿ ಹೋಯ್ತು.
– ಮಹಾಂತೇಶ ದೊಡವಾಡ