ದಾವಣಗೆರೆ: ಪ್ರಕೃತಿ ವಿಕೋಪ, ಕೊರೊನಾ ಸಂಕಷ್ಟದ ನಡುವೆಯೂ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಇಲ್ಲ. ಹೊಸ ತೆರಿಗೆಯ ಪ್ರಸ್ತಾಪವೂ ಇಲ್ಲ. ಎಲ್ಲ ವರ್ಗ, ಜಿಲ್ಲೆ, ವಲಯಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಪಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಒಳ್ಳೆಯ ಬಜೆಟ್‌ನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಂಡನೆಯಾದ ಬಜೆಟ್‌ನಲ್ಲಿ ಮಹಿಳೆಯರ ಸ್ವಾವಲಂಬನೆ, ಉದ್ಯಮಶೀಲತೆ, ಅಭ್ಯುದಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿ ದರದಲ್ಲಿ 2 ಕೋಟಿಯವರೆಗೆ ಸಾಲ ಸೌಲಭ್ಯ ನೀಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮೂಲಕ 6 ಸಾವಿರ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವು, ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳ ಪ್ರವೇಶ ಮೀಸಲಾತಿ ಶೇ. 40 ರಿಂದ 50ಕ್ಕೆ ಹೆಚ್ಚಿಸಲಾಗಿದೆ. ಸಣ್ಣ ಟ್ರ್ಯಾಕ್ಟರ್‌ಗಳಿಗೆ ನೀಡುತ್ತಿದ್ದ ಸಹಾಯ ಧನ 25-45 ಎಚ್‌ಪಿ ಟ್ರ್ಯಾಕ್ಟರ್‌ಗಳಿಗೆ ವಿಸ್ತರಣೆ ಮಾಡಿದ್ದಾರೆ. ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭ ಒಳಗೊಂಡಂತೆ ರೈತಾಪಿ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳಿಗೆ 21 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಕೃಷ್ಣ ಭಾಗ್ಯ ಜಲ ನಿಗಮದ ಎಲ್ಲ ಯೋಜನೆಗಳಿಗೆ 5,500 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಕೃಷಿ ಮತ್ತು ಪೂರಕ ಚಟುವಟಿಕೆಗೆ 31.028 ಕೋಟಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 62,150 ಕೋಟಿ, ಆರ್ಥಿಕ ಅಭಿವೃದ್ಧಿ ಪ್ರಚೋದನೆಗೆ 52,529 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7,795 ಕೋಟಿ. ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಲ ರಕ್ಷಣೆಗೆ 2,645 ಕೋಟಿ. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ 52,519 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ, ಕೃಷಿ ಕಾಲೇಜು, ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಮನವಿ ಸಲ್ಲಿಸಲಾಗಿತ್ತು. ಆರ್ಥಿಕ ಇತಿಮಿತಿಯ ಕಾರಣಕ್ಕೆ ನೀಡಿಲ್ಲ. ಇನ್ನೂ ಮೂರು ಬಜೆಟ್ ಮಂಡನೆ ಆಗಲಿವೆ. ಖಂಡಿತವಾಗಿಯೂ ಎಲ್ಲಾ ಬೇಡಿಕೆ ಈಡೇರಿಸುವರು ಎಂಬ ವಿಶ್ವಾಸ ಇದೆ. ಜಯದೇವ ಹೃದ್ರೋಗ ಸಂಸ್ಥೆಯ ಉಪ ಕೇಂದ್ರ ಮಂಜೂರು ಮಾಡಿರುವುದರಿಂದ ಮಧ್ಯ ಕರ್ನಾಟಕದ ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಉಪಾಧ್ಯಕ್ಷ ಮಂಜಾನಾಯ್ಕ, ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಮಾಧ್ಯಮ ವಕ್ತಾರ ಡಿ.ಎಸ್. ಶಿವಶಂಕರ್, ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿದ್ದರು.