Advertisement

ಸಹಿ ಮಾಡೋದೊಂದೇ ಸಾಕ್ಷರತೆಯಲ್ಲ

11:34 AM Feb 06, 2019 | |

ಹಾನಗಲ್ಲ: ಜಾಗತಿಕ ಮಟ್ಟದಲ್ಲಿರುವ ಸ್ಪರ್ಧೆ ಎದುರಿಸಲು ಮೊದಲು ಅಕ್ಷರ ಜ್ಞಾನದ ಅಗತ್ಯವಿದ್ದು, ಅದರೊಂದಿಗೆ ಜೀವನ ಶಿಕ್ಷಣ ಪಡೆಯಬೇಕು ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Advertisement

ಮಂಗಳವಾರ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ ಸಾಕ್ಷರತಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆಭಿವೃದ್ಧಿಗೆ ಮೊದಲು ಶೈಕ್ಷಣಿಕ ಅಭಿವೃದ್ಧಿಯಾಗಬೇಕು. ರಾಜ್ಯದಲ್ಲಿ 2 ಲಕ್ಷ ಜನ ಇನ್ನೂ ಅಕ್ಷರ ಜ್ಞಾನವಿಲ್ಲದವರಿದ್ದಾರೆ ಎಂಬುದೇ ಕಳವಳ ಸಂಗತಿ. ಪಕ್ಕದ ಕೇರಳ ರಾಜ್ಯದಲ್ಲಿ ಹಲವು ದಶಕಗಳಾಚೆಯೇ ಸಾಕ್ಷರತೆ ಸಾಮಾನ್ಯ ಮನುಷ್ಯನನ್ನೂ ಓದುಗನನ್ನಾಗಿಸಿದೆ. ಸಾಕ್ಷರತೆ ಎಂದರೆ ಕೇವಲ ಸಹಿ ಮಾಡುವುದಲ್ಲ. ಓದು ಬರೆಯಲು ತಿಳಿಯುವುದು. ಸಾಮಾಜಿಕವಾಗಿ ಎಲ್ಲವನ್ನೂ ಅಕ್ಷರದ ಮೂಲಕ ತಿಳಿಯುವುದೇ ಆಗಿದೆ. ಈಗಲಾದರೂ ಸರ್ಕಾರ ಒದಗಿಸುವ ಸೌಲಭ್ಯ ಬಳಸಿಕೊಂಡು ಸಾಕ್ಷರತೆ ಶೇಕಡಾ ನೂರರಷ್ಟು ತಲುಪಲಿ. ಮಾನವ ಸಂಪನ್ಮೂಲದ ಸದುಪಯೋಗ ಹಾಗೂ ದೇಶದ ಹಿತಕ್ಕಾಗಿ ನಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದರು.

ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ಎಸ್‌.ಆರ್‌.ತುಪ್ಪದ ಪ್ರಾಸ್ತಾವಿಕ ಮಾತನಾಡಿ, ಸಾಕ್ಷರ ಭಾರತ ಯೋಜನೆಯ ನಂತರ ಮೊಟಕುಗೊಂಡಿದ್ದ ಕಾರ್ಯಕ್ರಮ ಇದೀಗ ಮತ್ತೆ ಚುರುಕುಗೊಂಡಿದೆ. ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೊಳಚೆ ಪ್ರದೇಶದ ಮಹಿಳೆಯರಲ್ಲಿ ಅನಕ್ಷರತೆ ಹೆಚ್ಚು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಂಥ ಮಹಿಳೆಯರನ್ನು ಗುರುತಿಸಿ ತರಬೇತಿ ನೀಡಲು 4 ದಿನಗಳ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮಾತನಾಡಿ, ಸ್ತ್ರೀಶಕ್ತಿ ಸಂಘದ ಮಹಿಳೆಯರನ್ನು ಸಾಕ್ಷರರನ್ನಾಗಿಸುವುದರೊಂದಿಗೆ, ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಈ ಮೂಲಕ ಆರ್ಥಿಕ ಭದ್ರತೆ ಒದಗಿಸಬೇಕಾಗಿದೆ. ಸಾಕ್ಷರತಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲಾಗುವುದು. ಗ್ರಾಮಮಟ್ಟದ ಲೋಕಶಿಕ್ಷಣ ಸಮಿತಿ ಹಾಗೂ ವಾರ್ಡ್‌ ಮಟ್ಟದ ಸಮಿತಿ ರಚಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ 140 ಬೋಧಕರಿಗೆ ತರಬೇತಿ ನೀಡುವ ಯೋಜನೆ ಇದೆ. ಗ್ರಾಮೀಣ ಪ್ರದೇಶದ 1400 ಮಹಿಳೆಯರನ್ನು, ಪಟ್ಟಣ ಪ್ರದೇಶದ 650 ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಗುರಿ ಹಾಕಿಕೊಳ್ಳಲಾಗಿದೆ. 2021ರ ವರೆಗೆ ವಿವಿಧ ಸಾಕ್ಷರತಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತವೆ ಎಂದರು.

ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಚಂದ್ರಶೇಖರ ಕೂಸನೂರ, ಲೋಕಶಿಕ್ಷಣ ಸಮಿತಿ ಸದಸ್ಯರಾದ ಪ್ರೊ| ಮಾರುತಿ ಶಿಡ್ಲಾಪುರ, ವಿಜಯೇಂದ್ರ ಕನವಳ್ಳಿ, ಚೈತ್ರಾ ಕಂಬಾಳಿಮಠ, ಕೆ.ಎಚ್. ಶ್ರೀಧರ್‌, ಎಸ್‌.ಎನ್‌.ಸಾವಳಗಿ, ಪಿ.ಆರ್‌.ಚಿಕ್ಕಳ್ಳಿ, ಎನ್‌.ಎಸ್‌.ಮುಶಪ್ಪನವರ, ಭಾಲಚಂದ್ರ ಅಂಬಿಗೇರ, ಆರ್‌.ಜಯಲಕ್ಷ್ಮೀ  ಎಲ್‌.ಯು.ನಾಯ್ಕರ, ಸಿ.ಐ.ಪಾಟೀಲ, ಸಿ.ಎನ್‌.ಕಲಕೋಟಿ, ಎನ್‌.ಎಚ್.ಕರೇಗೌಡ್ರ, ಇಒ ಚನಬಸಪ್ಪ ಹಾವಣಗಿ, ಕ್ಷೇತ್ರಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್‌, ಪುರಸಭೆ ಸದಸ್ಯರಾದ ಖುರ್ಷಿದ್‌ ಹುಲ್ಲತ್ತಿ, ಎಂ.ಎಂ.ಬಡಗಿ ಇದ್ದರು. ತಾಲೂಕು ಸಾಕ್ಷರತಾ ಸಂಯೋಜಕ ಎಂ.ಎಸ್‌.ಬಡಿಗೇರ ಸ್ವಾಗತಿಸಿದರು.

Advertisement

ತಾಲೂಕಿನ 15 ಗ್ರಾಮ ಪಂಚಾಯತ್‌ಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಗ್ರಾಪಂಗಳ ವ್ಯಾಪ್ತಿಯ ಮಹಿಳಾ ಸಂಘಗಳ ಅನಕ್ಷರಸ್ಥ ಸದಸ್ಯರಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಬೇಕಿದೆ.
•ಎಸ್‌.ಆರ್‌.ತುಪ್ಪದ,
ಸಾಕ್ಷರತಾ ಸಂಪನ್ಮೂಲ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next